ಕಾಂಗ್ರೆಸ್ ಅಧಿವೇಶನಕ್ಕೆ ತೆರಿಗೆ ಹಣ ಪೋಲು ಬೇಡ: ಛಲವಾದಿ ನಾರಾಯಣಸ್ವಾಮಿ
ಆಡಳಿತಾರೂಢ ಕಾಂಗ್ರೆಸ್ ತಮ್ಮ ಕಾರ್ಯಕ್ರಮವನ್ನು ಪಕ್ಷದ ಹಣ ಮಾಡಿ ಮಾಡಿಕೊಳ್ಳಲಿ, ಜನತೆಯ ಹಣ ಪೋಲು ಮಾಡಬಾರದು. ಒಂದು ವೇಳೆ ಜನರ ತೆರಿಗೆ ಹಣ ಪೋಲು ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಡಿ.26): ಆಡಳಿತಾರೂಢ ಕಾಂಗ್ರೆಸ್ ತಮ್ಮ ಕಾರ್ಯಕ್ರಮವನ್ನು ಪಕ್ಷದ ಹಣ ಮಾಡಿ ಮಾಡಿಕೊಳ್ಳಲಿ, ಜನತೆಯ ಹಣ ಪೋಲು ಮಾಡಬಾರದು. ಒಂದು ವೇಳೆ ಜನರ ತೆರಿಗೆ ಹಣ ಪೋಲು ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ನಿಜವಾದ ಕಾಂಗ್ರೆಸ್‌ನದ್ದಾಗಿದೆ. ಅದು ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್ ಆಗಿದೆ. ಆದರೆ, ಈಗಿರುವ ಕಾಂಗ್ರೆಸ್ ಹಾಗೂ ಗಾಂಧಿಗಳು ಇಬ್ಬರೂ ನಕಲಿ ಎಂದು ಆರೋಪಿಸಿದರು.
ಸಂವಿಧಾನ ನೀಡಿದ್ದು ಕಾಂಗ್ರೆಸ್‌ನ ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಎಂದು ಅನಿಲ್ ಲಾಡ್ ಹೇಳಿದ್ದರು. ಅದು ದೊಡ್ಡದಾಗಿ ವೈರಲ್ ಆಗಿತ್ತು. ಆಗ ಒಬ್ಬ ಕಾಂಗ್ರೆಸ್ಸಿಗರೂ ಮಾತನಾಡಿಲ್ಲ. ಮದ್ಯ ಸೇವಿಸಿಯೇ ಸಂವಿಧಾನ ಬರೆದಿದ್ದಾರೆ ಎಂಬುದಾಗಿ ಇಂಡಿಯಾ ಒಕ್ಕೂಟದ ಕೇಜ್ರಿವಾಲ್ ಹೇಳಿದ್ದಾರೆ. ಇದರ ವಿಡಿಯೋ ಇದೆ. ಇದಕ್ಕೆ ಕಾಂಗ್ರೆಸ್ಸಿನ ಉತ್ತರ ಏನು? ಎಂದು ವಾಗ್ದಾಳಿ ನಡೆಸಿದರು.
ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್, ‘ಪುಷ್ಪ’ ತಂಡದಿಂದ 2 ಕೋಟಿ ರು.
ಕಾಂಗ್ರೆಸ್ ಮುಖಂಡರು ತಮ್ಮ ಅವಮಾನ ಸಹಿಸಿಕೊಳ್ಳಲಾಗದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿರುವುದು, ಚುನಾವಣೆಯಲ್ಲಿ ಸೋಲಿಸಿರುವುದು, ಅವರು ತೀರಿಕೊಂಡಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೂ ಜಾಗ ಕೊಟ್ಟಿಲ್ಲ. ಈ ದೊಡ್ಡ ಅಪರಾಧ ಕಾಂಗ್ರೆಸ್ಸಿನ ಮೇಲೆ ಇದೆ ಎಂಬುದಾಗಿ ಸದನದಲ್ಲಿ ರಮೇಶ್‍ಕುಮಾರ್ ಅವರೇ ಒಪ್ಪಿಕೊಂಡಿದ್ದರು. ಕಾಂಗ್ರೆಸ್ಸಿನ ಬೇರೆಯವರು ಇದು ಸುಳ್ಳು ಎಂದಿಲ್ಲ ಎಂದರು.
ಅಧಿವೇಶನ ತೃಪ್ತಿ ತಂದಿಲ್ಲ: ಉತ್ತರ ಕರ್ನಾಟಕ ಕುರಿತು ಸಮರ್ಪಕವಾಗಿ ಚರ್ಚೆ ನಡೆಯದ ಕಾರಣ ಬೆಳಗಾವಿ ಅಧಿವೇಶನ ತೃಪ್ತಿ ತಂದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರವು ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಉತ್ತರ ಕರ್ನಾಟಕ ಸಮಸ್ಯೆ ಕುರಿತು ಸಮರ್ಪಕವಾಗಿ ಚರ್ಚೆ ನಡೆಸಲು ಬಿಡದೆ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡದೆ ಇರುವ ಕಾರಣ ಅಧಿವೇಶನ ಅತೃಪ್ತಿ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಪ್ರಕರಣ: ಸಿಐಡಿ ತನಿಖೆಗೆ ಇಲ್ಲ ಎನ್ನಲಾಗದು: ಬಸವರಾಜ ಹೊರಟ್ಟಿ
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಬಣ್ಣ ಹೊಡೆಯಲು 120 ಕೋಟಿ ರು. ಬೇಕಾ? ವಾಲ್ಮೀಕಿ, ಮುಡಾ ಹಗರಣ ಮತ್ತು ಇತರ ಹಗರಣ ಮುಚ್ಚಿಕೊಳ್ಳಲು ಸರ್ಕಾರ ಮುಂದಾಗಿದೆ. ಹಗರಣಗಳ ಬಗ್ಗೆ ಚರ್ಚೆ ಮಾಡಲು ಎಷ್ಟೇ ಕೇಳಿದರೂ ಅವಕಾಶ ನೀಡುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. ಸರ್ಕಾರ ಗ್ಯಾರಂಟಿ ಬಿಟ್ಟು ಬೇರೆ ಮಾತನಾಡುತ್ತಿಲ್ಲ. ಗ್ಯಾರಂಟಿಗಳು ಶಾಶ್ವತವಾಗಿರುವುದಿಲ್ಲ. ಗ್ಯಾರಂಟಿ ಜಾರಿಗೆ ಮುನ್ನ ಜನ ಉಪವಾಸ ಇರಲಿಲ್ಲ. ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಮಾಡಬೇಕು. ಗ್ಯಾರಂಟಿಯಲ್ಲೇ ಸರ್ಕಾರ ಮುಗಿದರೆ ಹೇಗೆ? ರೈತರು, ನೀರಾವರಿ ಯೋಜನೆ ಮತ್ತು ಇತರೆ ಸಮಸ್ಯೆಗಳಿವೆ. ಅಭಿವೃದ್ಧಿಗಳಿಗಾಗಿ ಸರ್ಕಾರ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.