ಉಪಚುನಾವಣೆಗೆ ಅನರ್ಹ ಸದಸ್ಯರು ಸ್ಪರ್ಧಿಸುವಂತಿಲ್ಲ: ಚುನಾವಣಾ ಆಯೋಗದ ಆದೇಶ
ಸೋಮವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ, ಇತ್ತ ಜಿಲ್ಲಾಡಳಿತ ಚುನಾವಣೆಗೂ ಸಜ್ಜು, 7 ಮಂದಿ ನ್ಯಾಯಾಲಯಕ್ಕೆ ತೆರಳುವ ಇಲ್ಲವೇ ಸಂಬಂಧಿಗೆ ಟಿಕೆಟ್ ಕೇಳುವ ಸಾಧ್ಯತೆ?
ಎನ್. ನಾಗೇಂದ್ರಸ್ವಾಮಿ
ಕೊಳ್ಳೇಗಾಲ(ಅ.09): ನಗರಸಭೆಯ 7ಸ್ಥಾನಗಳಿಗೆ 28ರಂದು ನಡೆಯುವ ಉಪಚುನಾವಣೆಯಲ್ಲಿ 7 ಮಂದಿ ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣಾ ಆಯೋಗ, ಜಿಲ್ಲಾಧಿಕಾರಿಗೆ ಸ್ಪಷ್ಟಪತ್ರ ಬರೆದು 7ಮಂದಿ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಿದೆ. ಈ ಆದೇಶ 7 ಮಂದಿ ಅನರ್ಹ ಸದಸ್ಯರಿಗೆ ನಿರಾಸೆಯುಂಟು ಮಾಡಿದೆ. ಪುನಃ 7ಮಂದಿ ಬಿಜೆಪಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬಹುದು ಎಂದು ಕನಸು ಕಟ್ಟಿಕೊಂಡಿದ್ದ 7 ಮಂದಿಯ ಕನಸು ಭಗ್ನವಾದಂತಾಗಿದೆ.
ಕೊಳ್ಳೇಗಾಲ ನಗರಸಭೆಯ 7 ಸ್ಥಾನಗಳಿಗೆ 28ರಂದು ನಡೆಯುವ ಉಪಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಅನರ್ಹ 7ಮಂದಿ ಸದಸ್ಯರು ಸ್ಪರ್ಧಿಸುವಂತಿಲ್ಲ ಎಂದು 7ರಂದು ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಆದೇಶ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ತರಲು 7ಮಂದಿ ಅನರ್ಹ ಸದಸ್ಯರು ಚಿಂತಿಸಿದ್ದಾರೆ.
2018ರಲ್ಲಿ ನಡೆದ ಚುನಾವಣೆಯಲ್ಲಿ 9 ಮಂದಿ ಬಿಎಸ್ಪಿ ಸದಸ್ಯರು ಆಯ್ಕೆಯಾಗಿದ್ದ ಪೈಕಿ 9 ಸದಸ್ಯರಲ್ಲಿ 7 ಮಂದಿ ವ್ಹಿಪ್ ಉಲ್ಲಂಘಿಸಿ ಸದಸ್ಯತ್ವ ಅನರ್ಹಗೊಂಡ ಹಿನ್ನೆಲೆ 7ಸ್ಥಾನಗಳಿಗೂ ಚುನಾವಣೆ ನಡೆಸಲು ಹಾಗೂ ಪುನಃ 7ಮಂದಿ ಸ್ಪರ್ಧೆಗೂ ಅವಕಾಶವಿದೆ ಎಂದು ಹೇಳಲಾಗಿತ್ತು.
ಈ ಹಿನ್ನೆಲೆ ಜಿಲ್ಲಾಡಳಿತ ಆಯೋಗದ ಆದೇಶ ಪಾಲನೆಗೆ ಸಜ್ಜಾಗಿದೆ, ಸ್ಪೆಕ್ಟರ್ ಮ್ಯಾಜಿಸ್ಪ್ರೇಟ್‌ರನ್ನು ನೇಮಿಸಿ ಕ್ರಮಕೈಗೊಂಡಿದೆ. ಏತನ್ಮದ್ಯೆ 7 ಮಂದಿ ಅನರ್ಹ ಸದಸ್ಯರು ಸಮಾಲೋಚಿಸಿ, ನ್ಯಾಯಾಲಯದಲ್ಲಿ ತಮ್ಮ ಸ್ಪರ್ಧೆಗೆ ಅವಕಾಶ ನೀಡುವಂತೆ ಇಲ್ಲದ ಪಕ್ಷದಲ್ಲಿ ಚುನಾವಣೆಗೆ ತಡೆಯಾಜ್ಞೆ ತರುವ ಸಿದ್ದತೆಯಲ್ಲಿದ್ದಾರೆ. 7ಮಂದಿ ನ್ಯಾಯಾಲಯಕ್ಕೆ ತೆರಳುವ ಇಲ್ಲವೇ ಸಂಬಂಧಿ, ಹಿತೈಷಿಗಳಿಗೆ ಟಿಕೆಟ್ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.
ಏನಿದು ಪ್ರಕರಣ?:
ಕೊಳ್ಳೇಗಾಲ ನಗರಸಭೆಯ 2,6,7,13,21,25, ಹಾಗೂ 26 ನೇ ವಾರ್ಡ್‌ಗಳಲ್ಲಿ ಚುನಾವಣೆ ನಿಗಯಾಗಿದೆ. ಈ ವಾರ್ಡ್‌ಗಳಿಂದ ನಾಗಮಣಿ, ಗಂಗಮ್ಮ ವರದರಾಜು, ಪವಿತ್ರ, ರಾಮಕೃಷ್ಣ, ನಾಸೀರ್ ಷರೀಫ್, ನಾಗಸುಂದ್ರಮ್ಮ, ಶಂಕನಪುರ ಪ್ರಕಾಶ್ ಆಯ್ಕೆಯಾಗಿದ್ದರು. ಜೊತೆಗೆ ಜಯರಾಜು, ಜಯಮೇರಿ ಸೇರಿ 9ಮಂದಿ ಬಿಎಸ್ಪಿಯಿಂದ ಗೆಲುವು ಸಾಧಿಸಿ ಶಾಸಕರ ಜೊತೆ ಗುರುತಿಸಿಕೊಂಡಿದ್ದರು. ಅಂದು 9 ಮಂದಿ ಸಹ ಶಾಸಕ ಮಹೇಶ್ ಅವರ ಬಣದಲ್ಲಿದ್ದರು, ಬದಲಾದ ರಾಜಕೀಯ ಸನ್ನಿವೇಶದಿಂದ 9ಮಂದಿಯಲ್ಲಿ ಜಯರಾಜು ಮತ್ತು ಜಯಮೇರಿ ಮೂಲ ಬಿಎಸ್ಪಿಯಲ್ಲಿ ಉಳಿದರೆ, ಉಳಿದ 7ಮಂದಿ ಶಾಸಕರ ಜೊತೆ ಗುರುತಿಸಿಕೊಂಡರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 2020ರ ಅ.29ರಲ್ಲಿ ವ್ಹಿಪ್ ಉಲ್ಲಂಘಿಸಿದ್ದರು ಎಂದು ಜಯಮೇರಿ ನೀಡಿದ ದೂರಿನ ಹಿನ್ನೆಲೆ ಅಂದಿನ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಸದಸ್ಯತ್ವ ಅನರ್ಹಗೊಳಿಸಿದ್ದರು, ಈ ಬೆಳವಣಿಗೆ ಪ್ರಶ್ನಿಸಿ 7ಮಂದಿ ಹೈಕೋರ್ಚ್ ಮೆಟ್ಟಿಲೆರಿದ್ದರು, ಬಳಿಕ ನಡೆದ ವಿಚಾರಣೆಯಲ್ಲಿ ಪ್ರಸ್ತುತ ಚುನಾವಣಾ ಆಯೋಗ ಚುನಾವಣೆ ನಡೆಸಲು 7ವಾರ್ಡ್‌ಗಳಿಗೂ ಸೂಚಿಸಿದೆ. ಪುನಃ ಉಪಚುನಾವಣೆಯಲ್ಲಿ ಅನರ್ಹ 7ಮಂದಿ ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಿದೆ. ಜಿಲ್ಲಾಡಳಿತ, ತಾ.ಆಡಳಿತ ಚುನಾವಣೆಗೆ ಸಜ್ಜಾಗಿದ್ದು, ಅಗತ್ಯ ಕ್ರಮಕೈಗೊಂಡಿದೆ.
ಉಪ ಚುನಾವಣೆ : ಸ್ಥಾನ ಉಳಿವಿಗೆ ಶಾಸಕರ ಕಸರತ್ತು
ಶಾಸಕರ ಜೊತೆ ಚರ್ಚಿಸುವ ಸಾಧ್ಯತೆ?:
ಶಾಸಕ ಮಹೇಶ್ ಆಪ್ತರಾಗಿರುವ 7ಮಂದಿಯೂ ಶಾಸಕ ಮಹೇಶ್ ಅವರ ಜೊತೆ ಅಂತಿಮವಾಗಿ ಚರ್ಚಿಸಿ ನಂತರ ತಮ್ಮ ತೀರ್ಮಾನವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರು ಉಪಚುನಾವಣೆಗೆ ಅವಕಾಶ ಕಲ್ಪಿಸುತ್ತಾರೆ? ಇಲ್ಲವೇ ಕಾನೂನು ತಜ್ಞರ ಸಲಹೆ ಪಡೆದು ಯಾವ ತೀರ್ಮಾನ ಪ್ರಕಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ನಾಮಪತ್ರ ಸಲ್ಲಿಕೆಗೆ 17ಕಡೆ ದಿನ
ಕೊಳ್ಳೇಗಾಲ ನಗರಸಭೆ 7 ವಾರ್ಡ್‌ಗಳಿಗೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಲು 17 ಕಡೆಯ ದಿನವಾಗಿದೆ. 18 ರಂದು ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳಲು 20 ಕಡೆ ದಿನವಾಗಿದೆ. 28 ರಂದು ಬೆಳಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅಗತ್ಯವಿದ್ದಲ್ಲಿ 30 ರಂದು ಮರುಮತದಾನ ನಡೆಯಲಿದೆ. 31ರಂದು ಎಣಿಕಾ ಕಾರ್ಯ ಜರುಗಲಿದೆ.