ಉಪ ಚುನಾವಣೆಯಲ್ಲಿ ಸೋಲನುಭವಿಸಿರುವ ಪಕ್ಷಾಂತರದ ಮಾಜಿ ಶಾಸಕರು, ಈಗ ಕೊನೆಯ ಅಸ್ತ್ರವಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಮುಖ್ಯಮಂತ್ರಿ ಮೇಲೆ ವಚನ ಭ್ರಷ್ಟಕಳಂಕ ಹೊರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲೆ ನೋವಾಗಿರುವ ಹೊತ್ತಿನಲ್ಲಿಯೇ ಮಾಜಿ ಶಾಸಕರ ಪ್ರಯತ್ನವು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಬೆಂಗಳೂರು[ಜ.26]: ಉಪ ಚುನಾವಣೆಯಲ್ಲಿ ಸೋಲನುಭವಿಸಿರುವ ಪಕ್ಷಾಂತರದ ಮಾಜಿ ಶಾಸಕರು, ಈಗ ಕೊನೆಯ ಅಸ್ತ್ರವಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಮುಖ್ಯಮಂತ್ರಿ ಮೇಲೆ ವಚನ ಭ್ರಷ್ಟಕಳಂಕ ಹೊರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲೆ ನೋವಾಗಿರುವ ಹೊತ್ತಿನಲ್ಲಿಯೇ ಮಾಜಿ ಶಾಸಕರ ಪ್ರಯತ್ನವು ಮತ್ತಷ್ಟುಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಮೈತ್ರಿ ಸರ್ಕಾರ ಪತನಗೊಳಿಸುವ ವೇಳೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕು ಎಂಬ ಒತ್ತಡವನ್ನು ಹೇರುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಸಚಿವ ಸ್ಥಾನ ನೀಡದಿದ್ದರೂ ಜೂನ್ ವೇಳೆಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಎಂ.ಟಿ.ಬಿ. ನಾಗರಾಜ್, ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
‘ಗೆದ್ದವರಿಗೆ ಮಂತ್ರಿಗಿರಿ ನೀಡದಿದ್ದರೆ ಸಿಎಂಗೆ ವಚನಭ್ರಷ್ಟ ಹಣೆಪಟ್ಟಿ’
ಮುಖ್ಯಮಂತ್ರಿಯ ಮೇಲೆ ಪದೇ ಪದೇ ಒತ್ತಡ ಹೇರುವ ಅಸ್ತ್ರವನ್ನು ಬಳಕೆ ಮಾಡುವ ಮೂಲಕ ಮತ್ತಷ್ಟುಇಕ್ಕಟ್ಟಿಗೆ ಸಿಲುಕಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಎಂ.ಟಿ.ಬಿ.ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರು ಚುನಾವಣೆಯಲ್ಲಿ ಸೋಲನುಭವಿಸಿದ್ದರಿಂದ ವಿಧಾನ ಪರಿಷತ್ ಸ್ಥಾನ ನೀಡಿ ಸಚಿವ ಸ್ಥಾನ ನೀಡುವುದು ಕಷ್ಟಕರವಾಗಿದೆ. ಅಲ್ಲದೇ, ಆರ್.ಶಂಕರ್‌ಗೆ ಮೇಲ್ಮನೆ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡಲಾಗಿದೆ. ಆದರೆ, ಶಾಸಕರಾಗಿ ಆಯ್ಕೆಯಾಗಿರುವ ರಿಜ್ವಾನ್ ಅರ್ಷದ್ ಸ್ಥಾನ ತೆರವಾಗಿದೆ. ಆ ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿಯಲ್ಲಿ ತಂತ್ರಗಾರಿಕೆ ನಡೆಯುತ್ತಿದೆ. ಇದರಿಂದ ಆರ್.ಶಂಕರ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ತಮಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬುದನ್ನು ಅರಿತ ಮೂವರು ಮಾಜಿ ಶಾಸಕರು ರಾಜಕೀಯ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಪದೇ ಪದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಸಹ ಆತಂಕಕ್ಕೊಳಗಾಗುವುದು ಬೇಡ. ಮೈತ್ರಿ ಸರ್ಕಾರ ಪತನಗೊಳಿಸುವ ವೇಳೆ ನೀಡಿದ ಭರವಸೆಯಂತೆ ನಡೆದುಕೊಳ್ಳುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೂ ರಾಜಕೀಯ ಬೆಳವಣಿಗೆಗಳು ಯಾವ ರೀತಿಯಲ್ಲಿ ಬೇಕಾದರೂ ನಡೆಯುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಮಾಧ್ಯಮಗಳ ಮುಂದೆ ಯಡಿಯೂರಪ್ಪ ಅವರು ತಮ್ಮನ್ನು ಕೈಬಿಡುವುದಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
