ಮಾಜಿ ಸಂಸದ ಡಿಕೆ ಸುರೇಶ್‌, ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ತುಂಬಿದ ದಿನದಂದೇ 'ಕೊಟ್ಟ ಮಾತಿನಂತೆ ನಡೆಯಬೇಕು' ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಹಸ್ತಾಂತರದ ಚರ್ಚೆಗೆ ಕಿಡಿ ಹೊತ್ತಿಸಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು (ನ.20): ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ಡಿಕೆ ಸುರೇಶ್‌ ಹೇಳಿರುವ ಒಂದೇ ಒಂದು ಹೇಳಿಕೆ ಇಡೀ ಕಾಂಗ್ರೆಸ್‌ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಸರಿಯಾಗಿ ಎರಡೂವರೆ ವರ್ಷ ಆದ ದಿನದಂದೇ ಡಿಕೆ ಸುರೇಶ್‌, 'ರಾಜಕಾರಣದಲ್ಲಿ ಆಸ್ವತವಾಗಿ ಇರಬೇಕು ಅಂದ್ರೆ ಕೊಟ್ಟ ಮಾತಿನಂತೆ ನಡೆಯಬೇಕು' ಎಂದು ಹೇಳಿದ್ದಾರೆ. ಅದರೊಂದಿಗೆ ಡಿಕೆ ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಹಸ್ತಾಂತರ ಮಾಡುವಂತೆ ಮಾರ್ಮಿಕವಾಗಿ ಅವರು ಮಾತನಾಡಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಸುರೇಶ್‌, 'ಕೊಟ್ಟ ಮಾತಿನಂತೆ ನಡೆಯುವವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರಿಗೂ ಜವಾಬ್ದಾರಿ ಇದೆ. ಸಿದ್ದರಾಮಯ್ಯ ಯಾರಿಗೂ ಕೊಟ್ಟ ಮಾತಿಗೆ ತಪ್ಪಿಲ್ಲ. ಹಿಂದಿನ ಸರ್ಕಾರದಲ್ಲಿ ಕೂಡ ಮಾತಿನ ಪ್ರಕಾರವೇ ನಡೆದಿದ್ದಾರೆ. ಈಗಿನ ಸರ್ಕಾರದಲ್ಲೂ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಮುಂದೆಯೂ ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಳ್ಳುತ್ತಾರೆ. ನನ್ನಣ್ಣನಿಗೆ ಅದೃಷ್ಟ ಇದ್ದರೆ ಸಿಎಂ ಆಗುತ್ತಾನೆ. ಎಲ್ಲದಕ್ಕೂ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತದೆ. ನಾನು ಎಲ್ಲ ಮಾತಿಗೂ ಸಾಕ್ಷಿಯೇ, ನಾನು ಕಾಂಗ್ರೆಸ್ ಕಾರ್ಯಕರ್ತ' ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸರ್ಕಾರ ಎರಡುವರೆ ವರ್ಷ ಪೂರೈಸಿರುವ ವಿಚಾರದಲ್ಲಿ ಮಾತನಾಡಿದ ಅವರು, 'ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಇವತ್ತಿಗೆ ಎರಡೂವರೆ ವರ್ಷ ತುಂಬಿದೆ. ನಾವು ಕೊಟ್ಟ ಮಾತಿನಂತೆ ಸಿಎಂ ಗ್ಯಾರಂಟಿಯನ್ನ ಅನುಷ್ಠಾನ ಮಾಡಿದ್ದಾರೆ. ಅವರು ಏನು ಮಾತು ಕೊಟ್ಟಿದ್ದಾರೆ. ಆ ಮಾತಿನಂತೆ ನಡೆದುಕೊಂಡಿದ್ದಾರೆ' ಎಂದು ಹೇಳಿದ್ದಾರೆ.

ಕೆಪಿಸಿಸಿಗೆ ಯಾರೇ ಅಧ್ಯಕ್ಷರಾಗಿ ಕೆಲಸ ಮಾಡಿದರೂ ಅವರಿಗೆ ಡಿಕೆಶಿವಕುಮಾರ್ ಸಹಕಾರ ಕೊಡುತ್ತಾರೆ. ಕೆಪಿಸಿಸಿಗೆ ಡಿಸೈನ್‌ ಮಾಡೋದಿಲ್ಲ ಅಂತಾ ಡಿಕೆಶಿ ನಿಮ್ಮ ಹತ್ತಿರ ಏನೂ ಹೇಳಿಲ್ಲವಲ್ಲ. ಪಕ್ಷದ ಕೆಲಸವನ್ನು ಡಿಕೆ ಶಿವಕುಮಾರ್ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದಾರೆ. ಕೆಲವರು ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಮಾತನಾಡುತ್ತಿರುತ್ತಾರೆ. ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ಪಕ್ಷದ ಅಧ್ಯಕ್ಷರ ಜವಾಬ್ದಾರಿ. ಡಿಕೆಶಿವಕುಮಾರ್ ಗೆ ಏನೋ ದಾಖಲೆ ಅವಧಿ ಮಾಡಬೇಕು ಅನ್ನೋದಿಲ್ಲ. ಡಿಕೆಶಿ ಕನಸು ದಾಖಲೆ ಮಾಡಬೇಕು ಅನ್ನೋದಲ್ಲ. ನಾವು ರಾಜಕಾರಣದಲ್ಲಿ ಶಾಶ್ವತವಾಗಿ ಇರಬೇಕು ಅಂದರೆ, ಯಾರಿಗೆ ಆದ್ರೂ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತಿನಂತೆ ನಡೆಯುವುದು ಮುಖ್ಯ ಆಗುತ್ತದೆ. ಅವರು ರಾಜಕಾರಣದಲ್ಲಿ ಶಾಶ್ವತವಾಗಿ ಇರುತ್ತಾರೆ ಯಾರೇ ಜನರಿಗೆ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳಬೇಕಾಗಿದ್ದು ಆಡಳಿತ ನಡೆಸುವವರ ಕರ್ತವ್ಯ. ಒಂದು ಪಕ್ಷವಾಗಿ ಕೂಡ ಆ ಕೆಲಸ ಮಾಡಬೇಕು. ಡಿಕೆ ಶಿವಕುಮಾರ್ ಸಿಎಂ ಯಾವಾಗ ಆಗ್ತಾರೆ ಎಂಬುದು ನಮ್ಮ ನಿಮ್ಮ ನಡುವೆ ಆಗುವ ಚರ್ಚೆ ಅಲ್ಲ. ಅದು ಪಕ್ಷದ ವರಿಷ್ಟರ ತೀರ್ಮಾ‌ನ ಎಂದು ಹೇಳಿದ್ದಾರೆ.

ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಪಕ್ಷದ ಶಾಸಕರ ಬೆಂಬಲದಿಂದ ಆಡಳಿತ ನಡೆಸುತ್ತಿದ್ದಾರೆ. ಏನೇ ತೀರ್ಮಾನ ಮಾಡುವುದಾದರೂ ವರಿಷ್ಟರು ತೀರ್ಮಾನ ಮಾಡಬೇಕೇ ಹೊರತು ವೈಯಕ್ತಿಕ ತೀರ್ಮಾನ ಇಲ್ಲಿಲ್ಲ ಎಂದಿದ್ದಾರೆ.

ಶ್ರಮಕ್ಕೆ ಪ್ರತಿಫಲ ಖಂಡಿತವಾಗಿ ಇದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಒಂದಲ್ಲ ಒಂದು ದಿನ ಡಿಕೆಶಿವಕುಮಾರ್ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಕಾದು ನೋಡಬೇಕು. ಭರವಸೆ ಮೇಲೆಯೇ ನಾವೆಲ್ಲ ಬದುಕುತ್ತಾ ಇರುವುದು. ಎಲ್ಲರೂ ಇರುವುದು ನಂಬಿಕೆ ಮೇಲೆಯೇ. ನನಗೇನಾದರೂ ಒಳ್ಳೆಯದಾಗತ್ತೆ ಎಂದೇ ನೀವೂ ಕೆಲಸ ಮಾಡ್ತಿರೋದು. ವಚನ ಭ್ರಷ್ಟತೆಯ ಬಗ್ಗೆ ಹೈಕಮಾಂಡ್ ಅನ್ನು ಕೇಳಬೇಕು. ನಾನು ಹೈಕಮಾಂಡ್ ಭೇಟಿ ಮಾಡಿದ್ದು ರಾಜಕೀಯ ಕಾರಣಕ್ಕಲ್ಲ. ನ್ಯಾಯಾಲಯದ ಕೇಸ್ ಸಲುವಾಗಿ ನಾನು ದೆಹಲಿಗೆ ಹೋಗಿದ್ದೆ. ಸಿಎಂ ನಮಗೇನೂ ಹೊಸಬರಲ್ಲ, ಸಿಎಂ ಹಳಬರು. ನಮ್ಮ ಸಿಎಂ ಹತ್ರ ನಾನು ಮಾತಾಡುವುದಕ್ಕೆ ಆತಂಕ ಏನಿದೆ? ನಾನು ಬಿಜೆಪಿ ಸಿಎಂ ಹತ್ರ ಮಾತಾಡಿದ್ದೀನಾ.? ನಮ್ಮ ಸಿಎಂ ಹತ್ರ ನಾನು ಮಾತಾಡಿದ್ದಕ್ಕೆ ಬೇಜಾರು ಯಾಕೆ ಮಾಡ್ಕೋತಿರಿ.? ಎಂದು ಪ್ರಶ್ನೆ ಮಾಡಿದ್ದಾರೆ.

ಯಾರಿಗೇ ಏನು ಮಾತು ಕೊಟ್ಟಿದ್ದರೂ ಸಿದ್ದರಾಮಯ್ಯ ತಪ್ಪುವವರಲ್ಲ. ಕರ್ನಾಟಕದ ಜನರಿಗೆ ಕಳೆದ ಐದು ವರ್ಷಗಳ ಹಿಂದೆ ಏನೇನು ಭರವಸೆ ಕೊಟ್ಟಿದ್ದರು. ಅದೆಲ್ಲ ಭರವಸೆ ಸಿದ್ದರಾಮಯ್ಯ ಈಡೇರಿಸಿದ್ದಾರೆ. ಈಗಲೂ ಕೂಡ ಯಾರ್ ಯಾರಿಗೆ ಏನೇನು ಮಾತು ಕೊಟ್ಟಿದ್ದಾರೆ ಆ ಮಾತಿನಂತೆ ಸಿದ್ದರಾಮಯ್ಯ ನಡೆಯುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ.? ಖಂಡಿತ ಕೊಟ್ಟ ಮಾತಿನಂತೆ ನಡೆಯುತ್ತಾರೆ. ನಾನು ಯಾವತ್ತೂ ಆಶಾದಾಯಕವಾಗಿ ಇರುವವನು ನಾನು ಮುಂದೆ ನೋಡುವವನೇ ಹೊರತು ಹಿಂದೆ ನೋಡುವವನಲ್ಲ ಎಂದು ಹೇಳಿದ್ದಾರೆ.

ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವವನು ನಾನಲ್ಲ

ನಮ್ಮ ಸಿಎಂ ಅವರು, ನಮ್ಮ ಸಿಎಂ ಬಳಿ ಕೆಲವು ವಿಚಾರ ಮಾತಾಡ್ತೀವಿ. ಅಧಿಕಾರ ಹಂಚಿಕೆ ಬಗ್ಗೆ ಮಾತಾಡುವಷ್ಟು ದೊಡ್ಡವನು ನಾನಲ್ಲ. ಸಿದ್ದರಾಮಯ್ಯನವರು ಹಿರಿಯ ನಾಯಕರಿದ್ದಾರೆ, ಅವರಿಗೆ ಜವಾಬ್ದಾರಿ ಇದೆ. ಅವರು ಯಾವತ್ತೂ ಕೂಡ ಕೊಟ್ಟ ಮಾತನ್ನು ತಪ್ಪುವಂತವರಲ್ಲ ಎಂದಿದ್ದಾರೆ.

ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ

ಯಾರ್ ಯಾರ್ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗುತ್ತದೆ. ಏನೂ ಮಾಡುವುದಕ್ಕಾಗಲ್ಲ. ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಬೇರೆ ಪಕ್ಷದಲ್ಲಿ ಇದ್ದರು. ಕಾಂಗ್ರೆಸ್ ಗೆ ಬಂದ್ರು, ಸಿಎಂ ಆದರು. ಅವರ ಹಣೆಯಲ್ಲಿ ಸಿಎಂ ಸ್ಥಾನ ಬರೆದಿತ್ತು. ಬಂದ ಮೂರು ವರ್ಷಕ್ಕೇ ರೇವಂತ್ ರೆಡ್ಡಿ ಸಿಎಂ ಆದರು. ಅದರಲ್ಲೇನಿದೆ.? ಈಗ ಹರಿಯಾಣದಲ್ಲಿ ಗುಜರಾತ್ ನಲ್ಲಿ ಮೊದಲ ಬಾರಿ ಎಂಎಲ್ಎಗಳೇ ಸಿಎಂ ಆಗಿದ್ದಾರೆ. ರಾಜಕಾರಣದಲ್ಲಿ ಯಾವುದೂ ಸಾಧ್ಯವಾಗದ್ದಿಲ್ಲ, ಅಸಾಧ್ಯವೂ ಇಲ್ಲ ಎಂದಿದ್ದಾರೆ.

ವರಿಷ್ಟರನ್ನೇ ಕೇಳಿ..

ಹೈಕಮಾಂಡ್ ನಲ್ಲಿ ಆದ ಮಾತುಕತೆಗೆ ನೀವು ಸಾಕ್ಷಿಯಾಗಿದ್ದೀರಾ ಎನ್ನುವ ಪ್ರಶ್ನೆಗೆ, ನಾನು ಎಲ್ಲದಕ್ಕೂ ಸಾಕ್ಷಿಯೇ, ನಾನು ಕಾಂಗ್ರೆಸ್ ಕಾರ್ಯಕರ್ತ. ನಾನೊಬ್ಬನಿಗೆ ಅಲ್ಲ, ದೆಹಲಿಯಲ್ಲಿ ಎರಡೂವರೆ ವರ್ಷದ ಹಿಂದೆ ಏನು ತೀರ್ಮಾನ ಆಗತ್ತೆ ಎಂಬ ಕುತೂಹಲ‌ ಇತ್ತು. ನಾಲ್ಕು ಗೋಡೆಯ ಮಧ್ಯೆ ನಡೆದ ತೀರ್ಮಾನ ಅದು, ವರಿಷ್ಠರು ಮಾಡಿದ ತೀರ್ಮಾನ. ಅಧಿಕಾರ ಹಂಚಿಕೆ ಬಗ್ಗೆ ವರಿಷ್ಠರಿಗೆ ಕೇಳಬೇಕು. ವರಿಷ್ಠರನ್ನು ಹುಡುಕಿ, ಸಿಕ್ಕೇ ಸಿಗ್ತಾರೆ ನಿಮ್ಮ ಕೈಗೆ . ಇದರ ಬಗ್ಗೆ ಹೈಕಮಾಂಡ್ ಸ್ಪಷ್ಟತೆ ಕೊಟ್ಟೆ ಕೊಡುತ್ತಾರೆ. ವರಿಷ್ಠರು ನೀವು ಪ್ರಸಾರ ಮಾಡುತ್ತಿರುವ ಎಲ್ಲ ವಿಚಾರವನ್ನೂ ಗಮನಿಸುತ್ತಿದ್ದಾರೆ. ನನಗೆ ಆಸೆ ಇದೆ, ಆದರೆ ಮನವಿ ಏನಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನೇತೃತ್ವದಲ್ಲಿ ಜಿಬಿಎ ಚುನಾವಣೆ

ಜಿಬಿಎ ಚುನಾವಣೆ ಯಾರ ನೇತೃತ್ವದಲ್ಲಿ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ , ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಡಿಸಿಎಂ ಡಿಕೆಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತದೆ ಎಲ್ಲಿಯವರೆಗೆ ಡಿಕೆಶಿವಕುಮಾರ್ ಅಧ್ಯಕ್ಷರಾಗಿ ಇರುತ್ತಾರೋ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ.