ಪಕ್ಷದ ನಾಯಕರ ಒತ್ತಾಯದ ಮೇರೆಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕನಕಪುರ ತಾಲೂಕಿನ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿರುವ ಅವರು, ಹೈನುಗಾರಿಕೆ ಅಭಿವೃದ್ಧಿ ಮತ್ತು ರೈತರ ಸೇವೆಗೆ ಬದ್ಧರೆಂದು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮನಗರ (ಮೇ 17): ಮಾಜಿ ಸಂಸದ ಡಿಕೆ ಸುರೇಶ್ ಅವರು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ. ಹೀಗಾಗಿ, ಕನಕಪುರ ತಾಲೂಕಿನ ಪ್ರತಿನಿಧಿಯಾಗಿ ಬಮುಲ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಇದರ ಹಿಂದೆ ತಮ್ಮ ಜಿಲ್ಲಾ ನಾಯಕರು, ಕಾರ್ಯಕರ್ತರು ಮತ್ತು ಹಾಲಿ ಮತ್ತು ಮಾಜಿ ನಿರ್ದೇಶಕರ ಒತ್ತಡವಿದೆ ಎಂದು ತಿಳಿಸಿದ್ದಾರೆ.
'ನಮ್ಮ ಜಿಲ್ಲೆಯ ಪಕ್ಷದ ಹಿರಿಯ ನಾಯಕರು, ಶಾಸಕರು, ಮಾಜಿ ನಿರ್ದೇಶಕರು ಎಲ್ಲರೂ ಒತ್ತಡ ಹಾಕಿದ್ದಾರೆ. ಅವರ ಸಲಹೆಗಳನ್ನು ಗೌರವಿಸುತ್ತಾ ಅರ್ಜಿ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ಇಂದು ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ' ಎಂದು ಡಿಕೆ ಸುರೇಶ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಡಿಕೆ ಸುರೇಶ್ 'ರೆಸ್ಟ್'ಗೆ ಹೋಗುವುದಾಗಿ ಹೇಳಿದ್ದರುನ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಇನ್ನೂ ನನ್ನ ಮೂಡ್ ರೆಸ್ಟ್‌ನಲ್ಲೇ ಇದೆ. ಆದರೆ ಪಕ್ಷದ ಮುಖಂಡರು, ಹಿರಿಯರು ನೀಡಿರುವ ಮಾರ್ಗದರ್ಶನಕ್ಕೆ ನಾನು ಸದುಪಯೋಗ ಪಡಿಸಿಕೊಂಡಿದ್ದೇನೆ. ಕೆಲವು ವಿಚಾರಗಳಲ್ಲಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ' ಎಂದು ಸ್ಪಷ್ಟಪಡಿಸಿದರು.
ಕನಕಪುರ ತಾಲ್ಲೂಕಿನಿಂದ ಬಮೂಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಇಂದು ಬೆಂಗಳೂರಿನ ಡೈರಿ ಸರ್ಕಲ್‌ನಲ್ಲಿರುವ ಬಮೂಲ್ ಕಚೇರಿಯಲ್ಲಿ ಉಮೇದುವಾರಿಕೆಯನ್ನು ಸಲ್ಲಿಸಿದೆ. ನಮ್ಮ ತಾಲ್ಲೂಕಿನ ಹೈನುಗಾರಿಕೆಯ ಅಭಿವೃದ್ಧಿಗೆ ಶಕ್ತಿ ತುಂಬಲು ಹಾಗೂ ರೈತರ ಪರವಾಗಿ ಕೆಲಸ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. ಈ ವೇಳೆ ಶಾಸಕರುಗಳು, ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು, ಮಾಜಿ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
ಚುನಾವಣೆಗೆ ರಾಜಕೀಯ ನಂಟು? ಡಿಕೆ ಸುರೇಶ್ ಸ್ಪಷ್ಟನೆ
ರಾಮನಗರ ಜಿಲ್ಲಾ ರಾಜಕೀಯದೊಂದಿಗೆ ಹಾಲು ಒಕ್ಕೂಟದ ಚುನಾವಣೆ ಬೆರೆತು ಹೋಗಿದೆಯಾ? ಎಂಬ ಪ್ರಶ್ನೆಗೆ ಅವರು, ಇದರೊಂದಿಗೆ ಯಾವುದೇ ರಾಜಕೀಯ ಕುತೂಹಲವಿಲ್ಲ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಕಳೆದ ಹತ್ತು ವರ್ಷಗಳಿಂದ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ನಾನು ಜೊತೆಗೆ ಇರಬೇಕೆಂಬ ಒತ್ತಡವೇ ಕಾರಣ. ನಿಖಿಲ್ ಕುಮಾರಸ್ವಾಮಿ ಕೂಡಾ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಎಂಬ ಪ್ರಶ್ನೆಗೆ, 'ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
ಚನ್ನಪಟ್ಟಣ ಬೈ ಎಲೆಕ್ಷನ್‍ಗೆ ನಿರಾಕರಣೆ, ಆದರೆ ಈಗ ಒಪ್ಪಿಗೆ – ಏಕೆ?
'ಚನ್ನಪಟ್ಟಣ ಉಪಚುನಾವಣೆ ಸ್ಪರ್ಧೆಗೆ ನೀವು ಒಪ್ಪಿರಲಿಲ್ಲ. ಆದರೆ ಈಗ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೀರಿ, ಇದರಲ್ಲಿ ಏನಾದರೂ ರಾಜಕೀಯ ಕುತೂಹಲವಿದೆಯಾ? ಎಂಬ ಪ್ರಶ್ನೆಗೆ, 'ಇದರಲ್ಲೆಲ್ಲಾ ಕುತೂಹಲ ಏನಿಲ್ಲ. ಅವರ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಮುಂದೇನು ಆಗುತ್ತದೋ ನೋಡೋಣ ಎಂದು ಹೇಳಿದರು.
ಡಿ.ಕೆ. ಸುರೇಶ್ ಅವರು ಎಲ್ಲ ಹುದ್ದೆಗೂ ಅರ್ಹರು. ಅವರು ಲೋಕಸಭಾ ಸದಸ್ಯರಾಗಿರುವಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಬೇಕಾದರೆ ಯಾವ ಹುದ್ದೆ ಬೇಕಾದರೂ ಸಿಗುತ್ತಿದ್ದಿತು. ಆದರೆ ಅವರು ಯಾವುದೇ ಹುದ್ದೆ ಕೇಳಿಲ್ಲ. ಈಗ ಅವರು ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಇದು ಬಹುಮಾನ ಹುದ್ದೆಯಂತಿಲ್ಲ, ಜನಸೇವೆ ಮಾಡುವ ವೇದಿಕೆಯಾಗಿದೆ. ಇದರಿಂದ ಡಿಕೆ ಸುರೇಶ್ ಅವರ ಜನಪ್ರಿಯತೆಯು ಮತ್ತಷ್ಟು ಗಟ್ಟಿಯಾಗಲಿದೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ


