Asianet Suvarna News Asianet Suvarna News

ಇನ್ನಾರು ತಿಂಗಳಲ್ಲಿ ಶಿಂಧೆ ಸರ್ಕಾರ ಪತನ, ಚುನಾವಣೆಗೆ ಸಿದ್ಧರಾಗಿ: ಪವಾರ್‌!

ಏಕನಾಥ್ ಶಿಂಧೆಗೆ ಬೆಂಬಲ ನೀಡಿರುವ ಸಾಕಷ್ಟು ಬಂಡಾಯ ಶಾಸಕರು, ಪ್ರಸ್ತುತ ಆಗಿರುವ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಹಾಗಾಗಿ ಇನ್ನು ಆರೇ ತಿಂಗಳಲ್ಲಿ ಈ ಸರ್ಕಾರ ಪತನವಾಗಲಿದ್ದು ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಶರದ್ ಪವಾರ್‌ ಭವಿಷ್ಯ ನುಡಿದಿದ್ದಾರೆ.
 

Eknath Shinde govt in Maharashtra may collapse in next six months be ready for mid term polls says NCP chief Sharad Pawar san
Author
Bengaluru, First Published Jul 4, 2022, 10:26 AM IST

ಮುಂಬೈ (ಜುಲೈ 4): ಮುಂದಿನ ಆರೇ ತಿಂಗಳಲ್ಲಿ ಏಕನಾಥ್‌ ಶಿಂಧೆ (Eknath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನವಾಗಲಿದೆ. ಹಾಗಾಗಿ ಎಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ಧರಾಗಿರಬೇಕೆಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ (ಎನ್‌ಸಿಪಿ) ಮುಖ್ಯಸ್ಥೆ ಶರದ್‌ ಪವಾರ್‌ (Sharad Pawar) ಭವಿಷ್ಯ ನುಡಿದಿದ್ದಾರೆ. ಭಾನುವಾರ ಸಂಜೆ ಎನ್‌ಸಿಪಿ ನಾಯಕರು ಹಾಗೂ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಶರದ್‌ ಪವಾರ್‌ ಈ ಮಾತು ಹೇಳಿದ್ದಾರೆ.

"ಮಹಾರಾಷ್ಟ್ರದಲ್ಲಿ ಹೊಸದಾಗಿ ರಚನೆಯಾದ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಪತನವಾಗಬಹುದು. ಆದ್ದರಿಂದ ಎಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ಧರಾಗಿರಬೇಕು" ಎಂದು ಸಭೆಯಲ್ಲಿ ಭಾಗವಹಿಸಿದ್ದ ಎನ್‌ಸಿಪಿ ನಾಯಕರೊಬ್ಬರು ಶರದ್ ಪವಾರ್ ಸಭೆಯಲ್ಲಿ ಹೇಳಿದ ಮಾತನ್ನು ತಿಳಿಸಿದ್ದಾರೆ.

"ಶಿಂಧೆ ಅವರನ್ನು ಬೆಂಬಲಿಸುತ್ತಿರುವ ಅನೇಕ ಬಂಡಾಯ ಶಾಸಕರು ಪ್ರಸ್ತುತ ವ್ಯವಸ್ಥೆಯಿಂದ ಸಂತೋಷವಾಗಿಲ್ಲ ಎಂದು ಪವಾರ್ ಹೇಳಿದರು. ಒಮ್ಮೆ ಸಚಿವರ ಖಾತೆ ಹಂಚಿಕೆಯ ನಂತರ ಅವರ ಅಸಮಾಧಾನ ಹೊರಬರುತ್ತದೆ, ಇದು ಅಂತಿಮವಾಗಿ ಸರ್ಕಾರ ಪತನಕ್ಕೆ ಕಾರಣವಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಮಾಂಸಾಹಾರ ಸೇವಿಸಿದ್ದರಿಂದ ಗಣೇಶ ದೇಗುಲ ಪ್ರವೇಶಿಸದ ಪವಾರ್‌!

ಈ ಪ್ರಯೋಗದ ವೈಫಲ್ಯವು ಹಲವಾರು ಬಂಡಾಯ ಶಾಸಕರು ತಮ್ಮ ಮೂಲ ಪಕ್ಷಕ್ಕೆ ಮರಳಲು ಕಾರಣವಾಗುತ್ತದೆ ಎಂದು ಪವಾರ್ ಹೇಳಿದ್ದಾರೆ. ನಮ್ಮ ಬಳಿ ಈಗ ಕೇವಲ 6 ತಿಂಗಳಿವೆ. ಹಾಗಾಗಿ ಎನ್‌ಸಿಪಿ ಶಾಸಕರು ಹೆಚ್ಚಿನ ಸಮಯವನ್ನು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆಯಬೇಕು ಎಂದು ಅವರು ಹೇಳಿದ್ದಾರೆ.

Didi Mumbai trip: ಮಹಾರಾಷ್ಟ್ರದಲ್ಲೂ ಟಿಎಂಸಿ ಬೆಳೆಸಲು ಮಮತಾ ಯತ್ನ

ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯೊಂದಿಗೆ ನಿರ್ಮಾಣವಾಗಿದ್ದ ಮಹಾ ವಿಕಾಸ್‌ ಅಘಾಡಿ ಸರ್ಕಾರದ ಪತನದ ನಂತರ ಏಕನಾಥ್‌ ಶಿಂಧೆ ಅವರು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶಿಂಧೆ ನೇತೃತ್ವದ ಸುಮಾರು 40 ಶಿವಸೇನಾ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದರು, ಇದು ಅಂತಿಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಬುಧವಾರ ಪತನಕ್ಕೆ ಕಾರಣವಾಯಿತು.

 

Follow Us:
Download App:
  • android
  • ios