ಇಂದು ಡಿ.ಕೆ. ರವಿ ಪತ್ನಿ ಕಾಂಗ್ರೆ​ಸ್‌​ ಸೇರ್ಪಡೆ| ಕುಸು​ಮಾ ಆರ್‌.​ಆರ್‌. ನಗರ ಟಿಕೆಟ್‌ ಆಕಾಂಕ್ಷಿ| ಟಿಕೆಟ್‌ ಯಾರಿಗೆ ಎಂಬ ಬಗ್ಗೆ 2 ದಿನ​ದಲ್ಲಿ ನಿರ್ಧಾ​ರ

ಬೆಂಗಳೂರು(ಅ.04): ಅಕಾಲಿಕ ಸಾವಿಗೀಡಾದ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಕುಸುಮಾ ರವಿ ಅವರು ಭಾನುವಾರ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ಇದೇ ವೇಳೆ ಶಿರಾ ವಿಧಾನಸಭಾ ಕ್ಷೇತ್ರದಿಂದಲೂ ಅನ್ಯ ಪಕ್ಷಗಳ ಕೆಲ ಸ್ಥಳೀಯ ನಾಯಕರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಕುಸುಮಾ ಅವರು ಪಕ್ಷದ ಅಚ್ಚರಿ ಅಭ್ಯರ್ಥಿಯಾಗುವ ಸುಳಿವನ್ನು ಪರೋಕ್ಷವಾಗಿ ನೀಡಿದರು. ‘ರಾಜರಾಜೇಶ್ವರಿನಗರ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂದು ಹೇಳಿದ್ದೆ. ಕುಸುಮಾ ಅವರು ಆ ಅಚ್ಚರಿ ಅಭ್ಯರ್ಥಿ ಹೌದೋ? ಅಲ್ಲವೋ?’ ಎಂದು ಪ್ರಶ್ನಿಸಿ ಇಂತಹದೊಂದು ಸುಳಿವು ನೀಡಿದರು. ಅಲ್ಲದೆ, ‘ರವಿ ಅವರ ಪತ್ನಿ ಕುಸುಮಾ ಅವರು ನಾಳೆ ಕಾಂಗ್ರೆಸ್‌ ಸದಸ್ಯತ್ವ ಪಡೆಯಲಿದ್ದಾರೆ’ ಎಂದು ಹೇಳಿದರು.

‘ರಾಜರಾಜೇಶ್ವರಿ ನಗ​ರ ಅಭ್ಯರ್ಥಿ ಆಯ್ಕೆ ವಿಚಾರವನ್ನು ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ನಿರ್ಧಾರ ಮಾಡಲಿದೆ. ರಾಮಲಿಂಗಾರೆಡ್ಡಿ ಅವರ ಸಮಿತಿ ಶಿಫಾರಸು ಮಾಡಿರುವ ಹೆಸರುಗಳನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಬಳಿಕ ಅಭ್ಯರ್ಥಿ ಅಂತಿಮಗೊಳಿಸುತ್ತೇವೆ’ ಎಂದೂ ತಿಳಿಸಿದರು.

2 ದಿನದಲ್ಲಿ ಅಭ್ಯರ್ಥಿ ಘೋಷಣೆ- ಸಿದ್ದು

ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಎರಡು ದಿನಗಳ ಒಳಗಾಗಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡುತ್ತೇವೆ’ ಎಂದರು.

‘ಹನುಮಂತರಾಯಪ್ಪ ಅವರು ಕಾಂಗ್ರೆಸ್‌ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿ ನನ್ನನ್ನು ಭೇಟಿ ಮಾಡಿದ್ದರು. ರಾಜರಾಜೇಶ್ವರಿ ನಗರ ಬೆಂಗ​ಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಡಿ.ಕೆ. ಸುರೇಶ್‌ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡುವಂತೆ ಹೇಳಿ ಕಳುಹಿಸಿದ್ದೇನೆ’ ಎಂದರು.

‘ಉಪಚುನಾವಣೆಗೆ ಕಾಂಗ್ರೆಸ್‌ ಯಾವ ಪಕ್ಷದ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಇದ್ದಾರೆ’ ಎಂದರು.