ಬೆಂಗಳೂರು [ನ.04]:  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರು ತಮಗೆ ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ತಪ್ಪುವ ಭೀತಿಯಿಂದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. 

ಡಾಲರ್ಸ್‌ ಕಾಲೋನಿಯಲ್ಲಿನ ಮುಖ್ಯಮಂತ್ರಿಗಳ ನಿವಾಸಕ್ಕೆ ಭಾನುವಾರ ಬೆಳಗ್ಗೆ ಗೋಪಾಲಯ್ಯ ಆಗಮಿಸಿ ಸಮಾಲೋಚನೆ ನಡೆಸಿದರು. ಅವರಿಗೆ ಟಿಕೆಟ್‌ ನೀಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದೆ. ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿಯ ಎನ್‌. ಹರೀಶ್‌, ನೆ.ಲ.ನರೇಂದ್ರ ಬಾಬು ಮತ್ತು ಎಂ.ನಾಗರಾಜ್‌ ಪ್ರಯತ್ನಿಸುತ್ತಿದ್ದು, ಅವರು ಗೋಪಾಲಯ್ಯಗೆ ಟಿಕೆಟ್‌ ಸಿಗದಂತೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಗೋಪಾಲಯ್ಯ ತಮ್ಮನ್ನು ಕೈಬಿಡದಂತೆ ಮನವಿ ಮಾಡಿಕೊಂಡರು. ಸುಪ್ರೀಂಕೋರ್ಟ್‌ ತೀರ್ಪು ಏನೇ ಬಂದರೂ ತಮ್ಮ ಪರ ನಿಲ್ಲಬೇಕು ಎಂದು ಕೋರಿದರು ಎನ್ನಲಾಗಿದೆ. 

ಕ್ಷೇತ್ರದಲ್ಲಿ ಮತದಾರರಲ್ಲಿ ಮತ್ತು ಕಾರ್ಯಕರ್ತರಲ್ಲಿ ಸ್ಥಳೀಯ ಬಿಜೆಪಿಗರು ತಪ್ಪು ಸಂದೇಶ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿ ನಿಯಂತ್ರಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.