ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ವೀಕ್ಷಕರನ್ನಾಗಿ ನೇಮಿಸಿ ಎಐಸಿಸಿ ಆದೇಶ ಹೊರಡಿಸಿದ್ದಾರೆ. ‘ಉಪ ಮುಖ್ಯಮಂತ್ರಿಯೊಬ್ಬರನ್ನು ವೀಕ್ಷಕರನ್ನಾಗಿ ನೇಮಿಸುವುದು ವಿರಳ ಹೀಗಾಗಿಈ ಆದೇಶ ಹೊರಬಿದ್ದ ಬೆನ್ನಲ್ಲೇ ಚರ್ಚೆಗಳು ಶುರು
ಬೆಂಗಳೂರು : ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ವೀಕ್ಷಕರನ್ನಾಗಿ ನೇಮಿಸಿ ಎಐಸಿಸಿ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆ ವೀಕ್ಷಕರನ್ನಾಗಿ ನೇಮಿಸುವುದು ವಿರಳ
‘ಉಪ ಮುಖ್ಯಮಂತ್ರಿಯೊಬ್ಬರನ್ನು ವಿಧಾನಸಭೆ ವೀಕ್ಷಕರನ್ನಾಗಿ ನೇಮಿಸುವುದು ವಿರಳ. ಹೀಗಾಗಿ ಅಸ್ಸಾಂ ಚುನಾವಣೆ ಮುಗಿಯುವವರೆಗೂ (ಮಾರ್ಚ್-ಏಪ್ರಿಲ್‌ವರೆಗೂ) ರಾಜ್ಯದಲ್ಲಿ ಅಧಿಕಾರ ಬದಲಾವಣೆಯಿಲ್ಲ’ ಎಂಬಂತಹ ಚರ್ಚೆಗಳು ಈ ಆದೇಶ ಹೊರಬಿದ್ದ ಬೆನ್ನಲ್ಲೇ ಶುರುವಾಗಿವೆ.
ಶತಾಯಗತಾಯ ಗೆಲ್ಲಲೇಬೇಕು ಎಂಬ ಛಲ
ಅಸ್ಸಾಂ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕು ಎಂಬ ಛಲದಿಂದ ಎಐಸಿಸಿಯು ಡಿ.ಕೆ.ಶಿವಕುಮಾರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದು, ಕೆಲವು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮ ಅವರು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಗೆ ಅವಮಾನ ಮಾಡಿದ್ದಾರೆದೆಂಬ ಕೋಪ ಕಾಂಗ್ರೆಸ್ಸಿಗರಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಗಾಂಧಿ ಆಸಕ್ತಿ ವಹಿಸಿ ಡಿ.ಕೆ. ಶಿವಕುಮಾರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
‘ಪ್ರಿಯಾಂಕ ಗಾಂಧಿ ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದು, ಶಿವಕುಮಾರ್ ಅವರ ಸಂಘಟನಾ ಸಾಮರ್ಥ್ಯ ಹಾಗೂ ಪಕ್ಷ ಗೆಲ್ಲಿಸುವ ಶಕ್ತಿ ಗಮನಿಸಿ ಅವರನ್ನು ವೀಕ್ಷಕರನ್ನಾಗಿ ತೆಗೆದುಕೊಂಡಿದ್ದಾರೆ ಎನ್ನುತ್ತವೆ’ ಅವರ ಆಪ್ತ ಮೂಲಗಳು.
ಕೇರಳಕ್ಕೆ ಕೆ.ಜೆ. ಜಾರ್ಜ್ ನೇಮಕ:
ಉಳಿದಂತೆ ನೆರೆ ರಾಜ್ಯ ಕೇರಳ ವಿಧಾನಸಭೆ ಚುನಾವಣೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಒಟ್ಟಾರೆ ಮುಂಬರುವ ಐದು ರಾಜ್ಯಗಳ ಚುನಾವಣೆಯ ವೀಕ್ಷಕರ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ.


