ಶುಭ ದಿನಗಳ ನಿರೀಕ್ಷೆಯಲ್ಲಿ ಕಾಂಗ್ರೆಸ್ : ತುಂಬಿದ ನವಚೈತನ್ಯ
ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆಯಲ್ಲಿ ಬಿಜೆಪಿ ಫಲಿತಾಂಶ ಕುಸಿದಿದ್ದು ಇದು ಕಾಂಗ್ರೆಸ್ ಪಾಳಯದಲ್ಲಿ ಹರ್ಷವನ್ನುಂಟು ಮಾಡಿದೆ. ಹೊಸ ಭರವಸೆಯನ್ನು ಹುಟ್ಟಿಸಿದೆ.
ಬೆಂಗಳೂರು [ಅ.25]: ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಮಟ್ಟಕ್ಕೆ ಕುಸಿದ ಬಿಜೆಪಿ ಸಾಧನೆ ಹಾಗೂ ಡಿ.ಕೆ. ಶಿವಕುಮಾರ್ ಬಿಡುಗಡೆಗೊಂಡಿರುವುದು ಉಪ ಚುನಾವಣೆಯ ಸಿದ್ಧತೆಯಲ್ಲಿರುವ ರಾಜ್ಯ ಕಾಂಗ್ರೆಸ್ ಹೊಸ ಚೈತನ್ಯ ನೀಡಿದೆ.
ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಚುನಾವಣೆ ನಾಮ್‌ಕೆವಾಸ್ತೆ ಅಷ್ಟೆ. ಬಿಜೆಪಿ ಗೆಲುವು ಶತಃಸಿದ್ಧ. ಕಾಂಗ್ರೆಸ್ ನಗಣ್ಯ ಎಂದು ಬಿಜೆಪಿ ಬಿಂಬಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳು ಇದನ್ನೇ ಹೇಳಿದ್ದವು. ಇನ್ನು ಕಾಂಗ್ರೆಸ್ ಕೂಡ ಈ ಎರಡು ರಾಜ್ಯಗಳಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕಿಟ್ಟು ಹೋರಾಟವ ಮಾಡಿರಲಿಲ್ಲ. ಸೋನಿಯಾ ಗಾಂಧಿ ಅವರೇ ಪ್ರಚಾರಕ್ಕೆ ಹೋಗಿರಲಿಲ್ಲ. ರಾಹುಲ್ ಗಾಂಧಿ ಬೆರಳೆಣಿಕೆಯಷ್ಟುಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಲ್ಲದೆ, ಕಾಂಗ್ರೆಸ್ ಮೂಲಗಳ ಪ್ರಕಾರ ಪಕ್ಷ ತನ್ನ ಇತಿಹಾಸದಲ್ಲೇ ಎದುರಿಸಿದ ಅತ್ಯಂತ ‘ಬಡತನ’ದ (ಪ್ರಚಾರಕ್ಕೆ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯದ ದೃಷ್ಟಿಯಿಂದ) ಚುನಾವಣೆಯಿದು. ಅದ್ಧೂರಿ ಪ್ರಚಾರವಿಲ್ಲದೆ, ಪತ್ರಿಕೆಗಳಿಗೆ ಜಾಹೀರಾತು ನೀಡದೆ ದೊಡ್ಡ ದೊಡ್ಡ ಪ್ರಚಾರ ಆಂದೋಲನ ನಡೆಸದೇ ಎದುರಿಸಿದ ಚುನಾವಣೆಯಾದರೂ ದೊರೆತಿರುವ ಸ್ಪಂದನೆ ತಕ್ಕಮಟ್ಟಿಗೆ ಉತ್ತಮವಾಗಿಯೇ ಇದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಈ ಫಲಿತಾಂಶವು ಸ್ಪಷ್ಟವಾಗಿ ಜನರು ಭಾವನಾತ್ಮಕ ವಿಚಾರಗಳಿಗೆ ಬದಲಾಗಿ ಜೀವನಕ್ಕೆ ಅಗತ್ಯವಾದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ ಎಂಬುದರ ಸಂಕೇತ. ಇದು ಕೇವಲ ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಮಾತ್ರವಲ್ಲ. ಇಡೀ ದೇಶದ ಜನರ ಚಿಂತನೆ ಈ ರೀತಿ ಬದಲಾಗುತ್ತಿದೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ಸಿಗ ಬಿ.ಎಲ್. ಶಂಕರ್.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದನ್ನು ಈ ಚುನಾವಣೆಯು ಸಾಬೀತು ಮಾಡಿದೆ. ಇದೇ ಟ್ರೇಂಡ್ ಮುಂದುವರೆದರೆ ರಾಜ್ಯದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಉತ್ತಮಗೊಳ್ಳುವುದು ನಿಶ್ಚಿತ ಎಂದೇ ಅವರು ಹೇಳುತ್ತಾರೆ.
ಇದಲ್ಲದೆ, ಕಾಂಗ್ರೆಸ್ಸಿಗರಿಗೆ ಈ ಚುನಾವಣೆಯಲ್ಲಿ ಪಕ್ಷಾಂತರಿಗಳು ಅನುಭವಿಸಿರುವ ದೊಡ್ಡ ಸೋಲು ಕೂಡ ಭಾರಿ ಆತ್ಮ ವಿಶ್ವಾಸ ಮೂಡಿಸಿದೆ. ಗುಜರಾತ್ ಉಪ ಚುನಾವಣೆಯಲ್ಲೂ ಪಕ್ಷಾಂತರಿಗಳಿಗೆ ಸೋಲುಂಟಾಗಿತ್ತು. ಅದೇ ರೀತಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳಿಗೆ ಸೇರಿದ ಒಟ್ಟು 40ಕ್ಕೂ ಹೆಚ್ಚು ಮಂದಿ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಬಿಜೆಪಿ ಸೆಳೆದು ಕಮಲದ ಗುರುತಿನ ಅಡಿ ಕಣಕ್ಕೆ ಇಳಿಸಿತ್ತು. ಆದರೆ, ಈ ಪೈಕಿ 20 ಮಂದಿ ಸೋಲುಂಡಿದ್ದಾರೆ.
ಇದು ಉಪ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್ಸಿಗೆ ದೊಡ್ಡ ಸಂದೇಶ. ಯಾವುದೇ ಪ್ರಬಲ ಕಾರಣವಿಲ್ಲದೆ, ವೈಯಕ್ತಿಕ ಹಿತಾಸಕ್ತಿಗಾಗಿ ಒಂದು ಪಕ್ಷವನ್ನು ತೊರೆಯುವ ಶಾಸಕರ ಬಗ್ಗೆ ಜನರು ಉತ್ತಮ ಭಾವನೆ ಹೊಂದಿರುವುದಿಲ್ಲ ಎಂಬುದು ಈ ಸಂದೇಶ. ಹೀಗಾಗಿ ಅನರ್ಹರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲೂ ಜನರ ಈ ಮನಸ್ಥಿತಿ ಪ್ರದರ್ಶನವಾಗಲಿದೆ ಎಂದೇ ಕಾಂಗ್ರೆಸ್ ನಂಬಿದೆ. ಈ ನಂಬಿಕೆಯ ಆಧಾರದ ಮೇಲೆ ಉಪ ಚುನಾವಣೆ ನಂತರ ಯಡಿಯೂರಪ್ಪ ಸರ್ಕಾರ ಕುಸಿಯಲಿದ್ದು, ಮರು ಚುನಾವಣೆ ರಾಜ್ಯದಲ್ಲಿ ಬರಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇನ್ನು ಉಪ ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಕ್ಷೇತ್ರಗಳು ಉತ್ತರ ಕರ್ನಾಟಕದ ಭಾಗದಲ್ಲಿದೆ. ಈ ಭಾಗವು ಭಾರಿ ನೆರೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರೀಕ್ಷಿಸಿದ ಪ್ರಮಾಣದಲ್ಲಿ ನೆರವು ನೀಡಿಲ್ಲ. ಅದರಲ್ಲೂ ವಿಶೇಷವಾಗಿ ಕೇಂದ್ರ ಸರ್ಕಾರ ಕರ್ನಾಟಕದ ಸಂಕಷ್ಟದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದೆ. ಮಹಾರಾಷ್ಟ್ರದಲ್ಲೂ ಇದೇ ರೀತಿಯ ಧೋರಣೆ ತೋರಿದ ಸೌರಾಷ್ಟ್ರದಲ್ಲಿ ಬಿಜೆಪಿಯ ಗಳಿಕೆ ಕುಸಿದಿದೆ. ಉತ್ತರ ಕರ್ನಾಟಕದಲ್ಲಂತೂ ನೆರೆ ಹಾವಳಿ ದೊಡ್ಡ ಪ್ರಮಾಣದಲ್ಲಿದ್ದರೂ ರಾಜ್ಯ ಸರ್ಕಾರದ ಸ್ಪಂದನೆ ಹಾಗೂ ಕೇಂದ್ರದ ನಿರ್ಲಕ್ಷ್ಯ ಈ ಭಾಗದ ಜನರನ್ನು ಕಂಗೆಡಿಸಿದೆ.
ಕಾಂಗ್ರೆಸ್ ಪಾಳಯದ ನಿರೀಕ್ಷೆಗೆ 2 ಕಾರಣ
* ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮ್ಯಾಜಿಕ್ ಹೆಚ್ಚು ನಡೆದಿದ್ದೆ ಈ ಭಾಗದಲ್ಲಿ. ಇಷ್ಟೊಂದು ಸ್ಪಂದನೆಯನ್ನು ಬಿಜೆಪಿಗೆ ಈ ಭಾಗದ ಜನರು ನೀಡಿದ್ದರೂ ಪ್ರಧಾನಿ ಮೋದಿ ಆದಿಯಾಗಿ ಕೇಂದ್ರ ನಾಯಕರು ತಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂಬ ಭಾವನೆ ಉತ್ತರ ಕರ್ನಾಟಕದ ಜನರಿಗೆ ಇದೆ ಎಂಬುದು ಕಾಂಗ್ರೆಸ್ಸಿಗರ ಅಂಬೋಣ. ಇದು ಉಪ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ನಂಬಿದೆ.
* 100 ದಿನ ತುಂಬುತ್ತಾ ಬಂದರೂ ಯಡಿಯೂರಪ್ಪ ಸರ್ಕಾರ ಜಡತ್ವದಿಂದ ಹೊರಬಂದಿಲ್ಲ. ಇದೇ ವೇಳೆ ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡಿರುವ ಸಿದ್ದರಾಮಯ್ಯ ಉತ್ಸಾಹದಿಂದ ರಾಜ್ಯ ಪ್ರವಾಸ ನಡೆಸುತ್ತಿದ್ದರೆ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಬೇಲ್ ಪಡೆದು ಜೈಲ್‌ನಿಂದ ಹೊರ ಬಂದಿರುವುದು ಕಾಂಗ್ರೆಸ್‌ಗೆ ಶಕ್ತಿ ತುಂಬಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಲಿದೆ ಎಂಬ ವಿಶ್ವಾಸದಲ್ಲಿದೆ.