ನಾವು ಬಳೆ ತೊಟ್ಟು ಕೂತಿಲ್ಲ, ಮುಂದೆ ಏನಾಗುತ್ತೋ ನೋಡ್ಲಿ: ಡಿಕೆಶಿ ಸವಾಲು
* ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರ
* ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
* ಹೆಸರು ಬದಲಿಸಲಿ ನೋಡಿ ಎಂದು ಎಚ್ಚರಿಕೆ ಕೊಟ್ಟ ಡಿಕೆಶಿ
ಬೆಂಗಳೂರು, (ಆ.07): ಸಿದ್ದರಾಮಯ್ಯನವರ ಮಹತ್ವ ಯೋಜನೆಯಾದ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಮತ್ತೆ ಕೂಗು ಕೇಳಿಬಂದಿದೆ.
ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸಿ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡುವ ಮೂಲಕ ವಿನಂತಿಸಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.
‘ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ನಿಲ್ಲಿಸಬೇಡಿ’
ಈ ಬಗ್ಗೆ ಇಂದು (ಶನಿವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಬಳೆ ತೊಟ್ಟು ಕೂತಿಲ್ಲ. ಹೆಸರು ಬದಲಿಸಲಿ. ಮುಂದೆ ಏನಾಗುತ್ತೋ ನೋಡ್ಲಿ ಎಂದು ಚಾಲೆಂಜ್ ಹಾಕಿದರು.
ಇನ್ನು ರಾಜೀವ್ ಗಾಂಧಿ ಹೆಸರಿನಲ್ಲಿ ನೀಡುತ್ತಿದ್ದ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ಮಾಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿರುವ ಡಿಕೆಶಿ, ಯುವಕರಿಗೆ ಮತದಾನದ ಹಕ್ಕು ಕೊಟ್ಟ ನಾಯಕ. ಯುವಕರ ಬದುಕು ಬದಲಾವಣೆಗೆ ಅನೇಕ ಕಾರ್ಯಕ್ರಮ ನೀಡಿದ್ದಾರೆ ಎಂದರು.
ದ್ಯಾನಚಂದ್ ನಮ್ಮ ದೇಶದ ಆಸ್ತಿ. ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಿ. ಬೇರೆ ಯಾವುದೇ ಹೊಸ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿ. ಗಾಂಧಿ ಕುಟುಂಬದ ಹೆಸರು ಬದಲಾವಣೆ ಸಹಿಸಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ.
ಸರ್ದರ್ ವಲ್ಲಬಾಯ್ ಪಟೇಲ್ ಪುತ್ಥಳಿ ನಿರ್ಮಾಣ ಮಾಡ್ತೀರಾ....? ಸ್ಟೇಡಿಯಂಗೆ ಹೆಸರು ಬದಲಾವಣೆ ಮಾಡ್ತೀರಾ..? ಇದು ದೇಶಭಕ್ತಿಯಾ ..? ಸಾರ್ವಜನಿಕರ ಒತ್ತಾಯದ ಮೇರೆಗೆ ಹೆಸರು ಬದಲಿಸಿದ್ದೇವೆಂದು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕಡಿಮೆ ಮಾಡಿ ಎಂದು ಸಾರ್ವಜನಿಕರ ಒತ್ತಾಯ ಇದೆ. ಕಡಿಮೆ ಮಾಡಿ ಎಂದು ಡಿಕೆಶಿ ಟಾಂಗ್ ಕೊಟ್ಟರು.
ಗಿಮಿಕ್ ಪಾಲಿಟಿಕ್ಸ್ ಮಾಡುವುದು ಬೇಡ. ನಾವು ಸರ್ಕಾರದಲ್ಲಿ ಇದ್ದಾಗ ವಾಜಪೇಯಿ ಹೆಸರಲ್ಲಿ ಇರೋದನ್ನ ಬದಲಿಸಲಿಲ್ಲ. ವಾಜಪೇಯಿ ಸಾರಿಗೆ ಹೆಸರು ಬದಲಾವಣೆ ಮಾಡಲಿಲ್ಲ. ನಾವು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದರು.