ಬೆಂಗಳೂರು [ಮಾ.07]:  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷಗಿರಿಯ ಕಗ್ಗಂಟು ಅಷ್ಟುಸುಲಭವಾಗಿ ಪರಿಹಾರವಾಗುವ ಲಕ್ಷಣಗಳಿಲ್ಲ. ಇನ್ನೇನು ಈ ಹುದ್ದೆ ಅಲಂಕರಿಸಲಿದ್ದಾರೆ ಎಂದೇ ಬಿಂಬಿತರಾಗಿದ್ದ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ ಭಾರಿ ಅಡೆ-ತಡೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅಡೆತಡೆಯ ಪರಿಣಾಮವಾಗಿ ಮೂರು ಸಂಭವನೀಯ ಸಾಧ್ಯತೆಗಳ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅವು:

1​. ಏಪ್ರಿಲ್‌ನಲ್ಲಿ ಎಐಸಿಸಿ ಪುನರ್‌ ರಚನೆ ನಡೆಯಲಿದ್ದು, ಅಲ್ಲಿಯವವರೆಗೂ ಹಾಲಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೇ ಅಧ್ಯಕ್ಷರಾಗಿ ಮುಂದುವರೆಯಬಹುದು.

2. ರಾಜ್ಯ ಕಾಂಗ್ರೆಸ್‌ನ ಎಲ್ಲ ಗುಂಪುಗಳು ಒಪ್ಪುವಂತಹ ವ್ಯಕ್ತಿ (ಮಲ್ಲಿಕಾರ್ಜುನ ಖರ್ಗೆ?) ಅಧ್ಯಕ್ಷ ಗಾದಿಗೇರಬಹುದು.

3. ಎದುರಾಗಿರುವ ಎಲ್ಲ ಅಡೆ-ತಡೆ ಮೀರಿ, ಹೈಕಮಾಂಡ್‌ನ ತಮ್ಮ ಸಂಪರ್ಕದ ಲಾಭ ಪಡೆದು ಶಿವಕುಮಾರ್‌ ಅವರೇ ಅಧ್ಯಕ್ಷರಾಗಬಹುದು.

ಮೂಲಗಳ ಪ್ರಕಾರ ಈ ಮೂರು ಸಾಧ್ಯತೆಗಳ ಪೈಕಿ ಕೊನೆಯ ಸಾಧ್ಯತೆ ಕೈಗೂಡಬೇಕಾದರೆ ಶಿವಕುಮಾರ್‌ ಹರಸಾಹಸ ನಡೆಸಬೇಕಾಗಬಹುದು. ಇದಕ್ಕೆ ಕಾರಣ ಶಿವಕುಮಾರ್‌ಗೆ ಅಧ್ಯಕ್ಷ ಗಾದಿ ನೀಡುವುದಕ್ಕೆ ರಾಜ್ಯದ ಹಿರಿಯ ನಾಯಕರು ವ್ಯಕ್ತಪಡಿಸಿರುವ ತೀವ್ರ ವಿರೋಧ.

ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗ ಹಾಗೂ ಅನುಭವಿಸಿದ ದಾಳಿಗಳಿಂದಾಗಿ ಅಧ್ಯಕ್ಷ ಗಾದಿ ತಮಗೆ ದೊರೆಯಬೇಕು ಎಂಬ ವಾದವನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಭರ್ಜರಿ ಲಾಬಿ ನಡೆಸಿದ್ದ ಶಿವಕುಮಾರ್‌ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಇಷ್ಟುದಿನ ಭಾವಿಸಲಾಗಿತ್ತು. ಈಗ ಬಯಲಾಗಿರುವ ಸಂಗತಿಯೆಂದರೆ, ಸಿದ್ದರಾಮಯ್ಯ ಮಾತ್ರವಲ್ಲದೆ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಸೇರಿದಂತೆ ರಾಜ್ಯದ ಹಲವು ಹಿರಿಯ ನಾಯಕರು ಶಿವಕುಮಾರ್‌ಗೆ ಹುದ್ದೆ ನೀಡುವುದರ ವಿರುದ್ಧವಿದ್ದಾರೆ.

ಶಿವಕುಮಾರ್‌ಗೆ ಈ ಹು

'ದೊರೆಸ್ವಾಮಿ ವಿರುದ್ಧ ಮಾತನಾಡುವವರಿಗೆ ಹುಚ್ಚು ಹಿಡಿದಿದ್ದು, ರೇಬಿಸ್‌ ಚುಚ್ಚುಮದ್ದು ಹಾಕಲಿ'...

ರಾಜ್ಯದ ಹಿರಿಯ ನಾಯಕರ ಈ ಮನಸ್ಥಿತಿ ಕಂಡ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ, ಇನ್ನೇನು ಸೋನಿಯಾ ಗಾಂಧಿ ಅವರ ಸಹಿಗೆ ಸಿದ್ಧವಾಗಿದ್ದ ಶಿವಕುಮಾರ್‌ ನೇಮಕ ಆದೇಶವನ್ನು ತಡೆ ಹಿಡಿದರು ಎಂದು ಹೇಳಲಾಗುತ್ತಿದೆ. ಇನ್ನು, ಪೈಪೋಟಿಯಲ್ಲಿದ್ದ ಎಂ.ಬಿ.ಪಾಟೀಲ್‌ ಅವರಿಗೆ ಸಿದ್ದರಾಮಯ್ಯ ಹೊರತಾಗಿ ಇತರ ಗುಂಪುಗಳ ವಿರೋಧವಿದೆ. ಒಂದು ವೇಳೆ ಎಂ.ಬಿ.ಪಾಟೀಲ್‌ ಅಧ್ಯಕ್ಷರಾದರೆ ಲಿಂಗಾಯತ ಧರ್ಮದ ವಿಚಾರದಲ್ಲಿ ತಾವು ಹೊಂದಿರುವ ನಿಲುವನ್ನು ಪಕ್ಷದ ನಿಲುವು ಎಂದು ಬಿಂಬಿಸಬಹುದು. ಇದರಿಂದ ಪಕ್ಷ ಮುಜುಗರಕ್ಕೆ ಸಿಲುಕಬೇಕಾಗುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್‌ ಅವರ ಹೆಸರನ್ನು ಒಪ್ಪಲು ತಯಾರಿಲ್ಲ ಎನ್ನಲಾಗುತ್ತಿದೆ.

ಹೀಗಾಗಿ, ಹೈಕಮಾಂಡ್‌ ರಾಜ್ಯ ಕಾಂಗ್ರೆಸ್‌ನ ಎಲ್ಲಾ ಗುಂಪುಗಳು ಒಪ್ಪುವಂತಹ ವ್ಯಕ್ತಿಗೆ ಈ ಹುದ್ದೆ ನೀಡುವುದು ಸೂಕ್ತ ಎಂಬ ಭಾವನೆ ಹೊಂದಿದ್ದು, ಹುದ್ದೆ ವಹಿಸಿಕೊಳ್ಳುವ ಮನಸ್ಸಿದೆಯೇ ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದೆ. ಆದರೆ, ಖರ್ಗೆ ತಮ್ಮ ಒಪ್ಪಿಗೆಯನ್ನು ಇನ್ನೂ ನೀಡಿಲ್ಲ ಎನ್ನಲಾಗುತ್ತಿದೆ.

ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಎಐಸಿಸಿ ಪುನರ್‌ ರಚನೆಯಾಗುವವರೆಗೂ ಹಾಲಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವಂತೆ ಸೂಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ, ದಿನೇಶ್‌ ಗುಂಡೂರಾವ್‌ ಅವರು ಬಹಿರಂಗವಾಗಿ ತಮಗೆ ಈ ಹುದ್ದೆ ಹೊಣೆ ಸಾಕು. ಸಾಧ್ಯವಾದಷ್ಟುಬೇಗ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದೇ ಹೇಳಿಕೆ ನೀಡುತ್ತಿದ್ದಾರೆ. ತನ್ಮೂಲಕ ಹುದ್ದೆಯಲ್ಲಿ ಮುಂದುವರೆಯಲು ತಮಗೆ ಮನಸ್ಸಿಲ್ಲ ಎಂದೇ ಸಂದೇಶ ನೀಡುತ್ತಿದ್ದಾರೆ. ಆದರೆ, ಹೈಕಮಾಂಡ್‌ ಸೂಚಿಸಿದರೆ ಅವರು ಒಪ್ಪಬೇಕಾಗುತ್ತದೆ ಎನ್ನುತ್ತವೆ ಮೂಲಗಳು.

ಇನ್ನೊಂದು ಮೂಲದ ಪ್ರಕಾರ, ಕೆಪಿಸಿಸಿ ಹುದ್ದೆ ಸಾಕು ಎಂಬ ಮನಸ್ಥಿತಿ ಹೊಂದಿದ್ದ ದಿನೇಶ್‌ ಗುಂಡೂರಾವ್‌ ನಿಲುವು ಅವರ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಬದಲಾದಂತಿದೆ ಎನ್ನಲಾಗುತ್ತಿದೆ. ಸಂಸದ ರಿಜ್ವಾನ್‌ ಅರ್ಷದ್‌, ಪ್ರಭಾವಿ ರವಿ ಬೋಸರಾಜ್‌ ಅವರೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ ನಂತರ ದಿನೇಶ್‌ ಗುಂಡೂರಾವ್‌ ಹೈಕಮಾಂಡ್‌ ಬಯಸಿದರೆ ಹುದ್ದೆಯಲ್ಲಿ ಇನ್ನಷ್ಟುಕಾಲ ಮುಂದುವರೆಯುವ ಮನಸ್ಥಿತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇಬ್ಬಂದಿಯಲ್ಲಿ ಹೈಕಮಾಂಡ್‌:  ಇದೆಲ್ಲದರ ಪರಿಣಾಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಇಬ್ಬಂದಿತನದಲ್ಲಿದೆ. ಶಿವಕುಮಾರ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡೋಣ ಎಂದರೆ ರಾಜ್ಯದ ಹಿರಿಯ ನಾಯಕರು ಒಪ್ಪುತ್ತಿಲ್ಲ. ಎಲ್ಲರೂ ಒಪ್ಪಬಹುದಾದ ಮಲ್ಲಿಕಾರ್ಜುನ ಖರ್ಗೆ ಅವರು ಇನ್ನೂ ತಮ್ಮ ಗುಟ್ಟು ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಹಾಲಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನೇ ಎಐಸಿಸಿ ಪುನರ್‌ ರಚನೆಯಾಗುವವರೆಗೂ ಮುಂದುವರೆಸುವ ಸಾಧ್ಯತೆಯನ್ನು ಹೈಕಮಾಂಡ್‌ ಪರಿಶೀಲಿಸುತ್ತಿದೆ ಎನ್ನಲಾಗುತ್ತಿದೆ.

ಇಷ್ಟೆಲ್ಲ ಬೆಳವಣಿಗೆಗಳಾದರೂ ಶಿವಕುಮಾರ್‌ ಮಾತ್ರ ತಮ್ಮ ಪ್ರಯತ್ನವನ್ನು ಕೈಬಿಟ್ಟಿಲ್ಲ. ಇನ್ನೂ ಅವರು ಪ್ರಬಲ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಹೀಗಾಗಿ ಕೆಪಿಸಿಸಿ ಕಗ್ಗಂಟು ಮುಂದುವರೆದಿದೆ.