ಬೆಂಗಳೂರು/ನವದೆಹಲಿ,(ಜ15): ಕೆಪಿಸಿಸಿ ಅಧ್ಯಕ್ಷರ ಆಯ್ಕೆಗಾಗಿ ರಾಜ್ಯದ ಬಣ ರಾಜಕೀಯ ಹೈಕಮಾಂಡ್‌ಗೆ ಮಂಡೆ ಬಿಸಿ ಮಾಡಿದೆ. ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವುದು ಹೈಕಮಾಂಡ್‌ಗೆ ದಿಕ್ಕುತೋಚದಂತಾಗಿದೆ. 

ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯನವರನ್ನು ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಚರ್ಚೆ ನಡೆಸಿದರು.  ಈ ವೇಳೆ ಸ್ವತ: ಸೋನಿಯಾ ಗಾಂಧಿಯೇ ಬಣ ಬಡಿದಾಟದ ಬಗ್ಗೆ ಸಿದ್ದು ಬಳಿ ಬೇಸರ ವ್ಯಕ್ತಪಡಿಸಿದ್ದಾರಂತೆ. 

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದು ಅಚ್ಚರಿ ಹೇಳಿಕೆ, ಡಿಕೆಶಿಗೆ ಮರ್ಮಾಘಾತ.!

ಇನ್ನು ಸಿದ್ದರಾಮಯ್ಯ ಅವರು ಸೋನಿಯಾ, ರಾಹುಲ್ ಗಾಂಧಿ ಎದುರು ಡಿಕೆಶಿ ಬದಲಿಗೆ ಎಂ.ಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದಾರೆ ಎನ್ನುವ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಸೋನಿಯಾ ಮುಂದೆ ಸಿದ್ದು ಹೇಳಿದ್ದೇನು.?
ಡಿ.ಕೆ ಶಿವಕುಮಾರ್‌ಗೆ ಪಟ್ಟ ಕಟ್ಟಿದರೆ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭವಾಗಲ್ಲ. ಯಾಕಂದ್ರೆ ಬಹುತೇಕ ಒಕ್ಕಲಿಗ ಮತಗಳನ್ನ JDS ಪಡೆಯುತ್ತಿದೆ. 
 ಕಾಂಗ್ರೆಸ್ ಜತೆಗಿರುವ ಒಕ್ಕಲಿಗ ಮತಗಳು ಎಲ್ಲೂ ಹೋಗಲ್ಲ. ಬಿಜೆಪಿಗೆ ಎದುರೇಟು ನೀಡಲು ಉತ್ತರ ಕರ್ನಾಟಕದ ಲಿಂಗಾಯತ ಮತಗಳೇ ಮುಖ್ಯ. ಜತೆಗೆ ಡಿಕೆಶಿ ಮೇಲೆ ಕೇಸ್‌ಗಳಿವೆ. ಅವು ಮುಂದೆ ತೊಡಕಾಗಬಹುದು. ಡಿಕೆಶಿ ಕೇಸ್‌ಗಳ ಬಗ್ಗೆ ಕಾನೂನು ಸಲಹೆ ಪಡೆಯಬೇಕಿದೆ. ಬಿಜೆಪಿ ಪಕ್ಷ IT, ED ಮೂಲಕ ಡಿಕೆಶಿಯನ್ನು ಟಾರ್ಗೆಟ್ ಮಾಡುತ್ತಿದೆ. ಡಿಕೆಶಿ ಮತ್ತೆ ಸಿಕ್ಕಿಬಿದ್ದರೆ ಪಕ್ಷಕ್ಕೆ ಭಾರೀ ಮುಜುಗುರವಾಗಲಿದೆ ಎಂದು  ಸಿದ್ದರಾಮಯ್ಯ ವಾದ ಮಾಡಿದ್ದಾರೆ.

ದೆಹಲಿಯಲ್ಲಿ ಸಿದ್ದರಾಮಯ್ಯ ಸಭೆ: ಕೆಪಿಸಿಸಿಗೆ ನೂತನ ಸಾರಥಿ ಯಾರು?

ಸಿದ್ದು ಟೀಂ ದೆಹಲಿಯಲ್ಲಿ ಲಾಬಿ ಮಾಡ್ತಿದ್ರೆ, ಇತ್ತ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ದೆಹಲಿಯಲ್ಲಿ ರಾಜಕೀಯ ಮಾಡಿಕೊಳ್ಳುವವರು ಮಾಡಿಲಿ ಬಿಡಿ ಎಂದು ಸಿದ್ದರಾಮಯ್ಯ ಆಂಡ್ ಟೀಂಗೆ ಟಾಂಕ್ ಕೊಟ್ಟಿದ್ದಾರೆ. ಈ ಮೂಲರ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಮುಸುಕಿ ಗುದ್ದಾಟ ಶುರುವಾಗಿದೆ.

ಕಾರ್ಯಧ್ಯಕ್ಷರ ನೇಮಕಕ್ಕೂ ಡಿಕೆಶಿ ಅಪಸ್ವರ ಎತ್ತಿದ್ದರು. ಈ ಬಗ್ಗೆ ಸಿದ್ದು ಭೇಟಿ ಮಾಡಿದ್ದರು. ಆದ್ರೆ, ಇಂದು (ಬುಧವಾರ) ರಾಹುಲ್ ಗಾಂಧಿ ಭೇಟಿ ಬಳಿಕ ಕಾರ್ಯಧ್ಯಕ್ಷರು ಇರುತ್ತಾರೆ ಎಂದು ಸಿದ್ದರಾಂಯ್ಯ ಹೇಳಿರುವುದು ಡಿಕೆಶಿಯ ಕಣ್ಣು ಕೆಂಪಾಗುವಂತೆ ಮಾಡಿದೆ. ಮೊದಲೇ ಸಿದ್ದು-ಡಿಕೆಶಿ ಅಷ್ಟಕಷ್ಟೇ. ಈಗ ಕೆಪಿಸಿಸಿ ಅಧ್ಯಕ್ಷ ಹುದ್ದೆ ವಿಚಾರವಾಗಿ ಮತ್ತೆ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಸ್ಫೋಟಗೊಳ್ಳುತ್ತಿವೆ.  

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕು ಮೂಡಿಸುತ್ತಿದ್ರೆ, ಮತ್ತೊಂದೆಡೆ ಹೈಕಮಾಂಡ್ ಅಂಗಳದಲ್ಲಿರುವ ಕೆಪಿಸಿಸಿ ಚೆಂಡು ಯಾರ ಕೈಗೆ ಸಿಗುತ್ತೆ ಎನ್ನುವುದು ಮಾತ್ರ  ತೀವ್ರ ಕುತೂಹಲ ಮೂಡಿಸಿದೆ.