ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆಯೇ ಅಥವಾ ಹಿರಿಯ ಶಾಸಕ ರಾಮಲಿಂಗಾರೆಡ್ಡಿಗೆ ನೀಡುತ್ತಾರೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಿದೆ.

ಬೆಂಗಳೂರು (ಜೂ.3): ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಈ ಐತಿಹಾಸಿ ಕಾರ್ಯಕ್ರಮದಲ್ಲಿ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಬಳಿಕ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರಾ? ಅಥವಾ ಹಿರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಬಿಟ್ಟುಕೊಡ್ತಾರಾ? ಎಂಬ ಕುತೂಹಲ ಈಗ ರಾಜಕೀಯ ವಲಯದಲ್ಲಿ ಜೋರಾಗಿದೆ.

ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ಜವಾಬ್ದಾರಿ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ನಿರ್ವಹಿಸುವುದು ಕಷ್ಟಸಾಧ್ಯ. ಇದರ ಜೊತೆಗೆ ಮುಂದೆ ಜಿಬಿಎ ಚುನಾವಣೆ ಬರುವುದರಿಂದ ಅದರ ನಿರ್ವಹಣೆಯೇ ದೊಡ್ಡ ಸವಾಲಾಗಬಹುದು. ಈ ಹಿನ್ನೆಲೆ ಈಗಿರುವ ನಗರಾಭಿವೃದ್ಧಿ ಖಾತೆಯನ್ನ ರಾಮಲಿಂಗಾರೆಡ್ಡಿಗೆ ವಹಿಸುವ ಸಾಧ್ಯತೆ ಇದೆ.

ಈ ಸಾಧ್ಯತೆಗೆ ಕೆಲವು ಕಾರಣಗಳೂ ಇವೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ತಮಗೆ ಬೇಕಾದ ಸ್ಥಾನ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ರಾಮಲಿಂಗಾರೆಡ್ಡಿಗೆ ನಿರಾಸೆಯಾಗಿತ್ತು. ಸಿದ್ದರಾಮಯ್ಯರ ಸಂಪುಟದಲ್ಲಿ ತಮಗೆ ಮಹತ್ವದ ಖಾತೆ ಸಿಗದ ಹಿನ್ನೆಲೆ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಆದರೆ ಇದೇ ವೇಳೆ ಡಿಕೆ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರಿಗೆ ಮಾತುಕೊಟ್ಟಿದ್ದರು, 'ಮುಂದೆ ನಾನು ಸಿಎಂ ಆಗುತ್ತೇನೆ, ಆಗ ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಜವಾಬ್ದಾರಿ ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆ ಬೆಂಗಳೂರು ಅಭಿವೃದ್ಧಿ ಖಾತೆ ರಾಮಲಿಂಗಾರೆಡ್ಡಿಗೆ ನೀಡುವ ಸಾಧ್ಯತೆಯಿದೆ.

ಬೆಂಗಳೂರು ನಾಡಿ ಮಿಡಿತ ತಿಳಿದ ನಾಯಕನಿಗೆ ಜವಾಬ್ದಾರಿ

ಬೆಂಗಳೂರು ನಗರದ ರಾಜಕೀಯ ಮತ್ತು ಆಡಳಿತಾತ್ಮಕ ನಾಡಿ ಮಿಡಿತ ಅರಿತವರಿಗೆ ಮಾತ್ರ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಹೊಣೆಗಾರಿಕೆ ವಹಿಸುವುದು ಉದ್ದೇಶವಾಗಿದೆ. ಈ ವಿಚಾರವಾಗಿ ರಾಮಲಿಂಗಾರೆಡ್ಡಿ ಅವರಿಗೆ ಇಲಾಖೆಯ ಜವಾಬ್ದಾರಿ ನೀಡುವ ಹೆಚ್ಚಿನ ಸಾಧ್ಯತೆಯಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಅವರಿಗೆ ಮಾತು ಕೊಟ್ಟಂತೆ ಈ ಜವಾಬ್ದಾರಿ ವಹಿಸುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಜೋರಾಗಿದೆ.