ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

ಕಾರವಾರ (ಜು.31): ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರ ಅಪರೇಷನ್ ಸಿಂದೂರ ಕುರಿತು ಏನನ್ನೂ ಬಹಿರಂಗಪಡಿಸುತ್ತಿಲ್ಲ. ಪೆಹಲ್ಗಾಮ್ ದಾಳಿಯ ಬಗ್ಗೂ ಸ್ಪಷ್ಟ ಉತ್ತರ ಬಂದಿಲ್ಲ. ಭಾರತದ 5 ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಏನನ್ನೂ ಹೇಳುತ್ತಿಲ್ಲ. ದೇಶದ ವಿಷಯ ಬಂದಾಗ ನಾವೆಲ್ಲ ಒಂದೇ. ಆದರೆ ಸತ್ಯವನ್ನು ಮರೆಮಾಚುವುದು ಏಕೆ? ಅವರು ಹೇಳಿದ್ದನ್ನು ಕೇಳುತ್ತ ಕುಳಿತುಕೊಳ್ಳಬೇಕು. ಮೋದಿ ವಿಶ್ವಗುರು. ಅಮಿತ್ ಶಾ ದೊಡ್ಡ ಮನುಷ್ಯ ಎಂದು ಹೊಗಳುತ್ತಿರಬೇಕು ಎಂದ ವ್ಯಂಗ್ಯವಾಡಿದರು. ರಾಜ್ಯಕ್ಕೆ ಬರಬೇಕಾದ ಪಾಲನ್ನು ಪಡೆಯಲು ಸುಪ್ರಿಂ ಕೋರ್ಟಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಅವರು ಹೇಳಿದರು.

ಶಿರಸಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ: ಕಾರವಾರದ ಜಿಲ್ಲಾ ಆಸ್ಪತ್ರೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಲೀನ ಮಾಡಿರುವುದರಿಂದ, ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ ಮಾಡುವ ಕುರಿತಂತೆ ಆಸ್ಪತ್ರೆಗೆ ಅಗತ್ಯವಿರುವ ಸಿಟಿ ಸ್ಕ್ಯಾನ್, ಎಂಆರ್‌ಐ ಯಂತ್ರೋಪಕರಣ, ಸಿಬ್ಬಂದಿ ಹಾಗೂ ಕಿಮೋಥೇರಪಿ, ಡೇ ಕೇರ್ ಸೆಂಟರ್ ಸ್ಥಾಪನೆಯ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ನಿರ್ಜೀವ ಜನನ ದರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 2 ಮಂದಿ ಪ್ರಸೂತಿ ವೈದ್ಯರು, 2 ಮಂದಿ ಅರವಳಿಕೆ ತಜ್ಞರು ಮತ್ತು 2 ಮಂದಿ ಮಕ್ಕಳ ತಜ್ಞರ ಸೇವೆ ದೊರೆಯುವಂತೆ ಮಾಡುವ ಮೂಲಕ 24*7 ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಿ, ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಪ್ರಮಾಣವಿದ್ದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುವ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಜತೆಗೆ ತುರ್ತು ಸಂದರ್ಭದಲ್ಲಿ ವೈದ್ಯರ ಲಭ್ಯತೆ ಸಿಗುವುದರಿಂದ ಮುಂದೆ ಆಗಬಹುದಾದ ಅನಾಹುತ ತಡೆಗಟ್ಟಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 3 ಸಮುದಾಯ ಕೇಂದ್ರಗಳ ಜತೆ ಹೊಸದಾಗಿ ನಿರ್ಮಾಣವಾಗುತ್ತಿರುವ 5 ಸಮುದಾಯಗಳಿಗೆ ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಯಂತ್ರೋಪಕರಣ ಪೂರೈಕೆಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಲಾಗಿದೆ ಎಂದರು. ಗೃಹ ಆರೋಗ್ಯದ ಯೋಜನೆಯನ್ನು ಜಿಲ್ಲೆಯಲ್ಲಿ ತಕ್ಷಣ ಅನುಷ್ಠಾನ ಮಾಡುವಂತೆ ಸೂಚಿಸಿದ ಸಚಿವರು, ವೈದ್ಯರು ಮತ್ತು ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗಳಿಗೆ ತೆರಳಿ ಬಿಪಿ, ಶುಗರ್, ಮುಂತಾದ ತಪಾಸಣೆ ಮಾಡಬೇಕು. ಈ ಕಾಯಿಲೆ ಕಂಡುಬಂದಲ್ಲಿ ನಿರಂತರವಾಗಿ ಉಚಿತವಾಗಿ ಔಷಧ ಸರಬರಾಜು ಮಾಡಬೇಕು. ತಾಯಿ ಮತ್ತು ಮಗು ಆರೈಕೆಗೆ ಆದ್ಯತೆ ನೀಡುವಂತೆ ತಿಳಿಸಿದ ಅವರು, ನಿಯಮಿತವಾಗಿ ಬಾಣಂತಿಯರು ಮತ್ತು ಗರ್ಭಿಣಿಯರನ್ನು ವೈದ್ಯರು ಮತ್ತು ಆಶಾ ಕಾರ್ಯಕರ್ತರು ಮೇಲ್ವಿಚಾರಣೆ ಮಾಡಬೇಕು ಎಂದರು.