ಬೆಂಗಳೂರು, (ಅ.15): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆಯ ಸಿಬ್ಬಂದಿ ವಿರುದ್ಧ ಪೊಲೀಸ್ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಸಲ್ಲಿಸುವ ನೀತಿ ಸಂಹಿತಿ ಉಲ್ಲಂಘನೆ ಆರೋಪದ ಮೇಲೆ ಆರ್.ಆರ್.ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಸದಾಶಿವ ನಗರದ ನಿವಾಸದಲ್ಲಿ ಇಂದು (ಗುರುವಾರ) ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್‌ಆರ್‌ ನಗರದ ನಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಹೇಡಿತನ, ನೀಚತನದ ರಾಜಕಾರಣವಾಗಿದೆ.ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

RR ನಗರ ಬೈ ಎಲೆಕ್ಷನ್: ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ಬಿಗ್ ಶಾಕ್

ಈಗಾಗಲೇ ಸಾಕಷ್ಟು ನೊಂದು ಬೆಂದಿರುವ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ರಾಜಕಾರಣದಲ್ಲಿ ಕಣ್ಣು ಬಿಡುತ್ತಿರುವ ಅಭ್ಯರ್ಥಿ ಮೇಲೆ ಎಫ್‌ಐಆರ್‌ ದಾಖಲಿಸಿ ಪೊಲೀಸರು ಹಾಗೂ ಸರ್ಕಾರ ಅಧಿಕಾರದ ದುರ್ಬಳಕೆ ಮಾಡಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ನೀಚ ರಾಜಕಾರಣವನ್ನು ನಾನೆಂದೂ ನೋಡಿಲ್ಲ.ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿರುವ ಡಿಕೆಶಿ, ಎಫ್‌ಐಆರ್ ಪ್ರಕರಣದ ಬಗ್ಗೆ ಕಾನೂನಾತ್ಮಕವಾಗಿ ಹಾಗೂ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ....