2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ಬೇಕೆನ್ನುವವರು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕೆಂಬ ನಿಯಮ ಮಾಡಿ ಯಶಸ್ವಿಯಾಗಿರುವ ಕಾಂಗ್ರೆಸ್‌ಗೆ ಈಗ ಅಭ್ಯರ್ಥಿಗಳ ಆಯ್ಕೆಗೂ ಮೊದಲೇ ಆಕಾಂಕ್ಷಿಗಳ ಗುಂಪುಗಾರಿಕೆ ಮತ್ತು ನಾನೇ ಅಭ್ಯರ್ಥಿ ಎಂಬ ಬಹಿರಂಗ ಹೇಳಿಕೆ ನೀಡುತ್ತಿರುವುದು ತಲೆನೋವಾಗಿದೆ. 

ಬೆಂಗಳೂರು(ಡಿ.07): ಕಾಂಗ್ರೆಸ್‌ ಟಿಕೆಟ್‌ಗಾಗಿ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಹೈಕಮಾಂಡ್‌ ಕೆಲ ಮಾನದಂಡಗಳನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಅಲ್ಲಿಯವರೆಗೆ ಯಾವುದೇ ಆಕಾಂಕ್ಷಿಗಳು ಗುಂಪುಗಾರಿಕೆ ಮಾಡುವುದಾಗಲಿ, ತಾವೇ ಅಭ್ಯರ್ಥಿ ಎಂದು ಹೇಳಿಕೆಗಳನ್ನು ನೀಡುವುದಾಗಲಿ ಮಾಡಕೂಡದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಾಕೀತು ಮಾಡಿದ್ದಾರೆ. 2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ಬೇಕೆನ್ನುವವರು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕೆಂಬ ನಿಯಮ ಮಾಡಿ ಯಶಸ್ವಿಯಾಗಿರುವ ಕಾಂಗ್ರೆಸ್‌ಗೆ ಈಗ ಅಭ್ಯರ್ಥಿಗಳ ಆಯ್ಕೆಗೂ ಮೊದಲೇ ಆಕಾಂಕ್ಷಿಗಳ ಗುಂಪುಗಾರಿಕೆ ಮತ್ತು ನಾನೇ ಅಭ್ಯರ್ಥಿ ಎಂಬ ಬಹಿರಂಗ ಹೇಳಿಕೆ ನೀಡುತ್ತಿರುವುದು ತಲೆನೋವಾಗಿದೆ. ಅಂತಹವರನ್ನು ನಿಭಾಯಿಸಲು ಡಿ.ಕೆ.ಶಿವಕುಮಾರ್‌ ನಾಲ್ಕು ಅಂಶಗಳ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಮುಂದಿನ ಹಂತದ ಪರಿಶೀಲನೆ ನಡೆಸಿ ಪಕ್ಷದ ಹೈಕಮಾಂಡ್‌ ಕೆಲವೊಂದು ಮಾನದಂಡಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಕೆಲ ಕ್ಷೇತ್ರಗಳಲ್ಲಿ ತಮ್ಮದೇ ಗುಂಪು ಕಟ್ಟಿಕೊಂಡು ಕೆಲಸ ಮಾಡುತ್ತಿರುವುದು, ಪತ್ರಿಕಾ ಹೇಳಿಕೆ ನೀಡಿ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವುದು ಗೊಂದಲ ಮೂಡಿಸುತ್ತಿದೆ. ಇದು ಎಐಸಿಸಿ ಹಾಗೂ ಕೆಪಿಸಿಸಿ ಗಮನಕ್ಕೆ ಬಂದಿದೆ. ಈಗಾಗಲೇ ಪಕ್ಷವು ಸ್ಪಷ್ಟಪಡಿಸಿರುವಂತೆ ಪ್ರತಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮತ್ತು ಬಲವರ್ಧನೆಯ ಕೆಲಸ ಮಾಡಬೇಕು. ಗುಂಪುಗಾರಿಕೆಗೆ ಆಸ್ಪದ ನೀಡಬಾರದು. ಪಕ್ಷದ ಅನುಮತಿ ಪಡೆಯದೆ ಯಾವುದೇ ಹೇಳಿಕೆಗಳನ್ನು ನೀಡಬಾರದು. ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಉಂಟಾಗುವಂತಹ ಸನ್ನಿವೇಶಗಳನ್ನು ನಿರ್ಮಿಸಬಾರದು ಮತ್ತು ಬೇಜವಾಬ್ದಾರಿಯಿಂದ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಅರ್ಜಿಗಳಲ್ಲಿ ಫೈನಲ್ ಆಗುವುದು ಯಾವುದು?: ದಿನೇಶ್ ಗುಂಡೂರಾವ್ ಹೇಳಿದ್ದೇನು?

ಆಕಾಂಕ್ಷಿಗಳು ಒಟ್ಟಾಗಿ ತಮ್ಮ ಕ್ಷೇತ್ರದ ಪ್ರತಿ ಬೂತ್‌ಗೆ ತೆರಳಿ ಬಿಜೆಪಿ ಸರ್ಕಾರದ 40% ಕಮಿಷನ್‌ ಸೇರಿದಂತೆ ಎಲ್ಲ ಹಗರಣಗಳು, ಆಡಳಿತ ವೈಫಲ್ಯಗಳು, ಬೆಲೆ ಏರಿಕೆ, ಕೋವಿಡ್‌ ನಿರ್ವಹಣೆ ವೈಫಲ್ಯ, ರೈತರು, ಕಾರ್ಮಿಕರು ಸೇರಿ ಎಲ್ಲ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಜನರ ಮುಂದಿಡಬೇಕು. ಜತೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ ಸೇರಿದಂತೆ ಎಲ್ಲ ಜನಪರ ಯೋಜನೆಗಳನ್ನು ಸಾರ್ವಜನಿಕರು, ಮತದಾರರಿಗೆ ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಈ ಸೂಚನೆಗಳನ್ನು ಉಲ್ಲಂಘಿಸಿ ಯಾವುದೇ ಹೇಳಿಕೆಗಳನ್ನು ನೀಡಬಾರದು. ಸಂಬಂಧಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ಅಧ್ಯಕ್ಷರುಗಳ ಅನುಮತಿ ಇಲ್ಲದೆ ಯಾವುದೇ ಸಭೆಗಳನ್ನು ನಡೆಸಬಾರದು ಎಂದು ಡಿ.ಕೆ.ಶಿವಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಿಕೆಟ್‌ ಬೇಕೆಂದರೆ ಈ ಟಾಸ್ಕ್‌ ಪೂರೈಸಿ

1. ಪ್ರತಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಬಿಜೆಪಿ ಹಗರಣದ ಬಗ್ಗೆ ಪ್ರಚಾರ ಮಾಡಬೇಕು
2. ಗುಂಪುಗಾರಿಕೆ ಮಾಡಬಾರದು, ತಾವೇ ಅಭ್ಯರ್ಥಿಯೆಂದು ಘೋಷಿಸಿಕೊಳ್ಳಬಾರದು
3. ಅನುಮತಿ ಪಡೆಯದೆ ಹೇಳಿಕೆ ನೀಡಬಾರದು, ಜನರಲ್ಲಿ ಗೊಂದಲ ಸೃಷ್ಟಿಸಬಾರದು
4. ಕಾಂಗ್ರೆಸ್‌ ಸರ್ಕಾರದ ‘ಭಾಗ್ಯ’ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು