* ಆನಂದ್‌ಸಿಂಗ್ ರಾಜೀನಾಮೆ?* ಪ್ರಬಲ ಖಾತೆ ಸಿಗದಿದ್ದಕ್ಕೆ ಮುನಿಸು* ಭಾನುವಾರವೇ ಸಿಎಂಗೆ ರಾಜೀನಾಮೆ ಸಲ್ಲಿಕೆ?* ಬಿಎಸ್‌ವೈ ಬಳಿಗೆ ಬೊಮ್ಮಾಯಿ ದೌಡು* ಖಾತೆ ಬದಲಿಸ್ತಾರಾ, ವರಿಷ್ಠರಿಗೆ ಬಿಡ್ತಾರಾ?
ಬೆಂಗಳೂರು(ಆ.11): ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಕಂಡುಬರುತ್ತಿದೆ.
ಭಾನುವಾರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ನೀಡಿದ ವೇಳೆ ಮುಚ್ಚಿದ ಲಕೋಟೆಯಲ್ಲಿ ರಾಜೀನಾಮೆ ಪತ್ರವನ್ನು ನೀಡಿ ವಾಪಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮಗೆ ಈಗ ಹಂಚಿಕೆ ಮಾಡಿರುವ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಬದಲು ಬೇರೆ ಖಾತೆಗಳನ್ನು ನೀಡಬೇಕು ಎಂಬ ಬೇಡಿಕೆ ಇಟ್ಟಿರುವ ಆನಂದ್ ಸಿಂಗ್ ಅವರು ತಮ್ಮ ಪಟ್ಟನ್ನು ಸಡಿಲಿಸುವ ಸಂಭವ ಕಡಿಮೆ ಎನ್ನಲಾಗುತ್ತಿದೆ.
ಹೀಗಾಗಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಆನಂದ್ ಸಿಂಗ್ ವಿಷಯವನ್ನು ಇತ್ಯರ್ಥಗೊಳಿಸುವ ಸಂಬಂಧ ಮಂಗಳವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದೀಗ ಆನಂದ್ ಸಿಂಗ್ ಅವರ ಬೇಡಿಕೆಗೆ ಮಣಿದು ಖಾತೆ ಬದಲಿಸುತ್ತಾರಾ ಅಥವಾ ವರಿಷ್ಠರ ನಿರ್ಧಾರಕ್ಕೆ ಬಿಡುತ್ತಾರಾ ಎಂಬುದು ಕುತೂಹಲಕರವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ವಲಸೆ ಬಂದಿರುವ ಇತರ ಶಾಸಕರು ಅಥವಾ ಸಚಿವರಿಗೆ ಹೋಲಿಸಿದರೆ ಆನಂದ್ ಸಿಂಗ್ ತುಸು ಬಿರುಸಿನ ವ್ಯಕ್ತಿ. ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಯಾವ ಹಂತಕ್ಕಾದರೂ ಹೋಗುತ್ತಾರೆÜ ಎನ್ನುವುದಕ್ಕೆ ವಿಜಯನಗರ ಜಿಲ್ಲೆ ಸ್ಥಾಪನೆ ಪ್ರಕ್ರಿಯೆಯೇ ಉತ್ತಮ ನಿದರ್ಶನ. ಈಗಲೂ ಅಷ್ಟೆ. ಆನಂದ್ ಸಿಂಗ್ ತಮ್ಮ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುತ್ತವೆ ಅವರ ಆಪ್ತರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಎಲ್ಲವೂ ಸುಸೂತ್ರವಾಗಿದೆ ಎಂದುಕೊಳ್ಳುತ್ತಿರುವಾಗಲೇ ಆನಂದ್ ಸಿಂಗ್ ವಿಷಯ ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಇದೇ ರೀತಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದ ಎಂ.ಟಿ.ಬಿ.ನಾಗರಾಜ್ ಅವರನ್ನು ಹೇಗೋ ಸಮಾಧಾನ ಮಾಡುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದರು. ಆದರೆ, ಆನಂದ್ ಸಿಂಗ್ ವಿಷಯ ಅಷ್ಟುಸುಲಭವಾಗಿ ಬಗೆಹರಿಯುತ್ತಿಲ್ಲ.
