Asianet Suvarna News Asianet Suvarna News

ಕೇಂದ್ರದ ಆರ್ಥಿಕ ಅನ್ಯಾಯದಿಂದ ಅಭಿವೃದ್ಧಿಗೆ ಹೊಡೆತ: ಸಿಎಂ ಸಿದ್ದರಾಮಯ್ಯ

ರಾಜ್ಯದ ತೆರಿಗೆ ಅನ್ಯಾಯದ ಬಗ್ಗೆ ಕೇಳಿದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆ, ಅವುಗಳ ನಿರ್ಣಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದೇ ಆಯೋಗ ಶಿಫಾರಸು ಮಾಡಿದ್ದ 11,495 ಕೋಟಿ ರು.ಗಳನ್ನು ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

Economic Injustice of the Central Government Says CM Siddaramaiah grg
Author
First Published Feb 16, 2024, 6:10 AM IST | Last Updated Feb 16, 2024, 6:10 AM IST

ವಿಧಾನ ಪರಿಷತ್‌(ಫೆ.16): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ  ಮೊತ್ತದ ಕಡಿತ, ವಿವಿಧ ಯೋಜನೆಗಳಿಗೆ ಘೋಷಿಸಿದ ಪ್ರಕಾರ ಹಣ ನೀಡದ ಕಾರಣ ರಾಜ್ಯಕ್ಕೆ ಅನ್ಯಾಯವಾಗಿದ್ದು, ಕೇಂದ್ರದ ಇಂತಹ ಕ್ರಮದಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗುವ ತೆರಿಗೆ ಪ್ರಮಾಣ ಹೆಚ್ಚಾಗುತ್ತಿದ್ದರೂ ರಾಜ್ಯಕ್ಕೆ ಬರಬೇಕಾದ ಪಾಲು ಕಡಿಮೆಯಾಗುತ್ತಿದೆ. ನಮಗೆ ತೆರಿಗೆ ಪಾಲು ಕಡಿಮೆಯಾಗಿರುವುದರಿಂದ ಕೇಂದ್ರ ಹಣಕಾಸು ಆಯೋಗ ರಾಜ್ಯಕ್ಕೆ 5495 ಕೋಟಿ ರು. ಹಾಗೂ ಬೆಂಗಳೂರು ಪೆರಿಫೆರಿಲ್ ರಿಂಗ್‌ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ ಮೂರು ಸಾವಿರ ಕೋಟಿಯಂತೆ ಒಟ್ಟು 11,495 ಕೋಟಿ ರು. ನೀಡುವಂತೆ ಶಿಫಾರಸು ಮಾಡಿತ್ತು.

ಈ ಸರ್ಕಾರ ಬಹಳ ದಿನ ಉಳಿಯೊಲ್ಲ ಕಾದು ನೋಡಿ; ಮಾಜಿ ಸಚಿವ ಮುರುಗೇಶ್ ನಿರಾಣಿ ಬಾಂಬ್!

ರಾಜ್ಯದ ತೆರಿಗೆ ಅನ್ಯಾಯದ ಬಗ್ಗೆ ಕೇಳಿದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆ, ಅವುಗಳ ನಿರ್ಣಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದೇ ಆಯೋಗ ಶಿಫಾರಸು ಮಾಡಿದ್ದ 11,495 ಕೋಟಿ ರು.ಗಳನ್ನು ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರದಿಂದ ಆಗಿರುವ ಅನ್ಯಾಯದ ಬಗ್ಗೆ ಗಮನಕ್ಕೆ ತರಲಾಗಿತ್ತು ಎಂದ ಸಿದ್ದರಾಮಯ್ಯ, ರಾಜ್ಯದಿಂದ ಕೇಂದ್ರಕ್ಕೆ ಹೋಗುವ 100 ರು. ತೆರಿಗೆಯಲ್ಲಿ ರಾಜ್ಯಕ್ಕೆ 12-13 ರು. ಮಾತ್ರ ಸಿಗುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಆಗುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ 5300 ಕೋಟಿ ರು. ಘೋಷಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದೆ ಎಂದು ಹೇಳಿದರು. ಆದರೆ ಈ ಯೋಜನೆಗೆ ಈವರೆಗೆ ಒಂದು ರುಪಾಯಿ ಬಿಡುಗಡೆಯಾಗಿಲ್ಲ ಎಂದರು.

ಪ್ರಸ್ತುತ 16ನೇ ಹಣಕಾಸು ಆಯೋಗಕ್ಕೆ ಟರ್ಮ್ಸ ಆಫ್‌ ರೆಫರೆನ್ಸ್‌ಗೆ ರಾಜ್ಯದಿಂದ ಸಲಹೆಗಳನ್ನು ಒದಗಿಸಲಾಗಿದೆ. ಆಯೋಗಕ್ಕೆ ಮುಂದಿನ ತಿಂಗಳಲ್ಲಿ ಜ್ಞಾಪನಾ ಪತ್ರದ ಮೂಲಕ ರಾಜ್ಯ ಸರ್ಕಾರ ಹೆಚ್ಚಿನ ತೆರಿಗೆ ಪಾಲು ಮತ್ತು ಅನುದಾನಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಕೋರಿಕೆಗಳನ್ನು ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

Latest Videos
Follow Us:
Download App:
  • android
  • ios