ಜೆಡಿಎಸ್ ಪಂಚರತ್ನ ಯಾತ್ರೆಗೆ ಸಾಂಕೇತಿಕ ಚಾಲನೆ: 2023ಕ್ಕೆ ಅಧಿಕಾರ, ಎಚ್‌ಡಿಕೆ
ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಾಂಕೇತಿಕ ಪೂಜೆ
ಬೆಂಗಳೂರು(ಅ.28): ‘ಕಾಂಗ್ರೆಸ್‌ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿಯವರು ಯಾವ ಸಂಕಲ್ಪ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. ಮುಂಬರುವ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಬಸವನಗುಡಿಯಲ್ಲಿ ಪಂಚರತ್ನ ರಥಯಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಬಿಜೆಪಿಯವರು ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ ಎರಡು ಸಾವಿರ ರು. ಮತ್ತು ಕುಕ್ಕರ್ ಎಂದು ಬರುತ್ತಾರೆ. ಇದೆಲ್ಲಾ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣ. ಆದರೆ ನಾವು ಯಾರೂ ದುಡ್ಡು ಲೂಟಿ ಹೊಡೆದಿಲ್ಲ. ಭಾರತ್ ಜೋಡೋದಿಂದ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ. ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿಮಾಡುತ್ತಾರಂತೆ. ಅವರಿಂದ ಜನರ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದು ಟೀಕಿಸಿದರು.
ಮೂರು ಪಕ್ಷ ಮೂರು ಯಾತ್ರೆ, ಮತದಾರರ ಓಲೈಕೆಗೆ ಪಕ್ಷಗಳ ಸರ್ಕಸ್!
ಬಡವ, ಶ್ರೀಮಂತ ಎಂದು ತಾರತಮ್ಯ ಇಲ್ಲದೆ ಅತ್ಯಾಧುನಿಕ ಶಿಕ್ಷಣ ಕೊಡಿಸಬೇಕು. ಗ್ರಾಮ ಪಂಚಾಯಿತಿ, ಪ್ರತಿ ವಾರ್ಡ್‌ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಶಿಕ್ಷಣ ಕೊಡಬೇಕು. ಕೋವಿಡ್ ಸಮಯದಲ್ಲಿ ಶಾಲೆ ನಡೆಯದಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯವರು ಶುಲ್ಕ ಕಟ್ಟಲೇಬೇಕು ಎಂದು ಒತ್ತಡ ಹಾಕಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಅತ್ಯುತ್ತಮ ಶಿಕ್ಷಣ ನೀಡಲು ಈ ಯೋಜನೆ ರೂಪಿಸಲಾಗಿದೆ. ಮಕ್ಕಳಿಗೆ ಇಂಗ್ಲೀಷ್ ಕೂಡ ಅನಿವಾರ್ಯ. ವೃತ್ತಿ ಬದುಕಿಗೆ ಇದು ಅಗತ್ಯವಾಗಿದೆ ಎಂದರು.
ಆರೋಗ್ಯ ವಿಚಾರದಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಲಭ್ಯವಾಗಬೇಕು. ಕ್ಯಾನ್ಸರ್, ಡಯಾಲಿಸಿಸ್‌ಗೆ ಲಕ್ಷಾಂತರ ರು. ಪಾವತಿಸಬೇಕು. ಆರೋಗ್ಯ ವಿಮೆಯನ್ನು ಸರ್ಕಾರವೇ ಮಾಡಬೇಕು. ಗ್ರಾಮಮಟ್ಟದಲ್ಲಿ ಹೆರಿಗೆಗೆ ತಕ್ಷಣಕ್ಕೆ ಬೇಕಾದ ಸೌಲಭ್ಯ ಸಿಗಬೇಕು. ಅಲ್ಲದೇ, ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ನೀಡುವ ಯೋಜನೆ ಹಾಕಿದ್ದೆ. ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿದ್ದಾರೆ. ನಾನು ಮಾಡಿದ ಯೋಜನೆಯನ್ನು ಮುಂದೆ ಬಂದ ಸರ್ಕಾರಗಳು ಗಾಳಿಗೆ ತೂರಿದವು. ನನ್ನ ಮುಂದಿನ ಯೋಜನೆಯಲ್ಲಿ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಇದೆ ಎಂದು ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಶುರುವಾದ ರಾಜಕೀಯ ಗುದ್ದಾಟ..!
ಕೆಂಪೇಗೌಡ ಹೆಸರಲ್ಲಿ ವಿಶ್ವವಿದ್ಯಾಲಯ:
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ನಾಡಪ್ರಭು ಕೆಂಪೇಗೌಡ ಹೆಸರಲ್ಲಿ ವಿಶ್ವವಿದ್ಯಾಲಯ ಪ್ರಾರಂಭಿಸುವ ಚಿಂತನೆ ಇದೆ. ಮಾಗಡಿಯಲ್ಲಿ ಇದನ್ನು ಮಾಡಬೇಕಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ಮುಖಂಡ ಬಾಗೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನ.1ರಿಂದ ಯಾತ್ರೆ ಆರಂಭ
ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಅಭಿಷೇಕ, ಪೂಜೆ ನೆರವೇರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಮಾಡಲಾಗಿದೆ. ಗುರುವಾರ ಅತ್ಯಂತ ಒಳ್ಳೆಯ ದಿನವಾಗಿದೆ. 1994ರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಹ ಇಲ್ಲಿ ಪೂಜೆ ನಡೆಸಿ ಚುನಾವಣೆಗೆ ಹೋಗಿದ್ದರು. ನ.1ರಂದು ಮುಳಬಾಗಿಲಿನ ಕುರುಡುಮಲೆಯಲ್ಲಿ ಪಂಚರತ್ನ ರಥಯಾತ್ರೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಅಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಶುಕ್ರವಾರ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಲಾಗುವುದು. ಗಾಂಧಿನಗರದಲ್ಲಿ ಸಾಂಕೇತಿಕವಾಗಿ ರಥಯಾತ್ರೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ಮಾಡಲಾಗುವುದು. ಮಾ.15ರವರೆಗೆ ಈ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ವಿವರಿಸಿದರು.