ಡಿಕೆಶಿ ಸಿಡಿ ಕೇಸ್‌ನ್ನು ಸಿಬಿಐ ತನಿಖೆಗೆ ಒಳಪಡಿಸಿ: ರಮೇಶ ಜಾರಕಿಹೊಳಿ
ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ, ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬೆಳಗಾವಿ (ನ.01): ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ, ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗೆ ಇ- ಮೇಲ್ ಮೂಲಕ ಪತ್ರ ಬರೆಯಲಾಗಿದೆ. ಅಲ್ಲದೆ, ಗೃಹ ಸಚಿವ ಜಿ.ಪರಮೇಶ್ವರ ಅವರಿಗೂ ಪತ್ರ ಬರೆಯಲಾಗಿದೆ. ಡಿ.ಕೆ.ಶಿವಕುಮಾರ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕಾದರೆ ಪ್ರಕರಣವನ್ನ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸಿಡಿ ಕೇಸ್ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸ್ಪಂದನೆ ದೊರೆಯದಿದ್ದರೆ ಕಾನೂನು ಹೋರಾಟ ಮಾಡಲಾಗುವುದು. ಸಿಡಿ ಕೇಸ್‌ನಲ್ಲಿ ನಮ್ಮ ಬಳಿ ಸಾಕ್ಷಿಗಳಿವೆ. ಈ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ, ವಿಷಕನ್ಯೆ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಗೃಹ ಸಚಿವ ಜಿ.ಪರಮೇಶ್ವರ ನನಗೆ ನ್ಯಾಯ ಕೊಡಿಸುವವರಿದ್ದರೆ ಒಂದು ಗಂಟೆಯೊಳಗೆ ಸಾಕ್ಷಿ ಕೊಡುತ್ತೇನೆ. ನಾನು ಸಾಕ್ಷಿಗಳನ್ನು ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಹಂತದಲ್ಲಿ ಈ ಪ್ರಕರಣವನ್ನು ತೆಗೆದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಇದರಲ್ಲಿ ನೇರವಾಗಿ ಡಿ.ಕೆ.ಶಿವಕುಮಾರ ಪಾತ್ರ ಇರುವ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ. ರಾಜ್ಯ ಸರ್ಕಾರದಿಂದ ಸ್ಪಂದನೆ ದೊರೆಯದಿದ್ದರೆ ನ್ಯಾಯ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು. ಗೂಂಡಾಗಳನ್ನು ಕಳುಹಿಸಿ ನಮ್ಮ ಬೆಂಗಳೂರಿನ ಮನೆ ಮುಂದೆ ಅಶ್ಲೀಲ ಪದದ ಪೋಸ್ಟರ್ ಅಂಟಿಸಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ, ಅವರೆಲ್ಲರೂ ಗೂಂಡಾಗಳು. ಈ ಸಂಬಂಧ ಗೋಕಾಕ ಠಾಣೆಗೆ ದೂರು ನೀಡಿದ್ದೇನೆ ಎಂದು ಹೇಳಿದರು.
ಮತ್ತೆ ಶಾಸಕರನ್ನು ಖರೀದಿ ಮಾಡಿದ್ರೆ ನಾಶವಾಗಿ ಹೋಗ್ತಿರಿ: ಸಚಿವ ಎಚ್.ಕೆ.ಪಾಟೀಲ್
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಬ್ಲಾಕ್‌ಮೇಲ್ ಮಾಡಿ ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷನಾಗಿದ್ದಾರೆ. ಅಧ್ಯಕ್ಷ ಸ್ಥಾನ ನೀಡದಿದ್ದರೆ ಇಡಿಗೆ ನಿಮ್ಮ ಹೆಸರು ಹೇಳುತ್ತೇನೆಂದು ತಿಹಾರ್ ಜೈಲಿನಿಂದ ಸೋನಿಯಾ ಗಾಂಧಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ಹೊಸ ಬಾಂಬ್ ಸಿಡಿಸಿದರು.