Asianet Suvarna News Asianet Suvarna News

ನಮ್ಮ ಶಾಸಕರಿಗೆ ಕರೆ ಮಾಡಿ ಎಚ್‌ಡಿಕೆ ಧಮಕಿ ಹಾಕುತ್ತಿದ್ದಾರೆ: ಡಿಕೆ ಶಿವಕುಮಾರ

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ ಎಂಬುದೆಲ್ಲವೂ ನಮಗೆ ತಿಳಿಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

DK Shivakumar reaction about Operation by BJP JDS at bengaluru rav
Author
First Published Feb 20, 2024, 7:03 AM IST

ಬೆಂಗಳೂರು (ಫೆ.20: ‘ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ ಎಂಬುದೆಲ್ಲವೂ ನಮಗೆ ತಿಳಿಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಬಿಜೆಪಿಯವರು ಅಡ್ಡಮತದಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಸುಮ್ಮನೆ ಅವರು ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಒಂದು ಪ್ರಯತ್ನ ಮಾಡೋಣ ಎಂದು ಹಾಕಿದ್ದಾರೆ. ಮತದಾನದ ದಿನ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತೀರಾ ಎಂಬ ಪ್ರಶ್ನೆಗೆ, ‘ನಮಗೆ ಅದರ ಅಗತ್ಯವಿಲ್ಲ. ಜನ ನಮಗೆ 136 ಸೀಟುಗಳನ್ನು ನೀಡಿದ್ದಾರೆ. 2 ಕ್ಷೇತ್ರದ ಪಕ್ಷೇತರರು ನಮ್ಮ ಜತೆಗಿದ್ದಾರೆ. ನಮ್ಮ ಜತೆ ಇರುವ ಬೇರೆಯವರ ಬಗ್ಗೆ ಈಗ ಮಾತನಾಡುವುದಿಲ್ಲ. ಮತದಾನದ ನಂತರ ಮಾತನಾಡುತ್ತೇವೆ’ ಎಂದಷ್ಟೇ ಹೇಳಿದರು.

ಗೋಪಾಲಯ್ಯ ಜತೆ ವೈಯಕ್ತಿಕ ಬಾಂಧವ್ಯ:

ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್ ಅವರ ಜತೆ ವಿಮಾನ ಪ್ರಯಾಣ ಹಾಗೂ ಗೋಪಾಲಯ್ಯ ಅವರ ಭೇಟಿ ವಿಚಾರವಾಗಿ ಕೇಳಿದಾಗ, ಸೋಮಶೇಖರ್ ಹಾಗೂ ಗೋಪಾಲಯ್ಯ ಅವರ ಜತೆ ವೈಯಕ್ತಿಕ ಸ್ನೇಹ, ಸಂಬಂಧಗಳಿವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.ಸೋಮಶೇಖರ್ ಅವರು ಪದೇ ಪದೇ ನಿಮ್ಮ ಜತೆ ಗುರುತಿಸಿಕೊಳ್ಳುತ್ತಿದ್ದಾರೆ ಎಂದಾಗ, ಗುರುತಿಸಿಕೊಳ್ಳುವುದಲ್ಲ. ಅವರು ಕೇವಲ ಮೂರು ವರ್ಷ ಮಾತ್ರ ಬೇರೆ ಕಡೆ ಹೋಗಿದ್ದಾರೆ. ಆದರೆ 35 ವರ್ಷಗಳಿಂದ ನಾವು ರಾಜಕೀಯವಾಗಿ ಸಂಸಾರ ಮಾಡಿದ್ದೇವೆ ಎಂದರು.

ಕಮಲನಾಥ್ ಬಿಜೆಪಿ ಸೇರಲ್ಲ:

ಕಮಲನಾಥ್‌ ಬಿಜೆಪಿ ಸೇರ್ಪಡೆ ಸುದ್ದಿ ಬಗ್ಗೆ, ಬಿಜೆಪಿ ಬರೀ ಸುಳ್ಳನ್ನು ಪ್ರಚಾರ ಮಾಡಿಕೊಂಡೇ ಇರುತ್ತದೆ. ಕಮಲನಾಥ್ ಅವರು ಬಹಳ ಹಿರಿಯ ನಾಯಕರು. ಅವರು ಈಗಷ್ಟೇ ಚುನಾವಣೆ ಮುಗಿಸಿದ್ದಾರೆ. ಅವರು ಎಲ್ಲೂ ಬಿಜೆಪಿ ಸೇರುವುದಾಗಿ ಹೇಳಿಲ್ಲ. ಇದೊಂದು ಸುಳ್ಳು ಸುದ್ದಿ ಎಂದರು.ಅವರು ಸಿದ್ಧಾಂತ ಬಿಟ್ಟು ಈ ವಯಸ್ಸಿನಲ್ಲಿ ಕಾಂಗ್ರೆಸ್ ಯಾಕೆ ತೊರೆಯುತ್ತಾರೆ? ಇನ್ನು ಮನೀಶ್ ತಿವಾರಿ ಅವರೂ ಕಾಂಗ್ರೆಸ್ ಪಕ್ಷದ ಪ್ರಮುಖ ಸಂಘಟಕರು. ಇವರೆಲ್ಲರೂ ಕಾಂಗ್ರೆಸ್ ಪಕ್ಷದ ನಾಯಕರು. ಕಮಲನಾಥ್ ಅವರೂ ಸೇರಿದಂತೆ ಯಾರೊಬ್ಬರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ದುರ್ಬಲವಾಗಿದೆ:

ಇನ್ನು ಬಿಜೆಪಿ ಬಲಿಷ್ಠವಾಗಿದ್ದರೆ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಯತ್ನಿಸುವುದೇಕೆ? ಬಿಜೆಪಿ ದುರ್ಬಲವಾಗಿರುವುದಕ್ಕೇ ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಪ್ರಧಾನಮಂತ್ರಿಗಳು ಈ ಚುನಾವಣೆಯಲ್ಲಿ 370 ಕ್ಷೇತ್ರ ಗೆಲ್ಲುವುದಾಗಿ ಹೇಳಿದ್ದಾರೆ. ಬಿಜೆಪಿ ಅಷ್ಟು ಕ್ಷೇತ್ರ ಗೆಲ್ಲುವುದು ನಿಜವೇ ಆದರೆ ಕಾಂಗ್ರೆಸ್ ನಾಯಕರನ್ನು ಯಾಕೆ ಸೆಳೆಯುತ್ತಿದ್ದಾರೆ? ಎಂದು ಪ್ರಶ್ನಿಸಿದರು.ಶಾಸಕರ ವಿರುದ್ಧದ ಎಫ್ಐಆರ್ ಖಂಡಿಸಿ ಬಿಜೆಪಿ, ವಿಎಚ್‌ಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, ‘ಬಿಜೆಪಿ ಸ್ನೇಹಿತರು ನಮಗೆ ಕೆಲವು ಪಾಠ ಕಲಿಸಿದ್ದು, ನಾವು ಆ ಪಾಠ ಕಲಿತಿದ್ದೇವೆ’ ಎಂದರು.

ಹೈಕಮಾಂಡ್ ತೀರ್ಮಾನ ಎಲ್ಲರೂ ಪಾಲಿಸಬೇಕು:

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮನಸ್ಸಿಲ್ಲ ಎಂಬ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಲೋಕಸಭೆ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನವನ್ನು ನಾನು ಸೇರಿದಂತೆ ಎಲ್ಲರೂ ಪಾಲಿಸಬೇಕು. ನಾವೆಲ್ಲ ಒಟ್ಟಾಗಿ ಕೆಲಸ ಮಾಡಿ ಹೆಚ್ಚಿನ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವಂತೆ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios