ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ಭರವಸೆಗಳಿಗೆ ಮರುಳಾಗಬೇಡಿ: ಸಿಎಂ ಬೊಮ್ಮಾಯಿ
‘ಸ್ತ್ರೀ ಸಾಮರ್ಥ್ಯ’ ಯೋಜನೆಯಿಂದ ಗ್ರಾಮೀಣದಲ್ಲಿ ಆರ್ಥಿಕ ಕ್ರಾಂತಿಯಾಗಲಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ಯಾರಂಟಿ ಕಾರ್ಡ್ ಹುಸಿ ಭರವಸೆಗೆ ಏಮಾರದಿರಿ ಎಂದು ಮಹಿಳೆಯರಿಗೆ ಕರೆಕೊಡುತ್ತ ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಬೆಂಗಳೂರು (ಮಾ.09): ‘ಸ್ತ್ರೀ ಸಾಮರ್ಥ್ಯ’ ಯೋಜನೆಯಿಂದ ಗ್ರಾಮೀಣದಲ್ಲಿ ಆರ್ಥಿಕ ಕ್ರಾಂತಿಯಾಗಲಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ಯಾರಂಟಿ ಕಾರ್ಡ್ ಹುಸಿ ಭರವಸೆಗೆ ಏಮಾರದಿರಿ ಎಂದು ಮಹಿಳೆಯರಿಗೆ ಕರೆಕೊಡುತ್ತ ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದರು. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಬುಧವಾರ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ‘ಸ್ತ್ರೀ ಸಾಮರ್ಥ್ಯ-ನಮೋ ಸ್ತ್ರೀ’ ಕಾರ್ಯಕ್ರಮ ಉದ್ಘಾಟಿಸಿದರು.
ಕಾಂಗ್ರೆಸ್ ಹೆಸರೆತ್ತದೆ ಮಾತನಾಡಿದ ಅವರು, ಯಾವುದೇ ಬಂಡವಾಳದ ಖಾತ್ರಿಯಿಲ್ಲದೇ ಗ್ಯಾರಂಟಿ ಕಾರ್ಡ್ ಎನ್ನುತ್ತಾ ಮಹಿಳೆಯರನ್ನು ಯಾಮಾರಿಸುತ್ತಿದ್ದಾರೆ. ಮಹಿಳೆಯರಿಗೆ ದುಡಿಯುವ ಶಕ್ತಿ ಇದ್ದು, ಅದೇ ಅವರ ಬಂಡವಾಳವಾಗಿದೆ. ಮಹಿಳೆಯರಿಗೆ ಅವರ ಭಿಕ್ಷೆ ಬೇಡ, ದುಡಿಯುವ ಕೈಗಳಿಗೆ ಅವಕಾಶ ಬೇಕು. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇಂಥ ಜನೋಪಯೋಗಿ ಯೋಜನೆಗಳನ್ನು ಘೋಷಿಸಿದ್ದು, ಅದರಂತೆ ಜಾರಿಗೆ ತರಲಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಕಾರ್ಡ್‌ಗೆ ಮರುಳಾಗದಿರಿ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ವಿಚಿತ್ರವೋ, ವಿಸ್ಮಯವೋ ಪಿಯು ವಿದ್ಯಾರ್ಥಿನಿಯ ಮೂರು ಹಾಲ್ ಟಿಕೆಟ್ ತನ್ನಿಂದ ತಾನೇ ನಾಶ!
ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಈಗಾಗಲೇ 50 ಸಾವಿರ ಸಂಘಗಳು ನೋಂದಣಿ ಆಗಿವೆ. ಈ ಸಂಘಗಳಿಗೆ ತಲಾ .1 ಲಕ್ಷದಂತೆ .500 ಕೋಟಿಯನ್ನು ನೀಡುವುದು ಸರ್ಕಾರದ ಗುರಿ. ಈಗ ಮೊದಲ ಹಂತದ .100 ಕೋಟಿಯಲ್ಲಿ 9,890 ಮಹಿಳಾ ಸ್ವ ಸಹಾಯ ಗುಂಪುಗಳಿಗೆ ತಲಾ .1 ಲಕ್ಷ ಕೊಡಲಾಗಿದೆ. ಇದರ ಜೊತೆಗೆ 11 ಕ್ಯಾಂಟೀನ್, 9 ಸ್ಯಾನಿಟರಿ ಪ್ಯಾಡ್, 24 ಚಿಕ್ಕಿ ಘಟಕ ಸೇರಿ 44 ಘಟಕಗಳಿಗೆ ತಲಾ .2.5 ಲಕ್ಷ ಕೊಡಲಾಗಿದೆ. ಫಲಾನುಭವಿ ಸಂಘಗಳ ಖಾತೆಗೆ ಆನ್‌ಲೈನ್ ಮೂಲಕ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಒಟ್ಟಾರೆ .30 ಸಾವಿರ ಕೋಟಿ ವಹಿವಾಟಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದ ಜಿಡಿಪಿಗೆ ಸ್ತ್ರೀ ಶಕ್ತಿ ಸಂಘಗಳು ದೊಡ್ಡ ಕೊಡುಗೆ ನೀಡುವಂತಾಗಬೇಕು ಎಂಬ ಚಿಂತನೆ ಸರ್ಕಾರದ್ದಾಗಿದೆ. ಡಿಬಿಟಿ ಮೂಲಕ ಅನುದಾನ ನೀಡಿ, ಉತ್ಪನ್ನಗಳ ತಯಾರಿಕೆಗೆ ತರಬೇತಿ, ಯಂತ್ರಗಳ ಖರೀದಿ, ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಧ್ಯ ಎಂದರು. ವಿವಿಧ ಜಿಲ್ಲೆಗಳ ಸ್ವಸಹಾಯ ಸಂಘಗಳ 15,000ಕ್ಕೂ ಹೆಚ್ಚಿನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಇದ್ದರು.
‘ಮಹಿಳೆಯರಿಗೆ 1800 ಕೋಟಿ ಸಾಲ’: ಐಟಿ-ಬಿಟಿ, ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಸರ್ಕಾರವು ಪ್ರಸಕ್ತ ಆಯವ್ಯಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಒಟ್ಟಾರೆ 46,278 ಕೋಟಿಗಳ ಅನುದಾನ ಒದಗಿಸಿದೆ. ಪ್ರಸಕ್ತ ಸಾಲಿನಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ .1,800 ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಗುರಿ ಇದೆ ಎಂದರು. ಗೃಹಿಣಿ ಶಕ್ತಿ ಯೋಜನೆಯಡಿ ಭೂರಹಿತ ರೈತ ಮಹಿಳೆಯರಿಗಾಗಿ ಮಾಸಿಕ .500, 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು.
ಶಾಸಕ ಮಾಡಾಳ್ ಮೆರವಣಿಗೆ ಮುಜುಗರ ತಂದಿದೆ: ನಳಿನ್ ಕುಮಾರ್ ಕಟೀಲ್
ಮಹಿಳೆಯರ ಅಪೌಷ್ಟಿಕತೆ ತಡೆಗೆ ಅಂಗನವಾಡಿಗಳ ಮೂಲಕ ಬಿಸಿಯೂಟ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ .350 ಕೋಟಿ ವೆಚ್ಚದಲ್ಲಿ ಉಚಿತ ಬಸ್‌ಪಾಸ್ ಸೌಲಭ್ಯ ಒದಗಿಸಲಾಗುತ್ತಿದ್ದು, ಒಟ್ಟು 8 ಲಕ್ಷ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ನಗರ ಪ್ರದೇಶದಲ್ಲಿ 4 ಸಾವಿರ ಶಿಶುಪಾಲನಾ ಕೇಂದ್ರ ಕಾರ್ಯಾರಂಭ ಮಾಡಲಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಉತ್ಪನ್ನಗಳ ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಪ್ಯಾಕಿಂಗ್ ಮತ್ತು ಮಾರುಕಟ್ಟೆಗಾಗಿ ಎಂಟು ಸಂಸ್ಥೆಗಳೊಂದಿಗೆ ತಾಂತ್ರಿಕ ಬೆಂಬಲ ಒಡಂಬಡಿಕೆ ಮಾಡಿಕೊಳ್ಳಲಾಯಿತು.