• ಕಾಂಗ್ರೆಸ್ ಬಿಜೆಪಿ ಮಧ್ಯೆ ತಾರಕಕ್ಕೇರಿದ ಚಡ್ಡಿ ವಾರ್• ಉಭಯ ರಾಷ್ಟ್ರೀಯ ಪಕ್ಷಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್• ಸಿಎಂ ಭೇಟಿಗೆ ಪ್ರಧಾನಿ ಟೈಮ್ ನೀಡಲ್ಲ ಇದು ರಾಜ್ಯಕ್ಕೆ ಅಪಮಾನ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜೂ.05): ರಾಜ್ಯ ರಾಜಕಾರಣದಲ್ಲಿ ಈಗ ಚಡ್ಡಿ ವಾರ್ ಜೋರಾಗಿದೆ‌. ರಾಜ್ಯಾದ್ಯಂತ ಆರ್‌ಎಸ್‌ಎಸ್‌ ಚಡ್ಡಿ ಸುಡುತ್ತೇವೆ ಎಂಬ ಹೇಳಿಕೆಗೆ ಬಿಜೆಪಿ ನಾಯಕರು ಕೆಂಡಾ‌ಮಂಡಲವಾಗಿದ್ದು, ಗೃಹಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿಯನ್ನು ಜನರೇ ಉದರಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದರು‌‌. ಕಾಂಗ್ರೆಸ್ ಬಿಜೆಪಿ ಮಧ್ಯೆ ಚಡ್ಡಿ ವಾರ್ ತಾರಕಕ್ಕೇರುತ್ತಿರೋದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್‌ಡಿಕೆ, 'ಕಾಂಗ್ರೆಸ್ ನವರು ಚಡ್ಡಿ ಸುಟ್ರೂ, ಆರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಅಂತಾರೆ‌. ಚಡ್ಡಿ ಬಿಚ್ಚಿದ್ರೇ ಏನೂ ಸಿಗುತ್ತೆ ಅವರಿಗೆ.‌ ಇದು ಇಲ್ಲಿ ನಡೆಯುತ್ತಿರುವುದು ನನ್ನ ಪ್ರಶ್ನೆ ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ ಆದ್ರೇ ದಯವಿಟ್ಟು ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ. ರಾಜ್ಯದ ಜನತೆ ಗೌರವವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿ, ನಿಮ್ಮ ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ. ರಾಜ್ಯದ ಜನತೆಗೆ ಅವಮಾನ ಆಗದಂಗೆ ಜನಗಳ ಚಡ್ಡಿ ಬಿಚ್ಚಬೇಡಿ' ಅಂತಾ ಕಾಂಗ್ರೆಸ್ ಬಿಜೆಪಿ ನಡೆಗೆ ವ್ಯಂಗ್ಯವಾಡಿದ್ದಾರೆ.

ನಾನು ಬಿಎಸ್‌ವೈಗೆ ಎಂದೂ ಆಕ್ರೋಶ ಭರಿತ ಮಾತುಗಳನ್ನಾಡಿಲ್ಲ: ಇನ್ನು ಮುಂದುವರಿದು ಮಾತನಾಡಿದ ಹೆಚ್‌ಡಿಕೆ '2018ರ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯ್ತು.ಆ ಸರ್ಕಾರ ತಗೆಯಲೇಬೇಕು ಅಂತಾ ಹಲವಾರು ತಿಂಗಳ ಕಾಲ ಪ್ರೋಸೆಸ್ ನಡೆಯಿತು. ಹಣಕಾಸಿನ ಆಮಿಷದ ಬಗ್ಗೆ ಜನರ ಮುಂದೆ ಅಂದು ಇಟ್ಟಿದ್ದೇವು. ಇದಾದ ಬಳಿಕವೂ ಮೈತ್ರಿ ಸರ್ಕಾರ ತೆಗೆಯಲು ದೊಡ್ಡ ಮಟ್ಟದ ಕಸರತ್ತು ನಡೆದಿದ್ದವು. ಅವೆಲ್ಲವೂ ಈಗ ಮುಗಿದು ಹೋದ ಅಧ್ಯಾಯ. ಶಿಕ್ಷಣ ಸಚಿವರು ನಾವೆಲ್ಲಾ ಮೂಲತಃ ಆರ್‌ಎಸ್‌ಎಸ್ ನವರು ಅಂತಾ ಹೇಳಿದ್ದಾರೆ. ಆರ್‌ಎಸ್‌ಎಸ್ ರಾಷ್ಟ್ರ ಭಕ್ತಿ, ಹಿಂದುತ್ವ ಹೆಸರಿನ ಹೈಜಾಕ್ ಪಡೆದು ಹೊರಟ್ಟಿದ್ದಾರೆ. 

Karnataka Politics: ಇಂದಿನ ರಾಜಕಾರಣದಲ್ಲಿ ನೈತಿಕತೆ ಉಳಿದಿಲ್ಲ: ಕುಮಾರಸ್ವಾಮಿ

ಹೊಸ ಬದಲಾವಣೆ ತರಲು ಹಲವಾರು ಕುತಂತ್ರದ ಮೂಲಕ ಮೈತ್ರಿ ಸರ್ಕಾರ ಯಾರ್ಯಾರು ಸೇರಿ ತೆಗೆದರು. ನನಗೆ ಆ ಸರ್ಕಾರ ಹೋಗಲಿ ಅಂತಾ ಆಗ ನಾನೇ ತೀರ್ಮಾನಕ್ಕೆ ಬಂದಿದ್ದೆ. ಹೀಗಾಗಿಯೇ ನಾನು ಆಗ ಅಮೇರಿಕಾಕ್ಕೆ ಹೋಗಿದ್ದು.‌ನನಗೆ ಕೊಡುತ್ತಿದ್ದ ಹಿಂಸೆಗಳನ್ನ ನೋಡಿದ್ದೆ.‌ರೈತರ ಸಾಲ ಮನ್ನಾ ಮಾಡುವ ಟಾಸ್ಕ್ ನನ್ನ ಮೇಲಿತ್ತು, ಜನತೆಗೆ ಮಾತುಕೊಟ್ಟಿದ್ದೆ. ಆ ಕಾರ್ಯಕ್ರಮ ಪೂರೈಸಿದ ನಂತರ ನನಗೆ ಅದರಲ್ಲಿ ಆಸಕ್ತಿ ಉಳಿದಿರಲಿಲ್ಲ.ಕಾರಣ ಅವತ್ತು ಇದ್ದಂತ ಆ ಮೈತ್ರಿ ಸರ್ಕಾರದ ನಡುವಳಿಕೆಗಳು. ಮನಸ್ಸಿನಲ್ಲಿ ಬೇಸರ ಇತ್ತು ಅದರಿಂದ ನಾನು ನಿರಾಸಕ್ತನಾಗಿದ್ದೆ. ಹೋದರೇ ಹೋಗಲಿ ಯಾಕೆ ಪ್ರತಿನಿತ್ಯ ಇಂತಹ ಒಂದು ಘಟನೆಗಳು ನಡೆಯಬೇಕು.‌ 

ನಾನು ಯಾಕೆ ಇಷ್ಟೊಂದು ವ್ಯರ್ಥ ಕಸರತ್ತು ಮಾಡಬೇಕು. ರಾಜ್ಯಕ್ಕೆ ಒಳ್ಳೆಯದು ಮಾಡೋದಾದ್ರೇ ಮಾಡಿಕೊಳ್ಳಲಿ ಅಂತಾ ನಾನು ನಿರ್ಧಾರಕ್ಕೆ ಬಂದು ಬಿಟ್ಟು ಬಿಟ್ಟೆ‌. ಮತ್ತೆ ಪ್ರಯತ್ನ ಮಾಡಲು ನಾನು ಹೋಗಲಿಲ್ಲ‌. ಅದ್ರಲ್ಲಿ ಯಾರ ಯಾರ ಪಾತ್ರ ಏನೂ ಅದೆಲ್ಲಾ ಈಗ ಬೇಕಿಲ್ಲ. ಬಿಜೆಪಿ ಇಷ್ಟೇಲ್ಲಾ ಕುತಂತ್ರದ ಮುಖಾಂತರ ಬೆಟ್ಟಿಂಗ್ ದಂಧೆ ನಡೆಸುವವರ, ಬಡವರ ರಕ್ತ ಹೀರಿದಂತವರ ಪಾಪದ ಹಣದಿಂದ ಮೈತ್ರಿ ಸರ್ಕಾರ ತೆಗೆಯಲು ಉಪಯೋಗ ಮಾಡಿಕೊಂಡು ಸರ್ಕಾರ ರಚನೆ ಮಾಡಿಕೊಂಡ್ರಿ‌. ನಾನು ಯಡಿಯೂರಪ್ಪ ಅವರಿಗೆ ಎಂದೂ ಆಕ್ರೋಶ ಭರಿತ ಮಾತುಗಳನ್ನ ಹೇಳಲಿಲ್ಲ‌ ಸಲಹೆ ಕೊಟ್ಟೆ. ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿದ್ದೀರಿ, ರಾಜಕಾರಣದಲ್ಲಿ ಕೊನೆ ಭಾಗದಲ್ಲಿದೀರಿ. ಒಳ್ಳೆಯ ಕೆಲಸ ಮಾಡಿ ಜನರ ಹತ್ತಿರ ಹೆಸರು ಮಾಡಿಕೊಳ್ಳಿ ಅಂದಿದ್ದೆ. 

ಆದ್ರೇ ನಡೆದ ಘಟನೆಗಳು ಪ್ರತಿಯೊಂದು ನಿಮ್ಮ ಗಮನಕ್ಕಿದೆ‌.‌ ಇವತ್ತು ಪರ್ಸಂಟೇಜ್ ಬಗ್ಗೆ ಚರ್ಚೆ ಮಾಡ್ತಾರೆ‌. ಬೆಳಗಾವಿಯಲ್ಲೇ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ನಡೆದು ಹೋಯ್ತು. ಕಾಂಗ್ರೆಸ್ ನವರು ಒಂದು ರೀತಿ ಬಿಜೆಪಿಯವರು ಒಂದು ರೀತಿ ಅದನ್ನ ಬಳಕೆ ಮಾಡಿಕೊಂಡರು‌. ನಾನು ಅದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಕೊಡಲಿಲ್ಲ‌. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಇಲ್ಲ. ಅವರು ಗಾಜಿನ ಮನೆಯಲ್ಲಿ ಕುಳಿತುಕೊಂಡೇ ರಾಜ್ಯ ಆಳಿದವರು‌. ಬಿಜೆಪಿಯವರು ಅದನ್ನ ಮುಂದುವರೆಸಿಕೊಂಡು ಸ್ವಲ್ಪ ರೈಸ್ ಮಾಡಿಕೊಂಡ್ರು. ಮೈತ್ರಿ ಸರ್ಕಾರ ತಗೆದು ಬಿಜೆಪಿಯವರು ಪರಿವರ್ತನೆ ಇದೇ ತಂದಿದ್ದು. ಗುತ್ತಿಗೆದಾರ ಪರಿಸ್ಥಿತಿ ಏನಾಗಿದೆ, ಸರ್ಕಾರದ ಹಣ ಯಾವ ರೀತಿ ಲೂಟಿ ಆಗ್ತಿದೆ?' ಎಂದು ಪ್ರಶ್ನಿಸಿದರು.

ಸಿಎಂ ಭೇಟಿಗೆ ಪ್ರಧಾನಿ ಮೋದಿ ಸಮಯ ನೀಡಲ್ಲ: ಪ್ರವಾಹದಲ್ಲಿ ಮನೆ ಬಿದ್ದವರಿಗೆ ಇವತ್ತು ಸಹ ಮನೆ ಕಟ್ಟಿಲ್ಲ. ಕೊಡಗು, ಚಿಕ್ಕಮಗಳೂರಿನಲ್ಲಿ ಮನೆ ಕಟ್ಟಲಿಲ್ಲ.‌ ಪ್ರಚಾರ ಮಾತ್ರ ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಘೋಷಣೆಗಳಿಗೆ ಎಲ್ಲೂ ಕಡಿಮೆ ಇರಲಿಲ್ಲ. ನರೇಂದ್ರ ಮೋದಿಯವರಗಿಂತಲೂ ಹೆಚ್ಚಿನ ದೊಡ್ಡ ಮಟ್ಟದ ಘೋಷಣೆ ಮಾಡಿಕೊಂಡರು. ನವ ಕರ್ನಾಟಕ ಕಟ್ಟುತ್ತೇವೆ ಅಂತಾ ಮುಖ್ಯಮಂತ್ರಿಗಳು ಹೇಳಿದ್ದಾರೆ‌. ನವ ಕರ್ನಾಟಕ ಅಂದ್ರೇ ಯಾವ ನವ ಕರ್ನಾಟಕ. ರಾಜ್ಯದ ಖಜಾನೆಯನ್ನ ಹಿಟಾಚಿ ಮೂಲಕ ಬಗೆಯುವುದೇ ನವ ಕರ್ನಾಟಕ ನಿರ್ಮಾಣವಾ? ಯಾವ ಮಂತ್ರಿ ಸರಿ ಇದ್ದಾರೆ ಅಂತಾ ಸತ್ಯಾಂಶ ಹೇಳಬೇಕು‌. 

ಬಡವರ ಬಗ್ಗೆ ಏನಾದ್ರೂ ಕನಿಕರ ಇದೆಯಾ? ಮಸೀದಿ ಮಂದಿರ ವಿಚಾರದಲ್ಲಿ ನನಗೆ ಇಂಟ್ರಸ್ಟ್ ಇಲ್ಲ. ಮಸೀದಿಗಳಲ್ಲಿ ದೇವಸ್ಥಾನ ಇದೆಯೋ ಇಲ್ಲವೋ ಹುಡುಕಲು ಹೋಗುವುದಿಲ್ಲ ಅಂತಾ ಮೋಹನ್ ಭಾಗವತ್ ಹೇಳಿದ್ದಾರೆ. ಸಚಿವ ಸುನೀಲ್ ಕುಮಾರ್, ಮೋಹನ್ ಭಾಗವತ್ ಹೇಳಿದ್ದು ಫಾಲೋಅಪ್ ಮಾಡ್ತೇವಿ ಅಂತಾರೆ. ಒಂದು ಕಡೆ ನಿಲ್ಲಿಸುತ್ತೇನೆ ಅನ್ನೋದು ಇನ್ನೊಂದು ಕಡೆ ಗುಂಪು ಬಿಟ್ಟು ಪ್ರಚೋದನೆ ಮಾಡಿಸೋದು. ಇದನ್ನೆಲ್ಲಾ ನೋಡಿಕೊಂಡು ಸರ್ಕಾರ ಮೌನಕ್ಕೆ ಏಕೆ ಶರಣಾಗಿದೆ‌. ನೀರಾವರಿ ಸೌಲಭ್ಯ ಕೊಡಲು ಏನೂ ಕ್ರಮ ಕೈಗೊಳ್ಳಬೇಕು? ಜನರಿಗೆ ಮನೆಗಳನ್ನ ನೀಡುವ ಕಾರ್ಯಕ್ರಮ ಹೇಗೆ ಹೊಂದಿಸಬೇಕು ಅನ್ನೋದಿಲ್ಲ‌. ಜನರಿಗೆ ಒಳ್ಳೆಯದನ್ನ ಮಾಡಬೇಕು ಅಂತಾ ಈ ಸರ್ಕಾರ ಬಂದಿಲ್ಲ. ರಾಜ್ಯದ ಅಭಿವೃದ್ಧಿಗೆ ಅಲ್ಲಾ ಅವರ ಅಭಿವೃದ್ಧಿ ಮಾಡಿಕೊಳ್ಳಲು ಬಂದಿದೆ‌. 

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾ ಮಾಡಿಲ್ಲ: ಸಚಿವ ಅಶ್ವತ್ಥನಾರಾಯಣ

ಮೂರು ವರ್ಷ ಅವರ ಆಡಳಿತ ನೋಡಿದಾಗ ಅವರ ಅಭಿವೃದ್ಧಿಗೆ ಸರ್ಕಾರ ಮಾಡಿಕೊಂಡಿದ್ದಾರೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಅಂತಾ ಹೆಸರಿಟ್ಟ ತಕ್ಷಣ ಬದಲಾವಣೆ ಆಗಲ್ಲ. ಕಾರ್ಖಾನೆಗಳನ್ನ ಕರೆತಂದು ಅಭಿವೃದ್ಧಿ ಮಾಡಬಹುದಿತ್ತು. ಸ್ವತಂತ್ರವಾದ ಸರ್ಕಾರ ನಿಮ್ಮದು ನನ್ನ ತರ ಇನ್ನೊಬ್ಬರ ಹಂಗಿನಲ್ಲಿದ್ದು ಸರ್ಕಾರ ಮಾಡಿಲ್ಲ‌. ಇವತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ಭೇಟಿ ಮಾಡಲು ಟೈಮ್ ತಗೆದುಕೊಳ್ಳಲು ಆಗಲ್ಲ‌. ಹೋಗ್ತಾರೆ ಇಲ್ಲಿಂದ ಅಲ್ಲಿಂದ ಖಾಲಿ ಕೈಯಲ್ಲಿ ವಾಪಸ್ ಬರ್ತಾರೆ. ಇದು ಮುಖ್ಯಮಂತ್ರಿಗಳಿಗೆ ಅವಮಾನ ಅಲ್ಲಾ ರಾಜ್ಯದ ಜನತೆಗೆ ಅವಮಾನ' ಎಂದು ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"