Asianet Suvarna News Asianet Suvarna News

ಇಡಿ ಒಂದು ಸಂಘಟನೆಯ ನಿಯಂತ್ರಣದಲ್ಲಿದೆ: ಬಿ.ಕೆ. ಹರಿಪ್ರಸಾದ್

ಮೈಸೂರು ಇಡಿ ದಾಳಿ ವೇಳೆ ಎರಡು ಬ್ಯಾಗ್ ದಾಖಲೆ ವಶ ವಿಚಾರದ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ನ್ಯೂಸ್ ಪೇಪರ್ ತೆಗೆದುಕೊಂಡು ಹೋಗಿರುತ್ತಾರೆಂದು ವ್ಯಂಗ್ಯವಾಡಿದ್ದಾರೆ. ಮುಡಾ ಪ್ರಕರಣದ ಕಡತ ಎರಡು ಬ್ಯಾಗ್ ನಷ್ಟು ಇರಲ್ಲ. ರಾಜಕೀಯ ಲಾಭ ಪಡೆಯಲು ಎರಡು ಬ್ಯಾಗ್ ಪ್ರದರ್ಶನ ಮಾಡಿದ್ದಾರೆ: ಕಾಂಗ್ರೆಸ್‌ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ 

ED is under the control of an organization Says Congress MLC BK Hariprasad grg
Author
First Published Oct 20, 2024, 2:21 PM IST | Last Updated Oct 20, 2024, 2:21 PM IST

ಚಿತ್ರದುರ್ಗ(ಅ.20):  ಚನ್ನಪಟ್ಟಣ ಕ್ಷೇತ್ರದಿಂದ‌ ಡಿ.ಕೆ. ಸುರೇಶ್ ಸ್ಪರ್ಧೆ ಇಂಗಿತ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ, ಹೈಕಮಾಂಡ್ ನಿಂದ ಅಂತಿಮ ತೀರ್ಮಾನ ಹೊರಬಲಿದೆ. ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಟಿಕೆಟ್ ಹೈಕಮಾಂಡ್‌ನಿಂದ ಫೈನಲ್ ಆಗಿದೆ. ಸಿಎಂ, ಕೆಪಿಸಿಸಿ ಅದ್ಯಕ್ಷ, ರಾಜ್ಯ ಉಸ್ತುವಾರಿ ಮೂವರು ಸೇರಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.  

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಸಿಎಂ‌ ವಿಚಾರದಲ್ಲಿ ಸಾಫ್ಟ್, ಹಾರ್ಡ್ ಎರಡೂ ಇಲ್ಲ. ವಿಚಾರಗಳ ಆಧಾರದ ಮೇಲೆ ಮಾತಾಡುತ್ತಿದ್ದೇವೆ. ಬಿಜೆಪಿಯವರು ಇಡಿ, ಸಿಬಿಐ, ಐಟಿ ಮೂಲಕ ರಾಜಕೀಯ ಮಾಡುತ್ತಾರೆ. ನಾನಾಗ ಮಾತಾಡಬೇಕಾಗುತ್ತದೆ, ಅದರರ್ಥ ಸಾಫ್ಟ್ ಅಂತ ಅಲ್ಲ. ಕೋಮುವಾದಿಗಳ ವಿರುದ್ಧ ನಾನು ಹಾರ್ಡ್ ಆಗಿರುತ್ತೇನೆ ಎಂದು ಹೇಳಿದ್ದಾರೆ. 

ಮೈಸೂರು ಇಡಿ ದಾಳಿ ವೇಳೆ ಎರಡು ಬ್ಯಾಗ್ ದಾಖಲೆ ವಶ ವಿಚಾರದ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ನ್ಯೂಸ್ ಪೇಪರ್ ತೆಗೆದುಕೊಂಡು ಹೋಗಿರುತ್ತಾರೆಂದು ವ್ಯಂಗ್ಯವಾಡಿದ್ದಾರೆ. ಮುಡಾ ಪ್ರಕರಣದ ಕಡತ ಎರಡು ಬ್ಯಾಗ್ ನಷ್ಟು ಇರಲ್ಲ. ರಾಜಕೀಯ ಲಾಭ ಪಡೆಯಲು ಎರಡು ಬ್ಯಾಗ್ ಪ್ರದರ್ಶನ ಮಾಡಿದ್ದಾರೆ. ಬಿಜೆಪಿ ವಿವಿಧ ಪ್ರಕರಣಗಳಲ್ಲಿ ದೋಚಿದಂತೆ ತೋರಿಕೆಗೆ ಮಾಡಿದ್ದಾರೆ. ಇಡಿ ಒಂದು ಸಂಘಟನೆಯ ನಿಯಂತ್ರಣದಲ್ಲಿದೆ, ಸಮಯ ಬಂದಾಗ ಹೇಳುತ್ತೇನೆ. 25 ವರ್ಷದ ಕೇಸ್ ಮುಡಾ ಮೂಲಕ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ. 

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಸರು ಬದಲಾವಣೆ ಮಾಡಿಕೊಳ್ಳಬೇಕು. ಭ್ರಷ್ಟಾಚಾರ ಜನತಾ ಪಾರ್ಟಿ ಎಂದು ಬದಲಾವಣೆ ಮಾಡಿಕೊಳ್ಳಲಿ. ಜಾರ್ಖಂಡ್ ಸಿಎಂ ಮೇಲೆ ಇಡಿ ಕೇಸ್ ದಾಖಲಿಸಿ ಜೈಲಲ್ಲಿಟ್ಟಿತ್ತು. ಬಳಿಕ ಹೈಕೋರ್ಟ್ ಪ್ರಕರಣದಿಂದ ಬಿಡುಗಡೆ ಮಾಡಿತ್ತು. ರಂಗ, ಬಿಲ್ಲ ಖ್ಯಾತಿಯ ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. 

ಶಿಗ್ಗಾವಿ ಕ್ಷೇತ್ರಕ್ಕೆ ಭರತ್ ಬೊಮ್ಮಾಯಿಗೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ಹರಿಪ್ರಸಾದ್‌, ಬಿಜೆಪಿ ಪಕ್ಷದವರು ಹೇಳೋದೊಂದು ಮಾಡೋದು ಇನ್ನೊಂದು. ವಂಶರಾಜಕಾರಣ ಎಂದು ಕಾಂಗ್ರೆಸ್ ಬಗ್ಗೆ ಟೀಕಿಸುತ್ತಾರೆ. ಬಸವರಾಜ ಬೊಮ್ಮಾಯಿ ಅವರ ಮಗ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಕೊಟ್ಟಿದ್ದು ಏನು ಎಂದು ಪ್ರಶ್ನಿಸಿದ್ದಾರೆ. 

ರಾಜ್ಯ ಸರ್ಕಾರ ಪೂರ್ಣಾವಧಿ ಪೂರೈಸಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್‌ ಅವರು, ಹೆಚ್.ಡಿ. ಕುಮಾರಸ್ವಾಮಿ ರಂಗ-ಬಿಲ್ಲ ಜತೆ ಸೇರಿದ್ದಾರೆ. ಬಿಜೆಪಿ ಪಕ್ಷದ ಜತೆ ಈಗ ಜೆಡಿಎಸ್ ಸೇರಿಕೊಂಡಿದೆ. ಆಪರೇಷನ್ ಕಮಲ ಬದಲು ಬೇರೆ ಹೆಸರಿಟ್ಟು ಆಪರೇಷನ್ ಮಾಡ್ತಾರಾ ನೋಡಬೇಕು. ಕಾಂಗ್ರೆಸ್ ಪಕ್ಷ ಅಷ್ಟೊಂದು ದುರ್ಬಲ ಆಗಿಲ್ಲ. ಹಗಲುಗನಸು ಕಾಣುವುದಿದ್ದರೆ ಕಾಣಲಿ ತಪ್ಪೇನಿಲ್ಲ. ಬಿಜೆಪಿ ಧರ್ಮದ ಹೆಸರಿನಲ್ಲಿ ಕೊಲೆ,‌ ದ್ವೇಷ ಹರಡುತ್ತಿದೆ. ದೇಶದಲ್ಲಿ ಬಡತನ ಹೆಚ್ಚಿದೆ, ಇನ್ನಾದರೂ ಅಧಿಕಾರ ಬಿಟ್ಟು ತೊಲಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. 

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೇಶದ ತುಂಬಾ ಪಾಠ ಮಾಡುತ್ತಿದ್ದರು. ಸ್ವಜನಪಕ್ಷಪಾತ, ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುತ್ತಿದ್ದರು. ಜೋಶಿ ಅವರು ಸ್ವಂತ ತಮ್ಮ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ. ಸ್ವಂತ ತಮ್ಮನಿಗೂ ತಮಗೂ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಮಾಡುವುದೆಲ್ಲ ಮಾಡಿಸಿ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಇದೇ ಬಿಜೆಪಿಯ ರಾಜಕಾರಣ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ. 

Latest Videos
Follow Us:
Download App:
  • android
  • ios