ಬೆಂಗಳೂರು, (ಏ.23): ಶಾಸಕ ಎನ್.ಎ. ಹ್ಯಾರಿಸ್​ ಪುತ್ರ ಮೊಹಮ್ಮದ್​​ ನಲಪಾಡ್​ ವಿರುದ್ಧ ದಾಖಲಾಗಿರೋ ದೂರು ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

ಕೋವಿಡ್​ ವಾರ್​ ರೂಂ ಸ್ಥಾಪನೆ ವಿರೋಧಿಸಿ ಮೊಹಮ್ಮದ್​ ನಲಪಾಡ್​ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಎಸ್​ಸಿ ಸಮುದಾಯದ ಯುವ ಕಾಂಗ್ರೆಸ್​ ​ಉಪಾಧ್ಯಕ್ಷೆ ಭವ್ಯ ದೂರು ನೀಡಿದ್ದರು. ಜೊತೆಗೆ ತಮಗೆ ರಕ್ಷಣೆ ನೀಡುವಂತೆ ಕೋರಿ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು. 

ಇದಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್,​ ಇದು ರಾಜಕೀಯ ಪ್ರೇರಿತವಾದದ್ದು, ಈ ಬಗ್ಗೆ ಮಾಹಿತಿ ಪಡೆದಿದ್ದೀನಿ, ಎಲ್ಲಾ ರಾಜಕೀಯ ಎಂದು ಹೇಳುವ ಮೂಲಕ ನಲಪಾಡ್​ ಬೆನ್ನಿಗೆ ನಿಂತು ಸಮರ್ಥನೆ ಮಾಡಿಕೊಂಡರು.

ನಲಪಾಡ್-ಸಚಿನ್ ಗೌಡ ಗಲಾಟೆ: ಕಾಂಗ್ರೆಸ್ ಗೆ ಆಗುವ ನಷ್ಟದಿಂದ ಡಿಕೆಶಿ ಎಂಟ್ರಿ..!

ಕೋವಿಡ್ ವಾರ್ ರೂಂ ರಚನೆ ಮಾಡುವ ವಿಚಾರದಲ್ಲಿ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಭವ್ಯಾ ಅವರಿಗೆ ನಲಪಾಡ್ ಮತ್ತು ಆತನ ಆಪ್ತರು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ, ನಲಪಾಡ್ ಮತ್ತು ಇತರರ ವಿರುದ್ಧ ಭವ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬುಧವಾರ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣದ ಕೆಲಸದ ವೇಳೆ ಅಡ್ಡಿಪಡಿಸಿ ನಲಪಾಡ್ ಭವ್ಯಗೆ ಧಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 

 ಭವ್ಯ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿ ಬೆದರಿಕೆ ಬಗ್ಗೆ ಸಂಪೂರ್ಣ ವಿವರವನ್ನು ಉಲ್ಲೇಖಿಸಿದ್ದಾರೆ. ಶಾಸಕರಾದ ಹಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರ ವಿರುದ್ಧ ಭವ್ಯ ದೂರು ನೀಡಿದ್ದಾರೆ. 

ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು, ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಭವ್ಯ ಆರೋಪ ಮಾಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.