ಪಕ್ಷದ ತೀರ್ಮಾನವೇ ಅಂತಿಮ ಎನ್ನುವ ಡಿಕೆಶಿ ನಿಲುವು ಒಳ್ಳೇದು: ಸಚಿವ ಪರಮೇಶ್ವರ್
ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಹೋಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ. ಪಕ್ಷವೇ ನಮಗೆ ಅಂತಿಮ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ರ ತೀರ್ಮಾನ ಒಳ್ಳೆಯದು. ಅದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ಜ.13): ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಹೋಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ. ಪಕ್ಷವೇ ನಮಗೆ ಅಂತಿಮ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ರ ತೀರ್ಮಾನ ಒಳ್ಳೆಯದು. ಅದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಪಕ್ಷ ಉಂಟು, ನಾವುಂಟು, ನಮಗೆ ಪಕ್ಷವೇ ಅಂತಿಮ. ಪಕ್ಷದ ನಾಯಕರು ಹೇಳಿದಂತೆ ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸಿಎಂ ಹುದ್ದೆ ವಿಚಾರವಾಗಿ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಒಳ್ಳೆಯ ತೀರ್ಮಾನ. ಯಾವುದೇ ವಿಚಾರದಲ್ಲಿ ಪಕ್ಷ ಅಂತಿಮವಾಗಿ ಏನು ತೀರ್ಮಾನ ಮಾಡುತ್ತೋ ನಾವೆಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಶಿವಕುಮಾರ್ ಸಹ ಅದೇ ರೀತಿ ಮಾತನಾಡಿರುವುದು ಸಂತೋಷ ಎಂದರು.
ಶರಣಾದ ಆರು ಮಂದಿ ರಾಜ್ಯದ ಕೊನೆಯ ನಕ್ಸಲರು: ಶರಣಾಗತರಾದ ಆರು ನಕ್ಸಲರೇ ರಾಜ್ಯದ ಕೊನೆಯ ನಕ್ಸಲರು. ಇನ್ನು ಮುಂದೆ ಹೊರಗಿನಿಂದ ನಮ್ಮಲ್ಲಿಗೆ ನಕ್ಸಲರು ಬಾರದಂತೆ ನಕ್ಸಲ್ ನಿಗ್ರಹ ಪಡೆ ನಿಗಾವಹಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಶರಣಾಗತರಾಗಿರುವ ಗುಂಪಿನವರು ರವೀಂದ್ರ ಎಂಬಾತನನ್ನು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರೋ ಗೊತ್ತಿಲ್ಲ.
ಈ ಕುರಿತು ತನಿಖೆ ನಡೆದಿದೆ. ನಕ್ಸಲ್ ಚಟುವಟಿಕೆ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶರಣಾಗತರಾಗಿರುವ ಆರು ಜನರೇ ಕೊನೆಯವರು ಎಂದರು. ನಕ್ಸಲರಿಗೆ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸ್ತ್ರಾಸ್ತ್ರ ಹುಡುಕುವುದರಲ್ಲಿ ಸರ್ಕಾರ ತೋರುತ್ತಿಲ್ಲ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶರಣಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಎಸೆದಿದ್ದಾರೆಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ. ನಾವು ಮಾಡುವ ಕೆಲಸ ಮಾಡುತ್ತೇವೆ. ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆಂಬುದನ್ನು ನೆರವು ಪಡೆದು ಹುಡುಕುತ್ತಾರೆ.
Tumakuru: ನಗರಾಭಿವೃದ್ಧಿಗಾಗಿ 200 ಕೋಟಿ ರು. ಅನುದಾನ: ಸಚಿವ ಪರಮೇಶ್ವರ್
ಇದಕ್ಕೆಲ್ಲ ಪ್ರಕ್ರಿಯೆ ಇದೆ. ಅದರ ಅನುಸಾರ ಪೊಲೀಸರು ಕೆಲಸ ಮಾಡುತ್ತಾರೆ. ಇದೆಲ್ಲ ಬಿಜೆಪಿಯವರಿಗೆ ಗೊತ್ತಿಲ್ಲವೇ? ಅವರು ಕೂಡ ಸರ್ಕಾರ ನಡೆಸಿದ್ದಾರೆ. ಆಗಲೂ ಇದೇ ಪೊಲೀಸ್ ಇಲಾಖೆ ಇತ್ತಲ್ಲವೇ? ಎಂದು ತಿರುಗೇಟು ನೀಡಿದರು. ಎನ್‌ಕೌಂಟರ್‌ನಲ್ಲಿ ಮೃತ ನಕ್ಸಲ್ ವಿಕ್ರಮ್ ಗೌಡ ಅವರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಬೇಡಿಕೆ ಪರಿಶೀಲಿಸಲಾಗುತ್ತಿದೆ. ನಕ್ಸಲರು ಶರಣಾಗತರಾಗಿರುವ ಪ್ರಕರಣ ಮತ್ತು ವಿಕ್ರಮ್ ಗೌಡ ಪ್ರಕರಣ ಬೇರೆ ಬೇರೆ ಎಂದರು.