Asianet Suvarna News Asianet Suvarna News

ಮಹಾರಾಷ್ಟ್ರ ವಿಶ್ವಾಸಮತ ಯಾಚನೆ, ಏಕನಾಥ್‌ ಶಿಂಧೆ ಸರ್ಕಾರ ಪಾಸ್!


ದೊಡ್ಡ ಮಟ್ಟದ ಬಂಡಾಯದ ಬಳಿಕ ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ಏಕನಾಥ್‌ ಶಿಂಧೆ, ನಿರ್ಣಾಯಕವಾಗಿದ್ದ ವಿಶ್ವಾಸಮತ ಯಾಚನೆಯಲ್ಲಿ ಯಶಸ್ಸು ಪಡೆದುಕೊಂಡಿದ್ದು, 6 ತಿಂಗಳ ಕಾಲ ಅಧಿಕಾರ ಸೇಫ್‌ ಆಗಿದೆ.

eknath shinde government wins trust vote in Maharashtra san
Author
Bengaluru, First Published Jul 4, 2022, 11:26 AM IST

ಮುಂಬೈ (ಜುಲೈ 4): ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್‌ ಶಿಂಧೆ ಸರ್ಕಾರ ನಿರ್ಣಾಯಕವಾಗಿದ್ದ ವಿಶ್ವಾಸಮತ ಯಾಚನೆಯಲ್ಲಿ ಯಶಸ್ಸು ಕಂಡಿದ್ದಾರೆ. ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಬಿಜೆಪಿ ಸರ್ಕಾರದ ಅಧಿಕಾರ ಭದ್ರವಾಗಿದೆ.

ಸರ್ಕಾರದ ಪರವಾಗಿ 164 ಮತಗಳನ್ನು ಪಡೆಯುವ ಮೂಲಕ ಏಕನಾಥ್‌ ಶಿಂಧೆ ಬಹುಮತವನ್ನು ಸಾಬೀತು ಮಾಡಿದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತದ ಮಾರ್ಕ್ 144 ಆಗಿದೆ. ಕಳೆದ 15 ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದ ಏಕನಾಥ್‌ ಶಿಂಧೆ, ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಗೆ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದು ಮಾತ್ರವಲ್ಲದೆ, ಅಚ್ಚರಿಯ ರೀತಿಯಲ್ಲಿ ಮುಖ್ಯಮಂತ್ರಿ ಪಟ್ಟವನ್ನೂ ಸಂಪಾದನೆ ಮಾಡಿದ್ದರು.

ಇದಕ್ಕೂ ಮುನ್ನ ಭಾನುವಾರ ಸಂಜೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶಿವಸೇನೆಯ ತಮ್ಮ ಬಣದ ಶಾಸಕರೊಂದಿಗೆ ಮುಂಬೈನ ಹೋಟೆಲ್‌ನಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ಶಾಸಕರು ಮತ್ತು ಪಕ್ಷದ ಇತರ ಮುಖಂಡರೊಂದಿಗೆ ಸಭೆ ನಡೆಸಿ ವಿಶ್ವಾಸಮತ ಯಾಚನೆಗೆ ತಂತ್ರ ರೂಪಿಸಿದರು. . ಶಿಂಧೆ ಸರ್ಕಾರ 166 ಮತಗಳಿಂದ ಬಹುಮತ ಸಾಬೀತುಪಡಿಸಲಿದೆ ಎಂದು ಫಡ್ನವಿಸ್ ಈ ವೇಳೆ ಹೇಳಿದ್ದರು.

ಬಿಜೆಪಿಯ ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆ ಮಾಡಿದ ಬಳಿಕ ವಿಧಾನಸಭೆಯಲ್ಲಿ ಬಲಾಬಲದ ಪರೀಕ್ಷೆ ನಡೆದಿದೆ. 16 ಬಂಡಾಯ ಶಾಸಕರನ್ನು ಅನರ್ಹಮಾಡುವಂತೆ ಶಿವಸೇನೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯ ನಡುವೆ ವಿಶ್ವಾಸಮತ ಯಾಚನೆ ಯಶಸ್ವಿಯಾಗಿ ನಡೆದಿದೆ.  ಮಹಾರಾಷ್ಟ್ರ ವಿಧಾನಸಭೆಯ ನೂತನವಾಗಿ ನೇಮಕಗೊಂಡ ಸ್ಪೀಕರ್ ಭಾನುವಾರ ರಾತ್ರಿ ಶಿವಸೇನೆ ಶಾಸಕ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುಂಪಿನ ವಿಪ್ ಅನ್ನು ಶಿವಸೇನೆಯ ವಿಪ್ ಎಂದು ಗುರುತಿಸಿದ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಪಾಳಯವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಜುಲೈ 11 ರಂದು ವಿಚಾರಣೆಯನ್ನು ಮುಂದೂಡಿದೆ.

ಮುಂಬೈ ಜೀವವೈವಿಧ್ಯತೆ ಕಾಪಾಡಲು ಆರೇ ಮೆಟ್ರೋ ಶೆಡ್‌ಗೆ ವಿರೋಧ: ಆದಿತ್ಯ ಠಾಕ್ರೆ

ಶಿಂಧೆ ಕ್ಯಾಂಪ್‌ ಸೇರಿದ ಸಂತೋಷ್‌ ಬಂಗಾರ್‌:
ವಿಶ್ವಾಸ ಮತ ಯಾಚನೆಗೂ ಮುನ್ನ ಉದ್ಧವ್‌ ಠಾಕ್ರೆ ಬಣದ ಶಿವಸೇನೆಗೆ ಅಘಾತ ಉಂಟಾಗಿದ್ದು, ಇಲ್ಲಿಯವರೆಗೂ ಉದ್ಧವ್‌ ಠಾಕ್ರೆ ಜೊತೆ ಗುರುತಿಸಿಕೊಂಡಿದ್ದ ಶಾಸಕ ಸಂತೋಷ್‌ ಬಂಗಾರ್‌, ಸೋಮವಾರ ಬೆಳಗ್ಗೆ ಶಿಂಧೆ ಕ್ಯಾಂಪ್‌ ಸೇರಿಕೊಂಡಿದ್ದಾರೆ. ಶಿಂಧೆ ಕ್ಯಾಂಪ್‌ನ ಶಾಸಕರು ಇರುವ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬಂಗಾರ್‌, ಮಹಾರಾಷ್ಟ್ರ ವಿಧಾನಸಭೆಗೂ ಏಕನಾಥ್‌ ಶಿಂಧೆ ಗುಂಪಿನೊಂದಿಗೆ ಆಗಮಿಸಿದ್ದರು.

ಇನ್ನಾರು ತಿಂಗಳಲ್ಲಿ ಶಿಂಧೆ ಸರ್ಕಾರ ಪತನ, ಚುನಾವಣೆಗೆ ಸಿದ್ಧರಾಗಿ: ಪವಾರ್‌!

ಏಕನಾಥ್‌ ಶಿಂಧೆಗೆ 164 ಮತ:
ವಿಶ್ವಾಸಮತ ಯಾಚನೆಯಲ್ಲಿ ಏಕನಾಥ್‌ ಶಿಂಧೆ ನೇತೃತ್ವದ ಸರ್ಕಾರಕ್ಕೆ 164 ಶಾಸಕರು ಮತ ಚಲಾಯಿಸಿದ್ದರೆ, ಉದ್ಧವ್‌ ಠಾಕ್ರೆ, ಶರದ್ ಪವಾರ್ ಹಾಗೂ ಕಾಂಗ್ರೆಸ್‌ ಪಕ್ಷಗಳಿದ್ದ ಮಹಾ ವಿಕಾಸ್‌ ಅಘಾಡಿ ಸರ್ಕಾರದ ಪರವಾಗಿ 99 ಶಾಸಕರು ಮತ ಹಾಕಿದ್ದಾರೆ. ಭಾನುವಾರದ ಅಂದಾಜಿನ ವೇಳೆ ವಿರೋಧ ಪಕ್ಷ 107 ಮತ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ವಿರೋಧ ಪಕ್ಷ ಕೇವಲ 99 ಮತಗಳನ್ನು ಪಡೆಯುವಲ್ಲಿ ಮಾತ್ರವೇ ಯಶ ಕಂಡಿದೆ. ಎಸ್‌ಪಿ ಹಾಗೂ ಓವೈಸಿಯವರ ಪಕ್ಷ ವಿಶ್ವಾಸಮತ ಯಾಚನೆಯಲ್ಲಿ ಮತ ಚಲಾವಣೆ ಮಾಡಿಲ್ಲ.

ಮಹಾರಾಷ್ಟ್ರ ವಿಧಾನಸಭೆಯ ನಂಬರ್‌ ಗೇಮ್: 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಸದ್ಯದ ಸಾಮರ್ಥ್ಯ 287. ಶಿವಸೇನೆಯ ಒಬ್ಬ ಶಾಸಕ ಮೃತಪಟ್ಟಿರುವ ಕಾರಣ ಒಂದು ಸ್ಥಾನ ಇಳಿಕೆಯಾಗಿದೆ. ಬಿಜೆಪಿ 106 ಶಾಸಕರ ಬಲವನ್ನು ಹೊಂದಿದ್ದರೆ, ಬಂಡಾಯಕ್ಕೆ ಮೂಲ ಕಾರಣರಾಗಿದ್ದ ಏಕನಾಥ್‌ ಶಿಂಧೆ ಶಿವಸೇನೆಯ 36 ರೆಬಲ್‌ ಶಾಸಕರ ಬಲ ಹೊಂದಿದ್ದಾರೆ. 

Follow Us:
Download App:
  • android
  • ios