ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಶೇಕಡಾವಾರು ಮತ ಗಳಿಕೆ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬರುತ್ತಾರೋ ಅವರನ್ನೆಲ್ಲಾ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಜಿಲ್ಲಾ ಮಟ್ಟದಲ್ಲಿ ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ.

ಬೆಂಗಳೂರು (ಆ.25): ‘ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಶೇಕಡಾವಾರು ಮತ ಗಳಿಕೆ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬರುತ್ತಾರೋ ಅವರನ್ನೆಲ್ಲಾ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಜಿಲ್ಲಾ ಮಟ್ಟದಲ್ಲಿ ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ವಿವಾದಿತ ವ್ಯಕ್ತಿಗಳ ಬಗ್ಗೆ ಮಾತ್ರ ನಮ್ಮ ಗಮನಕ್ಕೆ ತನ್ನಿ.’- ಈ ರೀತಿ ಜಿಲ್ಲಾ ಮಟ್ಟದಲ್ಲಿ ‘ಆಪರೇಷನ್‌ ಹಸ್ತ’ಕ್ಕೆ ಬಹಿರಂಗ ಕರೆ ನೀಡಿದ್ದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯಿಂದ ಇತ್ತೀಚೆಗೆ ಜೆಡಿಎಸ್‌ಗೆ ಬಂದಿದ್ದ ಹಿರಿಯ ಮುಖಂಡ ಆಯನೂರು ಮಂಜುನಾಥ್‌, ಶಿಕಾರಿಪುರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು ಅಂತಿಮ ಕ್ಷಣದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ನಾಗರಾಜ್‌ ಗೌಡ, ಬಿಜೆಪಿ ಮುಖಂಡರಾದ ಮಹೇಂದ್ರನಾಥ್‌, ಧೀರರಾಜ್‌ ಹೊನ್ನವಿಲೆ, ಪರಂಧಾಮರೆಡ್ಡಿ ಸೇರಿದಂತೆ ಹಲವು ನಾಯಕರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಅವರು ಮಾತನಾಡಿದರು.

ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ

ಈ ವೇಳೆ ಅನ್ಯ ಪಕ್ಷದವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಕರೆ ನೀಡಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಯಾರು ಬರುತ್ತಾರೋ ಅವರನ್ನು ಸೇರ್ಪಡೆ ಮಾಡಿಕೊಳ್ಳಿ. ಪಕ್ಷದ ಶೇಕಡಾವಾರು ಮತ ಗಳಿಕೆ ಹೆಚ್ಚಳ ಮಾಡಿಕೊಳ್ಳಲು ಅನುವಾಗುವಂತೆ ನಿರ್ಧಾರ ಕೈಗೊಳ್ಳಿ. ವಿವಾದಿತ ವ್ಯಕ್ತಿಗಳು ಹಾಗೂ ಹೆಚ್ಚೆಚ್ಚು ಷರತ್ತುಗಳನ್ನು ವಿಧಿಸುವ ವ್ಯಕ್ತಿಗಳ ಬಗ್ಗೆ ಮಾತ್ರ ನಮ್ಮ ಗಮನಕ್ಕೆ ತನ್ನಿ. ಉಳಿದಂತೆ ಜಿಲ್ಲಾ ಮಟ್ಟದಲ್ಲೇ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಆಪರೇಷನ್‌ ಹಸ್ತಕ್ಕೆ ಹಸಿರು ನಿಶಾನೆ ತೋರಿದರು.

ಆಪರೇಷನ್‌ ಹಸ್ತದಿಂದ ಅಸಮಾಧಾನಗೊಳ್ಳುತ್ತಿರುವ ಸ್ವಪಕ್ಷೀಯರನ್ನೂ ಸಮಾಧಾನಪಡಿಸಿದ ಶಿವಕುಮಾರ್‌, ‘ಎಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರಬಲವಾಗಿಲ್ಲ, ಅಭ್ಯರ್ಥಿಗಳು ನಿರಂತರವಾಗಿ ಸ್ಪರ್ಧೆ ಮಾಡುತ್ತಿಲ್ಲವೋ ಅಂತಹ ಕಡೆಗಳಲ್ಲಿ ಮಾತ್ರ ಬೇರೆ ಪಕ್ಷದ ಪ್ರಮುಖರನ್ನು ಕರೆದುಕೊಳ್ಳುತ್ತೇವೆ. ನಮ್ಮಲ್ಲೇ ಪ್ರಬಲ ಅಭ್ಯರ್ಥಿಗಳು ಇರುವ ಕಡೆ ಬೇರೆ ಪಕ್ಷದ ಕಾರ್ಯಕರ್ತರನ್ನು ಮಾತ್ರ ಕರೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಯಾರಿಗೂ ಟಿಕೆಟ್‌ ಭರವಸೆ ಕೊಟ್ಟಿಲ್ಲ: ಹೊಸಬರ ಸೇರ್ಪಡೆಯಿಂದ ನಮ್ಮವರು ಚಿಂತಿತರಾಗಬೇಕಿಲ್ಲ. ಯಾರಿಗೂ ನಾವು ಟಿಕೆಟ್‌ ಭರವಸೆ ನೀಡಿಲ್ಲ. ಅವರ ಶಕ್ತಿ ಸಾಮರ್ಥ್ಯದ ಆಧಾರದ ಮೇಲೆ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ ಟಿಕೆಟ್‌ ಹಂಚಿಕೆ ತೀರ್ಮಾನ ಮಾಡುತ್ತದೆ. ಕಳೆದ ಬಾರಿ ನಾಗರಾಜಗೌಡಗೆ ವಿಧಾನಸಭೆ ಟಿಕೆಟ್‌ ನೀಡಿರಲಿಲ್ಲ. ಈಗ ಆಯನೂರು ಮಂಜುನಾಥ್‌ ಅವರಿಗೂ ಟಿಕೆಟ್‌ ಭರವಸೆ ನೀಡಿಲ್ಲ. ನಾವು ಚುನಾವಣೆ ವೇಳೆ ಸಮೀಕ್ಷೆ ನಡೆಸಿ ಆಗ ಟಿಕೆಟ್‌ ನಿರ್ಧಾರ ಮಾಡುತ್ತೇವೆ. ಹೀಗಾಗಿ ಎಲ್ಲರೂ ಪಕ್ಷದ ಕಾರ್ಯಕರ್ತರಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್‌, ಚಂದ್ರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್‌ ಹಾಗೂ ಮತ್ತಿತರರು ಹಾಜರಿದ್ದರು.

ಮಲೆನಾಡಿನಲ್ಲಿ ಜನರ ನಿದ್ದೆಗೆಡಿಸಿದ ಜೀರುಂಡೆ ಸದ್ದು: ಜನರು ಹೈರಾಣು

ಬಸ್ಸಿನಂತೆ ಹತ್ತಿ ಇಳಿಯುವ ಕೆಲಸ ಮಾಡಬೇಡಿ: ‘ಕಾಂಗ್ರೆಸ್‌ ಪಕ್ಷವು ಬಸ್ಸಿನ ಸೀಟಿನ ರೀತಿಯಲ್ಲ. ಹತ್ತಿ ಇಳಿಯುವ ಕೆಲಸ ಮಾಡಬಾರದು. ಇದೊಂದು ಖಾಯಂ ಜವಾಬ್ದಾರಿ. ಕಾಂಗ್ರೆಸ್‌ ಬಸ್ಸು ಹತ್ತಿದ ಮೇಲೆ ಕೊನೆಯ ತನಕ ಕುಳಿತುಕೊಳ್ಳಬೇಕು’ ಎಂದು ಡಿ.ಕೆ. ಶಿವಕುಮಾರ್‌ ಕಿವಿಮಾತು ಹೇಳಿದರು. ತನ್ಮೂಲಕ ಪದೇ ಪದೇ ಪಕ್ಷ ಬದಲಿಸುವವರಿಗೆ ಕಿವಿ ಹಿಂಡಿದ ಅವರು, ಕಾಂಗ್ರೆಸ್‌ ಎಂದರೆ ಸಮುದ್ರ. ನದಿ ನೀರು ಸಮುದ್ರ ಸೇರಲೇಬೇಕು. ಹೀಗಾಗಿ ಪಕ್ಷ ತೊರೆದಿದ್ದವರೂ ನಮ್ಮ ಪಕ್ಷಕ್ಕೆ ವಾಪಸಾಗುತ್ತಿದ್ದಾರೆ. ಕಾಂಗ್ರೆಸ್‌ ಸದಸ್ಯತ್ವ ಪಡೆಯುವುದೇ ಒಂದು ಭಾಗ್ಯ ಎಂದು ಹೇಳುವ ಮೂಲಕ ಘರ್‌ವಾಪಸಿ ಪುಷ್ಟೀಕರಿಸಿದರು. ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ 5 ಯೋಜನೆಗಳು ಜಾರಿಯಾಗಿವೆ. ಈ ರೀತಿ ಕೊಟ್ಟಭರವಸೆಗಳನ್ನು ಬಿಜೆಪಿ, ಜೆಡಿಎಸ್‌ ಯಾಕೆ ಈಡೇರಿಸಿಲ್ಲ. ಬಿಜೆಪಿಗೆ ಇಂತಹ ಒಂದು ಕಾರ್ಯಕ್ರಮವನ್ನೂ ಮಾಡಲಾಗಿಲ್ಲ.