ಸರ್ಕಾರಿ ಹಾಗೂ ಸಾರ್ವಜನಿಕ ವಿಚಾರಗಳಲ್ಲಿ ಭವಿಷ್ಯ ಹೇಳುವವರನ್ನು ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಬೆಂಗಳೂರು (ಮೇ.26): ಸರ್ಕಾರಿ ಹಾಗೂ ಸಾರ್ವಜನಿಕ ವಿಚಾರಗಳಲ್ಲಿ ಭವಿಷ್ಯ ಹೇಳುವವರನ್ನು ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ. ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳಲು ವಿಶ್ವ ಹಿಂದೂ ಪರಿಷತ್‌ ನಾಯಕರು ಹಾಗೂ ಬಿಜೆಪಿ ಶಾಸಕರು ಮುಂದಾಗಿರುವ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಿಷ್ಯ ಕೇಳುವವರು, ಶಕುನ ಕೇಳುವವರು, ಜ್ಯೋತಿಷ್ಯ ಕೇಳುವವರಿಗೆ ನಾವು ಅಡ್ಡಿ ಮಾಡುವುದಿಲ್ಲ. ಇದೆಲ್ಲವೂ ವೈಯಕ್ತಿಕ ವಿಚಾರ ಹೊರತು ಸಾರ್ವಜನಿಕ ವಿಚಾರವಲ್ಲ. ಸಾರ್ವಜನಿಕ ವಿಚಾರಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದನ್ನು ನಾನು ಖಂಡಿಸುತ್ತೇನೆ. 

ಸರ್ಕಾರ, ಪೊಲೀಸ್‌ ಅಧಿಕಾರಿಗಳು ಮಧ್ಯಪ್ರವೇಶಿಸಿ ಇಂತಹವರನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದರು. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ ದೇವಾಲಯ, ಮಸೀದಿಯಂತಹ ಸಾರ್ವಜನಿಕ ವಿಚಾರಗಳಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಸರ್ಕಾರದ ಕೆಲಸಗಳಲ್ಲಿ ಪಕ್ಷ, ಸಂಘಟನೆಗಳು ತಲೆದೂರಿಸಬಾರದು. ಬಿಜೆಪಿ ಪಕ್ಷವು ಸಾರ್ವಜನಿಕರ ಭಾವನೆಗಳನ್ನು ಕೆರಳಿಸಿ ರಾಜ್ಯವನ್ನು ಕೊಲ್ಲುತ್ತಿದೆ. ಇದರಿಂದ ಆಗುವ ಹಾನಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

MLC Elections: ಬೆಳಗಾವಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ತಡವಾಗಿ ಬಂದ ಡಿಕೆಶಿ

ಶಾಂತಿಗೆ ಭಂಗ: ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜರಾಯಿ ಇಲಾಖೆ ಇದೆ. ಸರ್ಕಾರಿ ಅಧಿಕಾರಿಗಳು ಇದ್ದಾರೆ. ಇಂತಹ ವಿಚಾರದಲ್ಲಿ ಅನಗತ್ಯವಾಗಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿದರೆ ಕಾನೂನು-ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ನಾವು ಹೋರಾಡುತ್ತೇವೆ ಎಂದು ನನಗೆ ಅನೇಕರಿಂದ ಕರೆಗಳು ಬರುತ್ತಿವೆ. ಇದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ, ಹೀಗಾಗಿ ಈ ವಿಚಾರಕ್ಕೆ ಹೋಗಬೇಡಿ ಎಂದು ನಾನೇ ಸಮಾಧಾನ ಮಾಡುತ್ತಿದ್ದೇನೆ ಎಂದರು.

ತಾರತಮ್ಯ ಧೋರಣೆ: ಮೇಕೆದಾಟು ಹೋರಾಟದಲ್ಲಿ ನಿಯಮ ಉಲ್ಲಂಘನೆ ಕುರಿತು ನೋಟಿಸ್‌ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ನ್ಯಾಯಾಲಯಕ್ಕೆ ಗೌರವ ನೀಡುತ್ತೇವೆ. ಆದರೆ ಕೇವಲ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಬಿಜೆಪಿಯವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಚಿವರ ಕಾರ್ಯಕ್ರಮಗಳು, ಸರ್ಕಾರದ ಕಾರ್ಯಕ್ರಮ ಹಾಗೂ ಬಿಜೆಪಿ ನಾಯಕರ ಹುಟ್ಟುಹಬ್ಬ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಇದು ತಾರತಮ್ಯ ಧೋರಣೆಯಲ್ಲವೇ ಎಂದು ಪ್ರಶ್ನಿಸಿದರು.

Karnataka Politics ಡಿಕೆ ಬ್ರದರ್ಸ್ ವಿರುದ್ಧ ಸಿಡಿದೆದ್ದ ಡಿಕೆ ಶಿವಕುಮಾರ್ ಭಾವ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ!

ಒಬಿಸಿ ಮೀಸಲಾತಿ ನೀಡಿ ಚುನಾವಣೆ ನಡೆಸಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಹೈಕೋರ್ಚ್‌ ನೀಡಿರುವ ಸೂಚನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌ ಅವರು, ’ನಾವು ಚುನಾವಣೆಯನ್ನು ಎಂದೂ ಬೇಡ ಎನ್ನುವುದಿಲ್ಲ, ಹಿಂಜರಿಯುವುದೂ ಇಲ್ಲ. ಆದರೆ ಮೊದಲು ಸಾಮಾಜಿಕ ನ್ಯಾಯ ಸಿಗಬೇಕು. ಸಂವಿಧಾನದ ಆಶಯದಂತೆ ಜನರಿಗೆ ಅಧಿಕಾರ ಕೊಡಬೇಕು. ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗಬಾರದು. ಇದು ಸರ್ಕಾರದ ಜವಾಬ್ದಾರಿ. ನ್ಯಾಯಾಲಯ ಚುನಾವಣೆ ನಡೆಸಿ ಎಂದು ಹೇಳಿದೆ. ಆದರೆ ಸಾಮಾಜಿಕ ನ್ಯಾಯ ಕಡೆಗಣಿಸಿ ಎಂದು ಹೇಳಿಲ್ಲ. ಹೀಗಾಗಿ ಒಬಿಸಿ ಮೀಸಲಾತಿ ಕಲ್ಪಿಸಬೇಕು ಎಂದರು.