ಜಾರಿ ನಿರ್ದೇಶನಾಲಯ ವಿರುದ್ಧ ಡಿಕೆ ಶಿವಕುಮಾರ್ ನಡೆಸುತ್ತಿರುವ ಕಾನೂನು ಹೋರಾಟ ತೀವ್ರಗೊಂಡಿದೆ. ಇದೀಗ ಶಿವಕುಮಾರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಕೋರ್ಟ್ ಇಡಿಗೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ(ನ.02): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿನ ಅಕ್ರಮಹಣ ವರ್ಗಾವಣೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಇತ್ತ ಕಾನೂನೂ ಹೋರಾಟ ತೀವ್ರಗೊಂಡಿದೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದು ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಮತ್ತು ನ್ಯಾಯಮೂರ್ತಿ ಅನೀಶ್ ದಯಾಳ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಬಳಿಕ ದೆಹಲಿ ಹೈಕೋರ್ಟ್ ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಪಿಎಮ್ ಎಲ್ ಎ ಕಾಯ್ದೆಯ ಸೆಕ್ಷನ್ 13ರ ಸಂವಿಧಾನಾತ್ಮಕತೆಯನ್ನು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಪ್ರಕರಣವನ್ನು ಡಿಸೆಂಬರ್ 15ಕ್ಕೆ ಪಟ್ಟಿ ಮಾಡಲು ಪೀಠ ಸೂಚನೆ ನೀಡಿದೆ. ದೆಹಲಿಯ ಫ್ಲಾಟ್ ನಲ್ಲಿ ಹಣ ಸಿಕ್ಕ ಪ್ರಕರಣದಲ್ಲಿ ಇ ಡಿ ಈಗಾಗಲೇ ಚಾಜ್೯ ಶೀಟ್ ದಾಖಲಿಸಿದ್ದು, ವಿಚಾರಣೆ ಆರಂಭವಾಗಿದೆ. ಇದೇ ವೇಳೆ ಡಿ ಕೆ ಶಿವಕುಮಾರ್ ಪ್ರಕರಣ ರದ್ದು ಕೋರಿ ದೆಹಲಿ ಹೈಕೋಟ್೯ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ತಾಕತ್ತಿದ್ದರೆ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಿ: ಸಿಎಂಗೆ ಡಿಕೆಶಿ ಸವಾಲು
ದೆಹಲಿ ಫ್ಲ್ಯಾಟ್‌ನಲ್ಲಿ 8 ಕೋಟಿ ರೂ ಪತ್ತೆ
ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಅವರ ಮನೆ ಮೇಲಿನ ದಾಳಿಯಲ್ಲಿ ಬರೋಬ್ಬರಿ 8 ಕೋಟಿ ರೂಪಾಯಿ ಪತ್ತೆಯಾಗಿತ್ತು. ಆದಾಯ ತೆರಿಗೆ ಇಲಾಖೆ 2017ರಲ್ಲಿ ನವದೆಹಲಿಯ ಸಫ್ದರ್ ಜಂಗ್ ಎನ್ ಕ್ಲೇವ್ನಲ್ಲಿರುವ ಫ್ಲ್ಯಾಟ್‌ಗಳಲ್ಲಿ .8.5 ಕೋಟಿ ನಗದು ಪತ್ತೆ ಹಚ್ಚಿತ್ತು. ಈ ಹಣ ಡಿ.ಕೆ.ಶಿವಕುಮಾರ್‌ಗೆ ಸೇರಿದ್ದು ಎಂದು ಇ.ಡಿ ಪರ ವಕೀಲ ನಟರಾಜ್ ವಾದಿಸುತ್ತಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಪರ ವಕೀಲರು ಮಾತ್ರ ಆ ಹಣದಲ್ಲಿ .41 ಲಕ್ಷ ಮಾತ್ರ ಡಿ.ಕೆ.ಶಿವಕುಮಾರ್‌ಗೆ ಸೇರಿದ್ದು ಎಂದು ವಾದಿಸುತ್ತಿದ್ದಾರೆ. ಜತೆಗೆ, ಇ.ಡಿ.ಪರ ವಕೀಲರು ಕೂಡ ಡಿ.ಕೆ.ಸುರೇಶ್ ಹೆಸರಲ್ಲಿರುವ 27 ಆಸ್ತಿಗಳ ವಿಚಾರವನ್ನೂ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದು, ಇದರಲ್ಲಿ 10 ಆಸ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ ಪ್ರಕರಣದಲ್ಲಿ ಇನ್ನೂ ಹಲವರ ವಿಚಾರಣೆ ನಡೆಸಬೇಕಿದೆ ಎಂದು ಕೋರ್ಟ್‌ಗೆ ವಕೀಲರು ಹೇಳಿಕೊಂಡಿದ್ದರು.
2013ರಿಂದ 2018ರವರೆಗೆ ಸಚಿವರಾಗಿದ್ದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು .74.93 ಕೋಟಿ ಆದಾಯ ಮೀರಿದ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಹೊಸ ಪ್ರಕರಣ ದಾಖಲಿಸಿರುವ ಇ.ಡಿ. ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸೋಮವಾರ ದೆಹಲಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದಾದ್ಯಂತ ಇನ್ನು ಕಾಂಗ್ರೆಸ್ ಬಸ್ ಯಾತ್ರೆ: ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್ .200 ಕೋಟಿ ಅಕ್ರಮ ಹಣವನ್ನು ಸಕ್ರಮಗೊಳಿಸಲು ಪ್ರಯತ್ನಿಸಿರುವ, .800ಕ್ಕೂ ಹೆಚ್ಚು ಕೋಟಿ ಆಸ್ತಿ ಹೊಂದಿರುವ ಶಂಕೆ ಇದೆ. 20 ಬ್ಯಾಂಕ್‌ಗಳಲ್ಲಿ ಅವರು ಖಾತೆಗಳನ್ನು ಹೊಂದಿದ್ದು, 317ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆಸಿದ್ದಾರೆಂದು ಇ.ಡಿ. ಗಂಭೀರ ಆರೋಪ ಮಾಡಿದೆ.
