ಬೆಂಗಳೂರು(ಮೇ.31): ‘ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ. ದೇಶದ ರೈತರು, ಕಾರ್ಮಿಕರು, ಯುವಕರಿಗೆ ಮೋದಿ ಆಡಳಿತ ಅನ್ಯಾಯ ಮಾಡಿದೆ. ಸುಳ್ಳಿನ ಸರಮಾಲೆ ಪೋಣಿಸಿ ಅಧಿಕಾರಕ್ಕೆ ಬಂದ ಮೋದಿ ಈಗಲೂ ಅದನ್ನೇ ಮುಂದುವರೆಸಿದ್ದಾರೆ.’

ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಮೊದಲ ವರ್ಷ ಸಾಧನೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಂಬಿಸಿದ್ದು ಹೀಗೆ. ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಜನತೆ ಮೋದಿ ಅವರ ಮೇಲೆ ವಿಶ್ವಾಸ ಇಟ್ಟು ಎರಡನೇ ಅವಧಿಗೂ ಅವರಿಗೆ ಪ್ರಧಾನಿಯಾಗುವ ಅವಕಾಶ ಮಾಡಿಕೊಟ್ಟರು. ಮೊದಲ ಅವಧಿಯಲ್ಲಿ ಮೋದಿಯವರ ಆಡಳಿತ ಸಂಪೂರ್ಣ ವೈಫಲ್ಯಕಂಡರೂ ಅವರ ಮೇಲೆ ಜನರು ಭರವಸೆಯಿಟ್ಟರು. ಆದರೆ, ಈ ಭರವಸೆಯನ್ನು ಉಳಿಸಿಕೊಂಡಿಲ್ಲ. ಆರನೇ ವರ್ಷವೂ ಸುಳ್ಳು ಭರವಸೆಗಳ ಸರಣಿ ಮುಂದುವರೆಸಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ವೈಫಲ್ಯದಿಂದ ಕೊರೋನಾ ಸಂಕಷ್ಟ: ಈಶ್ವರ ಖಂಡ್ರೆ

ದೇಶದ ಜಿಡಿಪಿ ಕಳೆದ 11 ವರ್ಷಗಳಲ್ಲೇ ತೀರ ಕೆಳಮಟ್ಟಕ್ಕೆ (4.2) ಹೋಗಿದೆ. ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾ ದೇಶಕ್ಕಿಂತ ಹಿಂದಕ್ಕೆ ಹೋಗಿದ್ದೇವೆ. ನಿರುದ್ಯೋಗ ಪ್ರಮಾಣ ವಿಪರೀತವಾಗಿದೆ. ದೇಶ ಆರ್ಥಿಕವಾಗಿ ಕುಸಿಯುತ್ತಿದೆ. ಆದರೆ, ಪ್ರಧಾನಿ ಅವರು ದೇಶವಾಸಿಗಳಿಗೆ ಬರೆದ ಪತ್ರದಲ್ಲಿ ತ್ರಿವಳಿ ತಲಾಖ್‌, ಅಯೋಧ್ಯೆ ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದಾರೆ. ರೈತರಿಗೆ ವರ್ಷಕ್ಕೆ ಆರು ಸಾವಿರದಂತೆ 72 ಸಾವಿರ ಕೋಟಿ ರು.ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾರೆ ಎಂದರು.

ರಾಮ ಮಂದಿರ ವಿಚಾರ

ರಾಮಮಂದಿರ ವಿಷಯ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪೇ ಹೊರತು ಕೇಂದ್ರ ಸರ್ಕಾರದ ಗೆಲುವು ಅಲ್ಲ. ಅದು ಸರ್ಕಾರದ ಸಾಧನೆಯಲ್ಲ. ಕಾಶ್ಮೀರ, ತ್ರಿವಳಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಾರ್ಯಕಾರಿ ಆದೇಶ ಹೊರಬಿದ್ದಿದೆ. ಇದು ದೊಡ್ಡ ಸಾಧನೆಯೇ ಎಂದು ಅವರು ಪ್ರಶ್ನಿಸಿದರು.

ಮೋದಿ 2.0 ಜಗತ್ತಿಡೀ ಹವಾ; ಕೊರೋನಾ ನಿರ್ವಹಣೆಯಲ್ಲಿ ನಂ.1

ನಿಜಕ್ಕೂ ಮೋದಿ ಜನರಿಗೆ ಉತ್ತರದಾಯಿತ್ವ ಹೊಂದಿದ್ದರೆ, ಕಳೆದ ಒಂದು ವರ್ಷದಲ್ಲಿ ಸೃಷ್ಟಿಸಿರುವ ಉದ್ಯೋಗವೆಷ್ಟು, ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ, ಕೈಗಾರಿಕೆ ವಲಯದಲ್ಲಿ ಹೂಡಿಕೆ ಎಷ್ಟಾಗಿದೆ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಂಕಿ-ಸಂಖ್ಯೆ ಸಮೇತ ವಿವರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಹತ್ತು ತಿಂಗಳಾಗಿದೆ. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಈವರೆಗೆ ಸೂರು ಒದಗಿಸಿಲ್ಲ. ಪ್ರವಾಹದಿಂದ ಒಂದು ಲಕ್ಷ ಕೋಟಿ ರು.ನಷ್ಟಸಂಭವಿಸಿದರೂ ಪ್ರಧಾನಿಯವರು ಬಂದು ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟುಅನ್ಯಾಯವಾಗಿದೆ ಎಂಬುದನ್ನು ಹೇಳುವ ಧೈರ್ಯ ಯಡಿಯೂರಪ್ಪ ಅವರಿಗೆ ಇದೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯದಿಂದ ಆಯ್ಕೆಯಾದ 25 ಮಂದಿ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಇದು ದುರಂತ ಎಂದರು.

ದೇಶದ 7 ದಶಕಗಳ ಕನಸು ಈಗ ನನಸಾಗುತ್ತಿದೆ: ಶೋಭಾ ಕರಂದ್ಲಾಜೆ

ಕೊರೋನಾ ಸೋಂಕು ಕಂಡು ಬಂದ ಕೂಡಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧಿಸಿದ್ದರೆ, ಟ್ರಂಪ್‌ ಕಾರ್ಯಕ್ರಮ ನಡೆಸದೇ ಹೋಗಿದ್ದರೆ, ತಬ್ಲೀಘಿಗಳ ಸಮಾವೇಶಕ್ಕೆ ಅನುಮತಿ ಕೊಡದೆ ಹೋಗಿದ್ದರೆ ಕೊರೋನಾ ಸೋಂಕು ದೇಶದಲ್ಲಿ ಈ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ. ಸೋಂಕು ಈ ಪ್ರಮಾಣದಲ್ಲಿ ಹರಡಲು ಕೇಂದ್ರವೇ ಹೊಣೆ.

- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ