'ಅಪಮಾನ ಮಾಡಿದ ಕಾಂಗ್ರೆಸ್‌ನಲ್ಲಿ ನಾನಿರಲ್ಲ ಎಂದ 'ಕೈ' ನಾಯಕ..!
ಡಾ.ದೇವರಾಜ ಪಾಟೀಲಗೆ ಬಿ ಫಾರ್ಮ್ ನೀಡಬೇಕು, ಇಲ್ಲವಾದರೆ ಪಕ್ಷೇತರರಾಗಿ ಸ್ಪರ್ಧೆ: ಅಭಿಮಾನಿಗಳ ಎಚ್ಚರಿಕೆ
ಬಾಗಲಕೋಟೆ(ಏ.09): ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ಎದುರಾಗಿದ್ದು, ಈಗಾಗಲೇ ಹೈಕಮಾಂಡ್ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವರಾದ ಎಚ್.ವೈ.ಮೇಟಿ ಅವರ ಹೆಸರು ಘೋಷಣೆ ಮಾಡಲಾಗಿದ್ದರೂ ಟಿಕೆಟ್ ಆಕಾಂಕ್ಷಿ ಆಗಿದ್ದ ಡಾ.ದೇವರಾಜ ಪಾಟೀಲ ಅವರಿಗೆ ನಿರಾಶೆ ಉಂಟಾಗಿದ್ದು, ಬಂಡಾಯದ ಬಾವುಟ ಹಾರಿಸಿದ್ದಾರೆ.
ಬಾದಾಮಿ ಮತಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ದೇವರಾಜ ಪಾಟೀಲ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಹೆಸರು ಘೋಷಣೆ ಆಗಿ, ತೀವ್ರ ವಿರೋಧ ವ್ಯಕ್ತವಾಗಿ ಕೊನೆಯ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ನಂತರ ಬಾದಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಬಂದ ಹಿನ್ನೆಲೆಯಲ್ಲಿ ಡಾ.ದೇವರಾಜ ಪಾಟೀಲ ಬಾದಾಮಿ ಕ್ಷೇತ್ರವನ್ನೇ ಬಿಡುವಂತಾಯಿತು.
'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟಿದ್ದು ನೋವು ತಂದಿದೆ'
ರಾಜಕೀಯ ನಂಟು ಬೆಳೆಸಿಕೊಂಡು ಬಂದಿರುವ ಪರಿಣಾಮ ಬಾಗಲಕೋಟೆಯಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಆಕಾಂಕ್ಷಿ ಅಭ್ಯರ್ಥಿಯಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಎಚ್.ವೈ.ಮೇಟಿ ಬದಲಿಗೆ ಡಾ.ದೇವರಾಜ ಪಾಟೀಲ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಈಗ ಟಿಕೆಟ್ ಕೈತಪ್ಪಿದ್ದರಿಂದ ಅವರ ಅಭಿಮಾನಿಗಳ ಬಳಗದಿಂದ ಸಭೆ ನಡೆಸಿ ಬಂಡಾಯ ಬಾವುಟ ಹಾರಿಸಲು ಸಿದ್ಧತೆ ನಡೆಸಿದ್ದಾರೆ.
ಡಾ.ದೇವರಾಜ ಪಾಟೀಲ ಅವರ ನೇತೃತ್ವದಲ್ಲಿ ಸಭೆ:
ಬಾಗಲಕೋಟೆ ನವನಗರದಲ್ಲಿ ಶನಿವಾರ ಡಾ.ದೇವರಾಜ ಪಾಟೀಲ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಬಸವರಾಜ ಮೇಟಿ, ಅಬ್ದುಲ್ ರಜಾಕ, ಸಂಗಣ್ಣ ಹಂಡಿ, ಕುರುಬ ಸಮಾ ಜದ ಜಿಲ್ಲಾಧ್ಯಕ್ಷ ಸಿದ್ದಾಪೂರ, ಅಜೀಜ್ ಬಾಳಿಕಾಯಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು, ಕುರುಬ ಸಮಾಜದ ಮುಖಂಡರು ಸೇರಿದಂತೆ ಡಾ.ದೇವರಾಜ ಪಾಟೀಲ ಅಭಿಮಾನಿಗಳ ಸಮ್ಮುಖ ದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿ, ಟಿಕೆಟ್ ಸಿಗದೇ ಇರುವುದು ನೋವಿನ ಸಂಗತಿಯಾಗಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯನವರ ಜಯ ಗಳಿಸಿರುವುದಕ್ಕೆ ಡಾ.ದೇವರಾಜ ಪಾಟೀಲ ಕಾರಣವಾಗಿದೆ. ಸ್ನೇಹ ಜೀವಿ, ಸಹನೆ ಇರುವ ವ್ಯಕ್ತಿ ಯಾಗಿದ್ದಾರೆ. ಸಹನೆ ಮಾಡಿಕೊಂಡಿರವುದೇ ನಿರ್ಲಕ್ಷ್ಯ ಕ್ಕೆ ಕಾರಣವಾಗಿದೆ. ಆದ್ದರಿಂದ ಹೈಕಮಾಂಡ್ ಬಿ ಫಾರ್ಮ್ ನೀಡಬೇಕು. ಇಲ್ಲವಾದಲ್ಲಿ ಪಕ್ಷೇತರ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿ, ಎಲ್ಲರೂ ಅವರ ಜೊತೆಗೆ ಕೈ ಜೋಡಿಸೋಣ ಎಂದರು.
ಕಾಂಗ್ರೆಸ್ ಟಿಕೆಟ್ ಫೈಟ್‌ಗೆ ಸ್ವಾಮೀಜಿಗಳ ಎಂಟ್ರಿ: ಉಮಾಶ್ರೀಗೆ ಟಿಕೆಟ್ ನೀಡದಂತೆ ಮಠಾಧೀಶರ ಒತ್ತಡ
ಎಲ್ಲ ಅಪಮಾನ ಮಾಡಿರುವ ಕಾಂಗ್ರೆಸ್ ಪಕ್ಷದಲ್ಲಿ ನಾನು ಇರಲ್ಲ
ಡಾ.ದೇವರಾಜ ಪಾಟೀಲ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದಲ್ಲಿ ಇರಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಸ್ವಾಭಿಮಾನ ಇರದ ಕಡೆ ನಾನು ಇರಲ್ಲ. ಕಳೆದ ಎರಡು ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ವಾಪಸ್ ಪಡೆದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಸೇರಿದಂತೆ ಜಿ.ಪರಮೇಶ್ವರ ಹಾಗೂ ಇತರೆ ಗಣ್ಯರು ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟುಕೆಲಸ ಮಾಡಿದರೂ ಗುರುತಿಸುವ ಕಾರ್ಯ ಮಾಡಿಲ್ಲ. ವೇದಿಕೆ ಮೇಲೆ ಹೆಸರು ತೆಗೆದುಕೊಳ್ಳುವುದು ಸೇರಿದಂತೆ ವಾಹನದಲ್ಲಿ ಕರೆದುಕೊಂಡು ಹೋಗಿ ಅರ್ಧ ದಾರಿಯಲ್ಲಿ ಇಳಿಸಿದ್ದಾರೆ. ಎಲ್ಲ ಅಪಮಾನ ಮಾಡಿರುವ ಕಾಂಗ್ರೆಸ್ ಪಕ್ಷದಲ್ಲಿ ನಾನು ಇರಲ್ಲ. ಈಗ ಸೇರಿರುವ ನನ್ನ ಅಭಿಮಾನಿಗಳು ಏನು ನಿರ್ಣಯ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದಾನೆ ಎಂದರು. ರಾಜಕೀಯ ಅಂದರೆ ಸಂಘರ್ಷ ಇರುತ್ತದೆ. ಇನ್ನು ಮುಂದೆ ನಾನು ಸಹ ಸಂಘರ್ಷಕ್ಕೆ ಇಳಿಯುತ್ತೇನೆ ಎಂದು ಹೇಳುವ ಮೂಲಕ ಪಕ್ಷ ಬಿಡುತ್ತೇನೆ ಎಂದು ಸ್ಪಷ್ಟನಿರ್ಧಾರ ತಿಳಿಸುವ ಮೂಲಕ ಹೊಸ ಪಯಣಕ್ಕೆ ಸಿದ್ದರಾಗಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.