ಎಂ.ಬಿ.ಪಾಟೀಲ್ ಹೇಳಿಕೆ ಡಿ.ಕೆ.ಶಿವಕುಮಾರ್ ವಲಯದ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸದ ಡಿ.ಕೆ.ಸುರೇಶ್ ಅವರು ಎಂ.ಬಿ.ಪಾಟೀಲ್ ಅವರಿಗೆ ‘ಇವೆಲ್ಲಾ ಬೇಡ’ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಕುಣಿಗಲ್ ಶಾಸಕ ರಂಗನಾಥ್ ಅವರು ನಾವು ಸನ್ಯಾಸಿಗಳಲ್ಲ, ನಮಗೂ ಅಧಿಕಾರದ ಆಸೆ ಇದೆ ಎಂದು ಹೇಳಿದ್ದಾರೆ. ತನ್ಮೂಲಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಪರ ಬ್ಯಾಟ್ ಬೀಸಿದ್ದಾರೆ
ಬೆಂಗಳೂರು(ಮೇ.24): ‘ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ನಾಯಕರು ಈ ಹೇಳಿಕೆ ವಿರುದ್ಧ ಗರಂ ಆಗಿದ್ದಾರೆ.
ಎಂ.ಬಿ.ಪಾಟೀಲ್ ಹೇಳಿಕೆ ಡಿ.ಕೆ.ಶಿವಕುಮಾರ್ ವಲಯದ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸದ ಡಿ.ಕೆ.ಸುರೇಶ್ ಅವರು ಎಂ.ಬಿ.ಪಾಟೀಲ್ ಅವರಿಗೆ ‘ಇವೆಲ್ಲಾ ಬೇಡ’ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಕುಣಿಗಲ್ ಶಾಸಕ ರಂಗನಾಥ್ ಅವರು ನಾವು ಸನ್ಯಾಸಿಗಳಲ್ಲ, ನಮಗೂ ಅಧಿಕಾರದ ಆಸೆ ಇದೆ ಎಂದು ಹೇಳಿದ್ದಾರೆ. ತನ್ಮೂಲಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಪರ ಬ್ಯಾಟ್ ಬೀಸಿದ್ದಾರೆ.
ಕಾಂಗ್ರೆಸ್ ಒಗ್ಗಟ್ಟಿಗೆ ಬೆಂಕಿಯಿಟ್ಟ ಎಂ.ಬಿ. ಪಾಟೀಲ್: ಪವರ್ ಶೇರಿಂಗ್ ಹೇಳಿಕೆ ರಹಸ್ಯವೇನು?
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್ ಅವರು ಎಂ.ಬಿ.ಪಾಟೀಲ್ ವಿರುದ್ಧ ಕೆಂಡಾಮಂಡಲರಾಗಿದ್ದು, ‘ನಾನು ಎಂ.ಬಿ.ಪಾಟೀಲ್‌ಗೆ ತೀಕ್ಷ್ಣವಾಗಿ ಉತ್ತರ ನೀಡಬಲ್ಲೆ. ಆದರೆ ಬೇಡ, ಸಮಯ ಬಂದಾಗ ಎಲ್ಲವನ್ನೂ ಉತ್ತರಿಸುತ್ತೇನೆ. ಇವೆಲ್ಲಾ ಬೇಡ ಎಂದು ಅವರಿಗೆ ಹೇಳಿ’ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಪ್ರಸ್ತುತ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ಎಂ.ಬಿ.ಪಾಟೀಲ್ ಅವರು ನೀಡಿರುವ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮಾತನಾಡಿ ಸಂಗ್ರಹಿಸಿ. ಅಷ್ಟೇ ಹೊರತು ನಾವು ಈ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ. ಮಾತನಾಡುವ ಸಮಯದಲ್ಲಿ ಮಾತನಾಡುತ್ತೇವೆ ಎಂದರು.
ಈ ರೀತಿ ಹೇಳಿಕೆ ಸರಿಯಲ್ಲ:
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಎಂ.ಬಿ.ಪಾಟೀಲ್ ಅವರ ಹೇಳಿಕೆ ನಾನು ನೋಡಿಲ್ಲ. ಆದರೆ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವುದು ತಪ್ಪು. ಏನು ಮಾತುಕತೆ ಆಗಿದೆಯೋ ಅದು ಹೈಕಮಾಂಡ್ ಹಾಗೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ನಾಲ್ವರು ನಾಯಕರ ಮಧ್ಯೆ ಆಗಿದೆ. ಯಾವ ಮಾತುಕತೆ ಆಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸರ್ಕಾರ ಚೆನ್ನಾಗಿ ನಡೆಯಬೇಕು, ಜನರ ನಿರೀಕ್ಷೆ ಈಡೇರಿಸಬೇಕು ಎಂಬುದು ನಮ್ಮ ಈ ಕ್ಷಣದ ಮೊದಲ ಆದ್ಯತೆಯಾಗಬೇಕು. ಮುಂದಿನದು ಎಲ್ಲವೂ ವರಿಷ್ಠರ ತೀರ್ಮಾನದಂತೆ ನಡೆಯಲಿದೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ಹೇಳಿಕೆ ಅಪ್ರಸ್ತುತ:
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಮಾತುಕತೆ ನಾಲ್ಕು ಜನರಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರ ಹಂಚಿಕೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಎಂ.ಬಿ.ಪಾಟೀಲ್ ಅವರಿಗೆ ಯಾವ ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅಧಿಕಾರ ಹಂಚಿಕೆ ಹೇಳಿಕೆಯೇ ಈಗ ಅಪ್ರಸ್ತುತ ಎಂದರು.
ಇನ್ನು ಇದೇ ವೇಳೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಿತ್ತಾ? ಮತ್ತೆ ಈಗ ಯಾಕೆ ಈ ಚರ್ಚೆ ನಡೆಯುತ್ತಿವೆ? ಈ ಚರ್ಚೆಗಳೇ ಅಪ್ರಸ್ತುತ ಎಂದು ಹೇಳಿದ್ದಾರೆ. ತನ್ಮೂಲಕ ಅಧಿಕಾರ ಹಂಚಿಕೆ ಪ್ರಸ್ತಾಪವೇ ಸರಿಯಲ್ಲ ಎಂಬಂತೆ ದಿನೇಶ್ ನೀಡಿರುವ ಹೇಳಿಕೆ ಇನ್ನೂ ಕುತೂಹಲ ಹುಟ್ಟಿಸಿದೆ.
ಹೇಳಿಕೆ ಸಮರ್ಥಿಸಿಕೊಂಡ ಎಂಬಿಪಾ
ಎಂ.ಬಿ.ಪಾಟೀಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ‘ನಾನು ನನ್ನ ಸ್ವಂತ ಹೇಳಿಕೆ ನೀಡಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸುವ ವೇಳೆ ಸುರ್ಜೇವಾಲಾ ಅವರು ಹೇಳಿದ್ದನ್ನೇ ಪುನರುಚ್ಚರಿಸಿದ್ದೇನೆ. ಅಧಿಕಾರ ಹಂಚಿಕೆ ಎಂಬುದು ಏನೂ ಇಲ್ಲ. ನಮ್ಮ ಅಧಿಕಾರ ಹಂಚಿಕೆ ಜನರೊಂದಿಗೆ ಮಾತ್ರ ಎಂದು ಹೇಳಿದ್ದರು. ನಮ್ಮ ಜತೆಯೂ ಹಾಗೆಯೇ ಹೇಳಿದ್ದರು. ಹೀಗಾಗಿ ಮಾಧ್ಯಮಗಳ ಪ್ರಶ್ನೆಗೆ ಅಧಿಕಾರ ಹಂಚಿಕೆ ಏನೂ ಇಲ್ಲ ಎಂದು ಸುರ್ಜೇವಾಲಾ ಅವರು ಹೇಳಿರುವುದಾಗಿ ಹೇಳಿದ್ದೇನೆ. ಇದರಲ್ಲಿ ನನ್ನ ಸ್ವಂತ ಅಭಿಪ್ರಾಯ ಏನೂ ಇಲ್ಲ’ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ: ಡಿಕೆಶಿ
ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಯಾರಾದರೂ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಎಲ್ಲರ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನೂ ನೋಡಲು ಎಐಸಿಸಿ ಸಮಿತಿ ಇದೆ, ಎಐಸಿಸಿ ಅಧ್ಯಕ್ಷರಿದ್ದಾರೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಹೀಗಾಗಿ ನಾನು ಯಾವುದೇ ಮಾತೂ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಶಾಸಕಾಂಗ ಸಭೆ: ಎಂಬಿಪಾ ಬಗ್ಗೆ ಆಕ್ರೋಶ ಸ್ಫೋಟ?
ಬೆಂಗಳೂರು: ಸ್ಪೀಕರ್ ಚುನಾವಣೆ ಸಂಬಂಧ ಬುಧವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಈ ವೇಳೆ ‘ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದೆ. ಸರ್ಕಾರ ಸಾಂಗವಾಗಿ ನಡೆಯಬೇಕಿರುವ ಹೊತ್ತಿನಲ್ಲಿ ಎಂ.ಬಿ.ಪಾಟೀಲ್ ಅನಗತ್ಯವಾಗಿ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ್ದಾರೆ. ಇದು ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡಿದಂತಾಗಿದೆ. ಜತೆಗೆ ಪಕ್ಷದಲ್ಲೂ ಒಡಕು ಉಂಟು ಮಾಡಿದಂತಾಗಿದೆ ಎಂದು ಶಿವಕುಮಾರ್ ಪರ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಯಿದೆ. ಹೀಗಾಗಿ ತೀವ್ರ ಆರೋಪ-ಪ್ರತ್ಯಾರೋಪಗಳಿಗೆ ಶಾಸಕಾಂಗ ಪಕ್ಷದ ಸಭೆ ವೇದಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ, ಡಿಕೆಶಿಯನ್ನು ಸಿಎಂ ಆಗೋಕೆ ಬಿಡೋದಿಲ್ಲ: ಭವಿಷ್ಯದ ಎಚ್ಚರಿಕೆ ರವಾನೆ!
ಡಿಕೆಶಿ ಬಣದ ವಾದವೇನು?
1. ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಿರ್ಧರಿಸಿರುವಾಗ ಗೊಂದಲ ಹುಟ್ಟಿಸುವ ಹೇಳಿಕೆಗಳನ್ನು ನೀಡಿ ವ್ಯವಸ್ಥೆಯನ್ನು ಡಿಸ್ಟರ್ಬ್ (ಹದಗೆಡಿಸುವ) ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.
2. ಅಧಿಕಾರ ಹಂಚಿಕೆ ಬಗ್ಗೆ ನಾಲ್ಕು ಗೋಡೆ ನಡುವೆ ಏನು ಚರ್ಚೆ ನಡೆದಿದೆ ಎಂಬುದು ನಾಲ್ಕು ಜನರಿಗೆ ಮಾತ್ರ ಗೊತ್ತಿದೆ. ಆದರೆ, ಸೂಕ್ತ ಕಾಲದಲ್ಲಿ ಅಧಿಕಾರ ಹಂಚಿಕೆ ನಡೆಯಲಿದೆ ಎಂಬ ಆಶ್ವಾಸನೆ ಇದೆ. ಹೀಗಾಗಿಯೇ ವ್ಯವಸ್ಥೆ ಸುಗಮವಾಗಿ ನಡೆಯಲು ಆರಂಭಿಸಿದೆ.
3. ಆದರೆ, ಎಂ.ಬಿ.ಪಾಟೀಲ್ ಅವರಂತಹವರು ಇಂತಹ ಹೇಳಿಕೆ ನೀಡುವ ಮೂಲಕ ಗೊಂದಲ ಹುಟ್ಟುಹಾಕುತ್ತಿದ್ದಾರೆ. ಇದಕ್ಕೆ ಕೂಡಲೇ ಹೈಕಮಾಂಡ್ ಕಡಿವಾಣ ಹಾಕಬೇಕು.
ಎಂಬಿಪಾ ಬಣದ ವಾದವೇನು?
1. ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ವರಿಷ್ಠರು ಹೇಳಿದ್ದನ್ನೇ ಸಚಿವ ಎಂ.ಬಿ.ಪಾಟೀಲ್ ಅವರು ಈಗ ಹೇಳುತ್ತಿದ್ದಾರೆ.
2. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಎಂಬುದು ಜನರೊಂದಿಗೆ ಮಾತ್ರ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂದು ಹೈಕಮಾಂಡ್ ವರಿಷ್ಠರೇ ಹೇಳಿದ್ದಾರೆ.
3. ಇದನ್ನು ಖುದ್ದಾಗಿ ಎಂ.ಬಿ.ಪಾಟೀಲ್ ಬಳಿಯೂ ವರಿಷ್ಠರು ಹೇಳಿದ್ದಾರೆ. ಇನ್ನು 2013ರಲ್ಲಿ ಇಲ್ಲದ ಅಧಿಕಾರ ಹಂಚಿಕೆ ಚರ್ಚೆ ಈಗ ಏಕೆ ನಡೆಯಬೇಕು?
