Viral video: ಪತ್ರಕರ್ತರಿಗೆ ಡಿಕೆ ಶಿವಕುಮಾರ ಬೆದರಿಕೆ, ಮಾಳವೀಯ ಆರೋಪ
ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವೀಯ ಆರೋಪ ಮಾಡಿದ್ದಾರೆ
ನವದೆಹಲಿ (ಏ.26): ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವೀಯ ಆರೋಪ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಧ್ವನಿಗೂಡಿಸಿದ್ದು ಡಿಕೆಶಿ ದರ್ಪಕ್ಕೆ ಸ್ವಾಭಿಮಾನಿ ಮಾಧ್ಯಮ ಮಿತ್ರರು ಬಹಿಷ್ಕಾರ ಹಾಕಿದ್ದಾರೆ. ಅಧಿಕಾರದ ಅಮಲಿನಲ್ಲಿ ಇರುವ ಡಿ.ಕೆ.ಶಿವಕುಮಾರ್ ಕೈಗೆ ಅಧಿಕಾರ ಸಿಕ್ಕರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಟ್ವೀಟ್:
ಡಿಕೆಶಿ(DK Shivakumar) ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಮಾಳವೀಯ (Amit Malviya)ಅವರು ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಡಿಕೆಶಿ ಗರಂ ಆಗಿ ಮಾತನಾಡುತ್ತಾರೆ. ಪತ್ರಿಕಾಗೋಷ್ಠಿಗೆ ವಿಳಂಬವಾಗಿ ಬಂದ ಕಾರಣಕ್ಕೆ ಕೆಲ ಪತ್ರಕರ್ತರು ಸುದ್ದಿಗೋಷ್ಠಿ ಬಹಿಷ್ಕರಿಸಿದ್ದು, ಇದರ ಬಗ್ಗೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ವೇಳೆ ಕೆಲ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ‘ಎಲ್ಲಿ, ಯಾವಾಗ ಪತ್ರಿಕಾಗೋಷ್ಠಿ ನಡೆಸಬೇಕು ಎಂದು ನನಗೆ ಗೊತ್ತು. ನನಗೆ ಬ್ಲಾಕ್‌ಮೇಲ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಬಳಿಕ ತಮ್ಮ ಆಪ್ತರೊಬ್ಬರನ್ನು ಕರೆದು, ಯಾರಾರಯರು ಎದ್ದು ಹೋಗಿದ್ದಾರೆ, ಅವರ ಪಟ್ಟಿಕೊಡಿ. ನಾನು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ’ ಎಂದು ಹೇಳಿದ್ದು ಕಂಡು ಬರುತ್ತದೆ.
ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ : ಡಿಕೆಶಿ
ಮಾಳವೀಯ ಕಿಡಿ:
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಮಾಳವೀಯ ‘ಪದೇ ಪದೇ ವಿಳಂಬವಾಗಿ ಬರುತ್ತಿರುವುದನ್ನು ವಿರೋಧಿಸಿ ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ಪತ್ರಕರ್ತರಿಗೆ ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಎಲ್ಲಾ ಪತ್ರಕರ್ತರೂ ಹಣ ಮತ್ತು ಹೆಂಡಕ್ಕಾಗಿ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುವವರಲ್ಲ ಎಂಬುದನ್ನು ಡಿಕೆಶಿ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬೇಕು. ಬಹಳಷ್ಟುಜನ ಇನ್ನೂ ತಮ್ಮ ಬೆನ್ನುಹುರಿ ಗಟ್ಟಿಇಟ್ಟಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.
ಶೋಭಾ ಟೀಕೆ:
ಇದೇ ವೇಳೆ ಕೆಪಿಸಿಸಿ ಕಚೇರಿಯಲ್ಲಿನ ಡಿಕೆಶಿ ಪತ್ರಿಕಾಗೋಷ್ಠಿಯನ್ನು ಪತ್ರಕರ್ತರು ಬಹಿಷ್ಕರಿಸಿದ ಬಳಿಕ ಖಾಲಿ ಇರುವ ಕುರ್ಚಿಗಳ ಫೋಟೋ ಲಗತ್ತಿಸಿ ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ‘ಕರ್ನಾಟಕ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ಮಶಾನಮೌನ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾಧ್ಯಮದವರ ಜೊತೆಗಿನ ಗೂಂಡಾ ವರ್ತನೆ, ದರ್ಪ ವಿರೋಧಿಸಿ ಸ್ವಾಭಿಮಾನಿ ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅಧಿಕಾರದ ಅಮಲಿನಲ್ಲಿ ಇರುವ ಡಿಕೆಶಿ ಕೈಗೆ ಅಧಿಕಾರ ಸಿಕ್ಕರೆ ರಾಜ್ಯದ ಪರಿಸ್ಥಿತಿ ಏನಾಗಬಹುದು? ರಾಜ್ಯದಲ್ಲಿ ಶಾಂತಿ ಕಾಪಾಡುವ ಮೂಲಕ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.
Karnataka election 2023: ಶೃಂಗೇರಿಯಲ್ಲಿಂದು ಡಿಕೆಶಿ ಚುನಾವಣಾ ಪ್ರಚಾರ