ಬೆಳಗಾವಿ, (ಅ.14): ಸಚಿವರ ಖಾತೆಗಳನ್ನು ಅದಲು ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿದೆ. ಅವರು ಅದನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ಮಾಡಿಕೊಂಡು ಈ ತೀರ್ಮಾನ ಮಾಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.

ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವುದಕ್ಕೆ ಶ್ರೀರಾಮುಲು ಅವರ ಖಾತೆ ಬದಲಾವಣೆಯೇ ಸಾಕ್ಷಿ ಎಂದು ಡಿಕೆ ಶಿವಕುಮಾರ್ ಅವರು ಹೇಳಿಕೆ ಕೊಟ್ಟಿದ್ದರು.

ಶ್ರೀರಾಮುಲು ಖಾತೆ ಬದಲಾವಣೆ ಏಕೆ? ಕಾರಣ ಬಿಚ್ಚಿಟ್ಟ ಡಿಕೆ ಶಿವಕುಮಾರ್..!

ಇಂದು (ಬುಧವಾರ) ಲಕ್ಷ್ಮಣ ಸವದಿ ಅವರು ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಯಲ್ಲಿ ಯಾವುದೇ ಹರುಳಿಲ್ಲ, ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ. ಇಲಾಖೆ ಬದಲಾದರೆ ಅಸಮರ್ಥರು ಅಂತಾ ಅಲ್ಲ ಎಂದರು.

ಒಳ್ಳೆಯ ಕೆಲಸ ಆಗಬೇಕು ಎಂದು ಸಿಎಂ ಕೆಲ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದಾಗ 2 ವರ್ಷ ಡಿ.ಕೆ ಶಿವಕುಮಾರ್‌ಗೆ ಮಂತ್ರಿ ಮಂಡಲಕ್ಕೆ ತೆಗೆದುಕೊಂಡಿರಲಿಲ್ಲ. ಡಿಕೆಶಿ ಅಸಮರ್ಥರು ಅನ್ನುವ ಕಾರಣಕ್ಕೆ ಬಿಟ್ಟಿದ್ದರು ಎನ್ನುವುದನ್ನು ಹೇಳಲಿ. ಕೆಲವು ಸನ್ನಿವೇಶದಲ್ಲಿ, ಸಂದರ್ಭದಲ್ಲಿ ಕೆಲವೊಂದು ಬದಲಾವಣೆ ಆಗುತ್ತವೆ ಎಂದು ತಿರುಗೇಟು ನೀಡಿದರು.