ಚೆನ್ನೈ[ನ.30]:: ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರನ್ನು ಸೆಳೆಯಲು ಡಿಎಂಕೆ ಮುಂದಾಗಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಹಾಗೂ ಪ್ರಶಾಂತ್‌ ಕಿಶೋರ್‌ ಅವರ ಮಧ್ಯೆ ಇತ್ತೀಚೆಗೆ ನಡೆದ ಮಾತುಕತೆ ಇಂಥದ್ದೊಂದು ಸಾಧ್ಯತೆಯನ್ನು ಹುಟ್ಟುಹಾಕಿದೆ.

ಡಿಎಂಕೆಯ ರಾಜಕೀಯ ಸಲಹೆಗಾರ ಸುನೀಲ್‌ ಕೆ.ನಿರ್ಗಮನದ ಹಿನ್ನೆಲೆಯಲ್ಲಿ ಪಕ್ಷ ಪ್ರಶಾಂತ್‌ ಕಿಶೋರ್‌ ಅವರನ್ನು ನೆಚ್ಚಿಕೊಂಡಿದೆ. ಈ ನಡುವೆ ಎಐಎಡಿಎಂಕೆ ಕೂಡ ಪ್ರಶಾಂತ್‌ ಕಿಶೋರ್‌ ಅವರನ್ನು ಸಂಪರ್ಕಿಸಿದೆ. ಮಾತುಕತೆ ಅಂತಿಮ ಹಂತ ತಲುಪಿದ್ದು, 2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್‌ ಕಿಶೋರ್‌ ಡಿಎಂಕೆಯ ಚುನಾವಣೆ ಪ್ರಚಾರವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮುನ್ನ ಪ್ರಶಾಂತ್‌ ಕಿಶೋರ್‌ ಬಿಜೆಪಿ, ಕಾಂಗ್ರೆಸ್‌, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಕಳೆದ ಕೆಲ ವರ್ಷಗಳಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸಿದ್ದರು.

ಸದ್ಯ ನಟ ಕಮಲ್‌ ಹಾಸನ್‌ ಅವರ ಮಕ್ಕಲ್‌ ನೀಧಿ ಮಯ್ಯಂ ಪಕ್ಷದ ಜೊತೆ ಪ್ರಶಾಂತ್‌ ಕಿಶೋರ್‌ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದ ಜನವರಿಯಲ್ಲಿ ಕೊನೆಗೊಳ್ಳಲಿದ್ದು, ಒಪ್ಪಂದವನ್ನು ವಿಸ್ತರಿಸುವ ಸಾಧ್ಯತೆ ಇಲ್ಲ. ಹೀಗಾಗಿ ಪ್ರಶಾಂತ್‌ ಕಿಶೋರ್‌ ಅವರನ್ನು ಸಳೆಯಲು ಡಿಎಂಕೆ ಯತ್ನ ನಡೆಸುತ್ತಿದೆ. 2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾಜಿ ಜಯಲಿಲಿತಾ ನಿಧನದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.