ನಟ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ ಬೆನ್ನಲ್ಲೇ ಹಲವು ಸಂಕಷ್ಟಗಳು ಎದುರಾಗಿತ್ತು. ಇದರಲ್ಲಿ ಜೆಡಿಎಸ್, ಕೆಲ ವಕೀಲರು ಕಿಚ್ಚ ಸುದೀಪ್ ಚಿತ್ರ, ಜಾಹೀರಾತು ಪ್ರಸಾರ ಮಾಡದಂತೆ ಆಯೋಗಕ್ಕೆ ಪತ್ರ ಬರೆದಿತ್ತು. ಆದರೆ ಈ ಕುರಿತು ಆಯೋಗ ಮಹತ್ವದ ನಿರ್ಧಾರ ಘೋಷಿಸಿದೆ.
ನವದೆಹಲಿ(ಏ.09): ಕರ್ನಾಟಕ ರಾಜಕೀಯ ರಂಗೇರುತ್ತಿದೆ.ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಾಕ್ಸಮರ, ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇದರ ನಡುವೆ ನಟ ಕಿಚ್ಚ ಸುದೀಪ್ ಬಿಜೆಪಿ ನಾಯಕರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಇದು ಮತ್ತೊಂದು ಸುತ್ತಿನ ರಾಜಕೀಯ ಹೋರಾಟಕ್ಕೆ ವೇದಿಕೆಯಾಗಿತ್ತು. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಬೆದರಿಕೆಯನ್ನು ಎದುರಿಸಿದ್ದರು. ಜೊತೆಗೆ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಲು ಘೋಷಿಸಿರುವ ಕಾರಣ, ಸುದೀಪ್ ಅವರ ಜಾಹೀರಾತು, ಸಿನಿಮಾ, ಪೋಸ್ಟರ್‌ಗೆ ತಡೆ ನೀಡಬೇಕು ಎಂದು ಜೆಡಿಎಸ್, ವಕೀಲರು ಸೇರಿ ಕೆಲವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದೀಗ ಕೇಂದ್ರ ಚುನಾವಣಾ ಆಯೋಗ ಈ ಕುರಿತು ಮಹತ್ವದ ಆದೇಶ ನೀಡಿದೆ. ಬಿಜೆಪಿ ಪ್ರರ ಪ್ರಚಾರ ಮಾಡುವ ಕಿಚ್ಚ ಸುದೀಪ್ ಅವರ ಜಾಹೀರಾತು, ಸಿನಿಮಾ ಪ್ರದರ್ಶನಕ್ಕೆ ಯಾವುದೇ ತಡೆ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸಿಎಂ ಬಸವರಾಜ್ ಬೊಮ್ಮಾಯಿ, ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಕಿಚ್ಚ ಸುದೀಪ್, ತಮ್ಮ ಕಷ್ಟದ ದಿನಗಳಲ್ಲಿ ಬಸವರಾಜ್ ಬೊಮ್ಮಾಯಿ ಕೈಹಿಡಿದ್ದಾರೆ. ನನಗೆ ನೆರವು ನೀಡಿದವರಿಗೆ ನಾನು ಸಹಾಯ ಮಾಡುತ್ತೇನೆ. ನಾನು ವ್ಯಕ್ತಿಗೆ ಗೌರವ ನೀಡುತ್ತೇನೆ. ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೇನೆ. ಬಸವರಾಜ್ ಬೊಮ್ಮಾಯಿ ಹಾಗೂ ಅವರು ಹೇಳುವ ನಾಯಕರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಘೋಷಿಸಿದ್ದರು. ಈ ಮೂಲಕ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು.
ಸುದೀಪ್ ಈ ಘೋಷಣೆ ಬಳಿಕ ಪರ ವಿರೋಧಗಳು ವ್ಯಕ್ತವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಜೊತೆಗೆ ಕಿಚ್ಚ ಸುದೀಪ್ ಟೀಕಿಸಿತ್ತು. ಇತ್ತ ಶಿವಮೊಗ್ಗದ ವಕೀಲ ಶ್ರೀಪಾಲ ಚುನಾವಣಾ ಆಯೋಗಕ್ಕೆ ಸುದೀಪ್ ವಿರುದ್ಧ ಪತ್ರ ಬರೆದಿದ್ದರು. ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಸುದೀಪ್ ಅವರ ಎಲ್ಲಾ ಚಿತ್ರಗಳು, ಜಾಹೀರಾತು, ಪೋಸ್ಟರ್ ತಡೆ ನೀಡಲು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ನಟ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮಗಿಯುವವರೆಗೆ ಅವರ ನಟನೆಯ ಚಿತ್ರ, ಜಾಹೀರಾತು, ಪೋಸ್ಟರ್ ಪ್ರದರ್ಶನವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಜೆಡಿಎಸ್ ದೂರು ನೀಡಿದೆ. ಸಿನಿಮಾ, ಜಾಹೀರಾತು, ಪೋಸ್ಟರ್ ಮುಂತಾದವುಗಳನ್ನು ಬಿತ್ತರಿಸಿದರೆ ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಯಾವುದೇ ಶೋ, ಭಾವಚಿತ್ರ ಇರುವ ಜಾಹೀರಾತು, ಸಿನಿಮಾ ಪ್ರಸಾರಕ್ಕೆ ತಡೆ ಹಿಡಿಯಬೇಕು ಎಂದು ಜೆಡಿಎಸ್ ಕಾನೂನು ವಿಭಾಗ ದೂರು ಸಲ್ಲಿಸಿತ್ತು.
