ಮೈತ್ರಿ ಓಕೆ, ಆದ್ರೆ ಜೆಡಿಎಸ್‌ಗೆ ಮಂಡ್ಯ ಬಿಟ್ಟುಕೊಡಬೇಡಿ: ಕೆ.ಸಿ.ನಾರಾಯಣಗೌಡ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಗುತ್ತಿರುವುದು ಸಂತೋಷದ ವಿಚಾರ. ಆದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಕೆ.ಆರ್.ಪೇಟೆ (ಅ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಗುತ್ತಿರುವುದು ಸಂತೋಷದ ವಿಚಾರ. ಆದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದ ಸಂಸದೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವರನ್ನು ಬೆಂಬಲಿಸಿತ್ತು. ಈಗ ಸುಮಲತಾ ಅವರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ಅವರೊಂದು ರೀತಿ ಬಿಜೆಪಿ ಪಕ್ಷದ ಸಂಸದೆಯೇ ಆಗಿದ್ದಾರೆ.
ಹಾಗಾಗಿ ಮುಂಬರುವ ಚುನಾವಣೆಯಲ್ಲೂ ಸುಮಲತಾ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚೇನೂ ಇಲ್ಲ. ಹಿಂದೆ ಏಳು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರು. ಈಗ ಒಂದೇ ಕ್ಷೇತ್ರದಲ್ಲಿ ಜೆಡಿಎಸ್ ಉಳಿದುಕೊಂಡಿದೆ. ಜಿಲ್ಲೆಯೊಳಗೆ ಸುಮಲತಾ ಅವರ ಪ್ರಭಾವ ಹೆಚ್ಚಿದೆ. ಅಂಬರೀಶ್ ಅಣ್ಣನ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಆದ ಕಾರಣ ಸುಮಲತಾ ಅವರಿಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ ನಾನೂ ಸುಮಲತಾ ಅವರ ಪರವಾಗಿಯೇ ನಿಲ್ಲುತ್ತೇನೆ ಎಂದರು. ಬಿಜೆಪಿ ವರಿಷ್ಠರು ಸುಮಲತಾ ಅವರನ್ನು ಬಿಟ್ಟು ಉಳಿದ ಯೋಚನೆ ಮಾಡಬಾರದು.
ಮದುವೆಯಾಗುವ ಹುಡುಗ ಅದಿತಿ ಗಂಡನ ಥರ ಇರಬೇಕು: ನಾನು ರಶ್ಮಿಕಾ ಬಿಂಬ ಎಂದ ಸೋನು ಗೌಡ!
ಜೆಡಿಎಸ್‌ಗೆ ಮಂಡ್ಯ ಜಿಲ್ಲೆಯನ್ನು ಬಿಡಬಾರದು. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ನಾನು ಒಪ್ಪಿಕೊಳ್ಳುವುದಿಲ್ಲ. ಇಲ್ಲಿ ಜೆಡಿಎಸ್ ಜೊತೆ ನಾನು ಕೆಲಸ ಮಾಡುವುದೂ ಇಲ್ಲ. ಈ ವಿಷಯವಾಗಿ ನನಗೆ ಅಸಮಾಧಾನವಿದೆ. ಒಂದು ವೇಳೆ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟು ಕೊಟ್ಟರೆ ಮುಂದೆ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಖಡಕ್ಕಾಗಿ ಹೇಳಿದರು. ಅಂಬರೀಶ್ ಅಣ್ಣನ ಋಣ ನನ್ನ ಮೇಲೆ ಇದೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಪರ ನಿಂತು ಗೆಲುವಿಗೆ ಹೋರಾಟ ನಡೆಸುವುದರೊಂದಿಗೆ ಋಣ ತೀರಿಸುತ್ತೇನೆ ಎಂದು ತಿಳಿಸಿದರು. ಸಂಸದೆ ಸುಮಲತಾ, ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ, ಬೇಲೂರು ಸೋಮಶೇಖರ್ ಇತರರಿದ್ದರು.