Asianet Suvarna News Asianet Suvarna News

ಬರ ಪರಿಹಾರ ಜಟಾಪಟಿ: ರಾಜ್ಯ ಸರ್ಕಾರ ಕೇಳಿದ್ದೇನು?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಗ್ಗಜಗ್ಗಾಟ, ರಾಜ್ಯ ಸರ್ಕಾರದ ಕಾನೂನು ಹೋರಾಟದ ನಂತರ ಕೊನೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ 3,498 ಕೋಟಿ ರು. ಬರ ಪರಿಹಾರ ಬಿಡುಗಡೆಗೆ ಆದೇಶ ಹೊರಡಿಸಿದೆ. 

Drought Relief Issue What did the Siddaramaiah Congress Government Ask gvd
Author
First Published Apr 28, 2024, 5:03 AM IST

ಬೆಂಗಳೂರು (ಏ.28): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಗ್ಗಜಗ್ಗಾಟ, ರಾಜ್ಯ ಸರ್ಕಾರದ ಕಾನೂನು ಹೋರಾಟದ ನಂತರ ಕೊನೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ 3,498 ಕೋಟಿ ರು. ಬರ ಪರಿಹಾರ ಬಿಡುಗಡೆಗೆ ಆದೇಶ ಹೊರಡಿಸಿದೆ. ಆದರೆ, ತಾನು ಸಲ್ಲಿಸಿದ್ದ ಮನವಿಗಿಂತ ಕಡಿಮೆ ಪರಿಹಾರ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಮಳೆ ಕೊರತೆ ಕಾರಣದಿಂದಾಗಿ ರಾಜ್ಯದ 223 ತಾಲೂಕುಗಳಲ್ಲಿ ಭೀಕರ ಬರ ಕಾಣಿಸಿಕೊಂಡಿದ್ದು, ಅದಕ್ಕೆ ರೈತರಿಗೆ ಪರಿಹಾರ ನೀಡುವುದು, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಬರ ಪರಿಹಾರ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್‌ ನಿಯಮದಂತೆ 18,171.44 ಕೋಟಿ ರು. ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ 2023ರ ಸೆ.22ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಅದನ್ನಾಧರಿಸಿ ಕೇಂದ್ರದಿಂದ ಬರ ಅಧ್ಯಯನ ತಂಡ 2023ರ ಅ.4ರಂದು ರಾಜ್ಯಕ್ಕಾಗಮಿಸಿ ಅ.9ರವರೆಗೆ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕೇಂದ್ರ ಕೃಷಿ ಮತ್ತು ಗೃಹ ಸಚಿವಾಲಯಕ್ಕೆ ವರದಿಯನ್ನೂ ಸಲ್ಲಿಸಿತ್ತು. ಅಲ್ಲದೆ, ಕೇಂದ್ರ ಬರ ಅಧ್ಯಯನ ತಂಡವು ನ.13ಕ್ಕೆ ರಾಜ್ಯಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು. ಅದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಸಚಿವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಶೀಘ್ರದಲ್ಲಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೋರಿದ್ದರು. 

ಇಂದು ಒಂದೇ ದಿನ ರಾಜ್ಯದ 4 ಕಡೆ ಮೋದಿ ಸಮಾವೇಶ: ಭರ್ಜರಿ ಪ್ರಚಾರ

ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ, ಶೀಘ್ರದಲ್ಲಿ ಸಭೆ ನಡೆಸಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ನಂತರ ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಬರ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ರಾಜ್ಯಕ್ಕೆ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕಳೆದ ಮಾ.23ರಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್‌ಗೆ ಅಟಾರ್ನಿ ಜನರಲ್‌ ಅವರು ಕೇಂದ್ರ ಸರ್ಕಾರ ಶೀಘ್ರದಲ್ಲಿ ಬರ ಪರಿಹಾರ ನೀಡುವುದಾಗಿ ಅಫಿಡವಿಟ್‌ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಇದೀಗ ಬರ ಪರಿಹಾರ ರೂಪದಲ್ಲಿ 3,498 ಕೋಟಿ ರು. ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವಾಲಯ ಆದೇಶಿಸಿದೆ.

ರಾಜ್ಯ ಸರ್ಕಾರ ಕೇಳಿದ್ದೇನು?
* ಕೃಷಿ, ತೋಟಗಾರಿಕೆ ಬೆಳೆಗಳ ನಷ್ಟ: 35,162.05 ಕೋಟಿ ರು.
* ಕೃಷಿ, ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಪರಿಹಾರ: 4,663.12 ಕೋಟಿ ರು.
* ಜಾನುವಾರುಗಳಿಗೆ ಮೇವು ಸೇರಿ ಇತರ ಪರಿಹಾರ: 363.68 ಕೋಟಿ ರು.
* ಬರ ಪೀಡಿತ ತಾಲೂಕುಗಳಿಗೆ ಕುಡಿಯುವ ನೀರಿನ ಪೂರೈಕೆಗೆ: 566.78 ಕೋಟಿ ರು.
* ಕುಟುಂಬಗಳಿಗೆ ಪರಿಹಾರ ನೀಡಲು: 12,577.9 ಕೋಟಿ ರು.
ಒಟ್ಟು: 18,171.44 ಕೋಟಿ ರು. ಪರಿಹಾರ

ಕಾಂಗ್ರೆಸ್ ಪಂಚ ಗ್ಯಾರಂಟಿಗಳು ನಿರಂತರ, ಎಂದು ನಿಲ್ಲೋದಿಲ್ಲ: ಸಿಎಂ ಸಿದ್ದರಾಮಯ್ಯ

ಬರ ಪರಿಹಾರ ಸಂಘರ್ಷದ ಹಾದಿ

* 2023ರ ಆಗಸ್ಟ್‌ 22ರಂದು ರಾಜ್ಯ ಸರ್ಕಾರದ ಪ್ರಕೃತಿ ವಿಕೋಪ ಸಂಪುಟ ಉಪಸಮಿತಿ ಸಭೆ, ಅಂತಿಮವಾಗಿ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ

* 2023ರ ಸೆ.22ರಂದು ಎನ್‌ಡಿಆರ್‌ಎಫ್‌ನಿಂದ ತುರ್ತು ಪರಿಹಾರವಾಗಿ 4,860 ಕೋಟಿ ರು. ನೀಡುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಕೆ

* 2023ರ ಅ.4ರಿಂದ 9ರವರೆಗೆ 10 ಸದಸ್ಯರ ಕೇಂದ್ರ ಬರ ಅಧ್ಯಯನ ತಂಡದಿಂದ 13 ಜಿಲ್ಲೆಗಳಲ್ಲಿ ಬರ ಅಧ್ಯಯನ

* 2023 ಅಕ್ಟೋಬರ್‌ನಲ್ಲಿ ಸಂಪುಟ ಉಪಸಮಿತಿ ಮತ್ತೆ ಸಭೆ ನಡೆಸಿ 223 ತಾಲೂಕುಗಳ ಬರಪೀಡಿತ ಎಂದು ಘೋಷಣೆ, 18,171 ಕೋಟಿ ರು. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ

* ಬರ ಪರಿಹಾರ ಶೀಘ್ರ ನೀಡುವಂತೆ 2023ರ ನ.15ರಂದು ಕೇಂದ್ರ ಕೃಷಿ ಸಚಿವರಿಗೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

* 2023ರ ನ.24ರಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ, ಬರ ಪರಿಹಾರಕ್ಕಾಗಿ ಮನವಿ

* 2023 ಡಿ.19ರಂದು ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಭೇಟಿ

* 2024ರ ಮಾ.23ರಂದು ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರದಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ

* ರಾಜ್ಯಕ್ಕೆ ಬರ ಪರಿಹಾರ ನೀಡುವುದಾಗಿ ಏ.22ರಂದು ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಕೆ

* 3,498 ಕೋಟಿ ರು. ಬರ ಪರಿಹಾರ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವಾಲಯ ಆದೇಶ

Follow Us:
Download App:
  • android
  • ios