Asianet Suvarna News Asianet Suvarna News

ಶಾಸಕ ಸ್ಥಾನದಿಂದ ವಜಾ ಸಾಧ್ಯತೆ, ಪಕ್ಷ ಅಧಿಕಾರದಲ್ಲಿದ್ದರೂ ಸಿಎಂ ಆಗಿರಲು ಅಸಾಧ್ಯ: ಸೊರೇನ್‌ ಸ್ಥಿತಿ ಅಧೋಗತಿ

Hemant Soren likely to ousted: ಪಕ್ಷ ಅಧಿಕಾರದಲ್ಲಿದ್ದರೂ ಪಕ್ಷದ ಮುಖ್ಯಸ್ಥ ಮುಖ್ಯಮಂತ್ರಿಯಾಗಿ ಮುಂದುರೆಯಲು ಸಾಧ್ಯವಿಲ್ಲದಂತ ವಿಲಕ್ಷಣ ಪರಿಸ್ಥಿತಿಗೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಬೀಳುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಕಾಯ್ದೆ ಅನ್ವಯ ಸೊರೇನ್‌ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆಯಿದೆ.

election commission likely to suspend hemant soren as mla
Author
First Published Aug 26, 2022, 5:32 PM IST

ರಾಂಚಿ: ಅಪರೂಪದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿರುವ ಜಾರ್ಖಂಡ್‌ ರಾಜ್ಯದಲ್ಲಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಶಾಸಕ ಸ್ಥಾನದಿಂದ ಹೊರಬೀಳುವ ಸಾಧ್ಯತೆ ಸನ್ನಿಹಿತವಾಗಿದೆ. ಮೂಲಗಳ ಪ್ರಕಾರ ಹೇಮಂತ್‌ ಸೊರೇನ್‌ ಅವರನ್ನು ಶಾಸಕ ಸ್ಥಾನದಿಂದ ಚುನಾವಣಾ ಆಯೋಗ ವಜಾ ಮಾಡಿ ಅಧಿಕೃತ ಆದೇಶ ಹೊರಡಿಸಲಿದೆ. ಈ ಮೂಲಕ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವಂತಿಲ್ಲ. ಒಂದೋ ಅವರ ಆಪ್ತರನ್ನು ಮುಖ್ಯಮಂತ್ರಿಯಾಗಿ ಘೋಷಿಸಬೇಕು ಅಥವಾ ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಬೇಕು. ನಿರೀಕ್ಷೆಯಂತೆ ಚುನಾವಣಾ ಆಯೋಗ ಶಾಸಕ ಸ್ಥಾನದಿಂದ ವಜಾಗೊಳಿಸಿ ಆದೇಶಿಸಿದರೆ ಸೊರೇನ್‌ಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. 

ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ ಈ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅವರು ಚುನಾವಣೆ ಎದುರಿಸುವಂತಿಲ್ಲ ಅಥವಾ ಯಾವುದೇ ಸಂವಿಧಾನಾತ್ಮಕ ಹುದ್ದೆ ಅಲಂಕರಿಸುವಂತಿಲ್ಲ. ಅಂದರೆ ಅವರ ಪಕ್ಷ ಅಧಿಕಾರದಲ್ಲಿದ್ದರೂ ಅವರು ಮುಖ್ಯಮಂತ್ರಿಯಾಗುವುದು ಈ ವಿಧಾನಸಭೆ ವಿಸರ್ಜನೆಯಾಗುವ ವರೆಗೂ ಸಾಧ್ಯವೇ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಬೇರೆಯವರನ್ನು ದೀರ್ಘ ಕಾಲಕ್ಕೆ ನಂಬಿ ಅಧಿಕಾರ ಬಿಟ್ಟುಕೊಡುವುದೋ ಅಥವಾ ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗುವುದೋ ಎಂಬ ದ್ವಂದ್ವ ಹೇಮಂತ್‌ ಸೊರೇನ್‌ರನ್ನು ಕಾಡುತ್ತಿರಬಹುದು. ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ನಟನೆಯಲ್ಲಿ ತೆರೆ ಮೇಲೆ ಬಂದ ದಸ್ವಿ ಚಿತ್ರದ ಕತೆಯನ್ನು ನೆನಪಿಗೆ ತರುವಂತಾ ಬೆಳವಣಿಗೆ ಇದಾಗಿದೆ.

ದಸ್ವಿ ಚಿತ್ರದಲ್ಲಿ ಇದೇ ರೀತಿ ಭ್ರಷ್ಟಾಚಾರದ ಆರೋಪದಲ್ಲಿ ಶಾಸಕ ಸ್ಥಾನದಿಂದ ವಜಾಗೊಂಡು ಬಚ್ಚನ್‌ ಜೈಲು ಪಾಲಾಗುತ್ತಾರೆ. ಅಧಿಕಾರವನ್ನು ಹೆಂಡತಿಗೆ ಕೊಟ್ಟು ಮುಖ್ಯಮಂತ್ರಿ ಮಾಡುತ್ತಾನೆ. ಆದರೆ ನಂತರ ಹೆಂಡತಿಗೆ ಕುರ್ಚಿ ಮೇಲೆ ವ್ಯಾಮೋಹ ಆರಂಭವಾಗುತ್ತದೆ. ಗಂಡನ ವಿರುದ್ಧವೇ ಹೆಂಡತಿ ಅಧಿಕಾರದಾಸೆಗಾಗಿ ಪಿತೂರಿ ಮಾಡುತ್ತಾಳೆ. ನಂತರ ಬಚ್ಚನ್‌ ಮತ್ತೊಂದು ಪಕ್ಷದ ಜತೆ ಕೈಜೋಡಿಸಿ ಹೆಂಡತಿ ವಿರುದ್ಧವೇ ಚುನಾವಣೆ ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ: ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

ಜಾರ್ಖಂಡ್‌ ಇಂದಿನ ರಾಜಕೀಯ ಪರಿಸ್ಥಿತಿ ವಿಲಕ್ಷಣ ಕಥಾಹಂದರ ಹೊಂದಿರುವ ದಸ್ವಿ ಚಿತ್ರವನ್ನು ನೆನಪಿಸುತ್ತದೆ. ಹೇಮಂತ್‌ ಸೊರೇನ್‌ ಪಕ್ಷ ಚುನಾವಣೆ ಎದುರಿಸಿದರೂ ಭ್ರಷ್ಟಾಚಾರ ಆರೋಪ ಇನ್ನೂ ತಣ್ಣಗಾಗಿಲ್ಲವಾದ ಕಾರಣ ವಿರೋಧ ಪಕ್ಷ ಬಿಜೆಪಿಗೆ ಲಾಭದಾಯಕವಾಗಬಹುದು. ಮತ್ತು ಇನ್ನೂ ನಾಲ್ಕು ವರ್ಷ ಅಧಿಕಾರ ಇರುವಂತೆಯೇ ಚುನಾವಣೆಗೆ ಹೋಗಲು ಪಕ್ಷದ ಇತರೆ ಶಾಸಕರು ಹಿಂದೇಟು ಹಾಕಬಹುದು ಎಂದೂ ಅಂದಾಜಿಸಲಾಗಿದೆ. ಆದರೆ ದೀರ್ಘ ಕಾಲ ಅಧಿಕಾರದಿಂದ ದೂರವಿದ್ದರೆ ಜನಮಾನಸದಲ್ಲಿ ಮತ್ತು ಪಕ್ಷದೊಳಗೆ ಅವರ ವರ್ಚಸ್ಸು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಈ ಎಲ್ಲಾ ವಿಚಾರಗಳನ್ನೂ ಪರಿಗಣನೆಗೆ ಪಡೆದು ಸೊರೇನ್‌ ಮುಂದಿನ ನಿರ್ಣಯ ತಳೆಯಬೇಕಿದೆ. ಚುನಾವಣಾ ಆಯೋಗ ಒಂದು ವೇಳೆ ನಿರೀಕ್ಷೆಗೆ ವಿರುದ್ಧವಾಗಿ ಶಾಸಕ ಸ್ಥಾನದಲ್ಲೇ ಸೊರೇನ್‌ರನ್ನು ಮುಂದುವರೆಸಿದರೆ ಈ ಎಲ್ಲಾ ಲೆಕ್ಕಾಚಾರಗಳ ಅಗತ್ಯವೇ ಬೀಳುವುದಿಲ್ಲ. 

ಇದನ್ನೂ ಓದಿ: ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಶಾಸಕ ಸ್ಥಾನದಿಂದ ಅಮಾನತ್ತು ಸಾಧ್ಯತೆ; ಬಿಜೆಪಿ ವಿರುದ್ಧ ಆಕ್ರೋಶ

ನಿನ್ನೆ ಮಾಧ್ಯಮಗಳನ್ನು ಕಟುವಾಗಿ ಟೀಕಿಸಿದ್ದ ಸೊರೇನ್‌ ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ರಾಜ್ಯಪಾಲರಿಗೆ ನೀಡಿದ ವರದಿಯಲ್ಲೇನಿದೆ ಎಂದು ಮಾಧ್ಯಮಕ್ಕೆ ಹೇಗೆ ತಿಳಿಯಲು ಸಾಧ್ಯ. ಮಾಧ್ಯಮಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಈಗ ಶಾಸಕ ಸ್ಥಾನದಿಂದ ವಜಾಗೊಳ್ಳುವ ಸಾಧ್ಯತೆಯೇ ಇನ್ನೂ ದಟ್ಟವಾಗುತ್ತಿದೆ. 

Follow Us:
Download App:
  • android
  • ios