ಎಐಸಿಸಿಯು ದೆಹಲಿಯಲ್ಲಿ ಗುರುವಾರ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಬುಧವಾರ ದೆಹಲಿಗೆ ತೆರಳಿದ್ದಾರೆ.
ಬೆಂಗಳೂರು (ಜು.14): ಎಐಸಿಸಿಯು ದೆಹಲಿಯಲ್ಲಿ ಗುರುವಾರ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಬುಧವಾರ ದೆಹಲಿಗೆ ತೆರಳಿದರು. ಭಾರತ್ ಜೋಡೋ ಯಾತ್ರೆಯ ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರೊಂದಿಗೆ ಹೈಕಮಾಂಡ್ ಗುರುವಾರ ಸಭೆ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾವ ದಿನಾಂಕದಂದು ಭಾರತ್ ಜೋಡೋ ಯಾತ್ರೆ ನಡೆಯಲಿದೆ ಹಾಗೂ ಯಾವ ಮಾರ್ಗ ಆಯ್ಕೆ ಮಾಡಲಾಗಿದೆ ಎಂಬುದು ಸೇರಿದಂತೆ ಪೂರ್ವ ಸಿದ್ಧತೆಗಳ ಕುರಿತು ಚರ್ಚೆ ನಡೆಯಲಿದೆ.
‘ಶಿವಕುಮಾರೋತ್ಸವ’ ನಡೆಸಿ: ಕಾಂಗ್ರೆಸ್‌ಗೆ ಅಭಿಮಾನಿ ಪತ್ರ
ಬೆಂಗಳೂರು: ಸಿದ್ದರಾಮಯ್ಯ ಅವರ ‘75ನೇ ವರ್ಷದ ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದಿರುವ ಡಿ.ಕೆ. ಶಿವಕುಮಾರ್ ಬೆಂಬಲಿಗರೊಬ್ಬರು, ‘ಶಿವಕುಮಾರೋತ್ಸವ-23’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಮಿತಿಗೆ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಸಿ. ರಾಜು ಅವರು ಈ ಪತ್ರ ಬರೆದಿದ್ದು, ಅದರಲ್ಲಿ ಪಕ್ಷದ ಹಿರಿಯ ನಾಯಕರಾದ ತಾವೆಲ್ಲರೂ ಸಿದ್ದರಾಮೋತ್ಸವ ಹಮ್ಮಿಕೊಂಡಿರುವುದು ಸಂತಸದ ವಿಚಾರ. ಈ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನನ್ನದೊಂದು ಮನವಿ. ಡಿ.ಕೆ. ಶಿವಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಪಕ್ಷ ಕೊಟ್ಟಂತಹ ಜವಾಬ್ದಾರಿ ನಿಭಾಯಿಸಿ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಎಂದೂ ಪಕ್ಷದ ವಿರುದ್ಧ ಮಾತನಾಡದ ಕೆಪಿಸಿಸಿ ಅಧ್ಯಕ್ಷರಾದ ದಿನದಿಂದಲೂ ಹಗಲು-ರಾತ್ರಿ ಎನ್ನದೆ ಪಕ್ಷಕ್ಕೆ ಹೊಸ ಹುರುಪು ಮೂಡಿಸಿ ಪಕ್ಷವನ್ನು ಬಲಪಡಿಸಲು ತನು, ಮನ, ಧನ ಎಲ್ಲವನ್ನೂ ಅರ್ಪಿಸುತ್ತಿದ್ದಾರೆ. ಅವರಿಗೆ ಇತ್ತೀಚೆಗಷ್ಟೇ 60 ವರ್ಷ ತುಂಬಿದ್ದು ಅವರ ಹೆಸರಿನಲ್ಲಿ ಶಿವಕುಮಾರೋತ್ಸವ -23 ಎಂಬ ಕಾರ್ಯಕ್ರಮ ಮಾಡಿ ಗೌರವ ಸಲ್ಲಿಸಬೇಕು’ ಎಂದು ಕೋರಿದ್ದಾರೆ.
ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ, ಸಿದ್ದರಾಮೋತ್ಸವ ಪದ ಬಳಸದಿರಲು ತೀರ್ಮಾನ
ನನಗೆ ಯಾವ ಉತ್ಸವವೂ ಬೇಡ: ಡಿಕೆಶಿ
ಬೆಂಗಳೂರು: ‘ಅಭಿಮಾನಿಗಳ ವೈಯಕ್ತಿಕ ಅಭಿಪ್ರಾಯಗಳಿಗೂ ನನಗೂ ಸಂಬಂಧವಿಲ್ಲ. ನನಗೆ ಯಾವ ಉತ್ಸವವೂ ಬೇಡ. ನನಗೆ ಕಾಂಗ್ರೆಸ್ ಹಾಗೂ ದೇಶದ ಉತ್ಸವ ಬೇಕು. ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಗುರಿ’ ಎಂದು ಕೆಪಿಸಿಸಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
‘ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ದಿನವೇ ಯಾರೂ ಕೂಡ ನನ್ನ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ನನ್ನ ಹಿತೈಷಿಗಳು ನನ್ನ ಉತ್ಸವ ಮಾಡಲು ಮುಂದಾಗಿದ್ದೀರಿ ಎಂದು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ನನಗಾಗಿ ಯಾವ ಉತ್ಸವ, ಹಬ್ಬ ಮಾಡುವುದೂ ಬೇಡ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ’ ಎಂದಿದ್ದಾರೆ.
