Asianet Suvarna News Asianet Suvarna News

ಸಿದ್ದರಾಮೋತ್ಸವದ ಬಳಿಕ ಮಠಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಚುನಾವಣೆಗೆ ಸಜ್ಜಾದರಾ?

ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವ ಭರ್ಜರಿ ಯಶಸ್ಸು ಕಂಡಿದೆ. ಕಾಂಗ್ರೆಸ್ಸಿಗರು ನಿರೀಕ್ಷೆ ಮಾಡಿರದ ಜನಸ್ತೋಮ ಅಮೃತ ಮಹೋತ್ಸವಕ್ಕೆ ಸೇರಿದ್ದು ಸ್ವತಃ ಕಾಂಗ್ರೆಸ್‌ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಇಂತಹದೊಂದು ಸಮಾವೇಶದ ಮೂಲಕ ಚುನಾವಣಾ ರಾಜಕಾರಣಕ್ಕೆ ಕಾಂಗ್ರೆಸ್ ಧುಮುಕಿರುವುದು ಸ್ಪಷ್ಟವಾಗಿದೆ. 

Did Siddaramaiah prepare for the election by visiting mutt after Siddaramotsava gvd
Author
Bangalore, First Published Aug 6, 2022, 10:54 AM IST

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಆ.06): ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವ ಭರ್ಜರಿ ಯಶಸ್ಸು ಕಂಡಿದೆ. ಕಾಂಗ್ರೆಸ್ಸಿಗರು ನಿರೀಕ್ಷೆ ಮಾಡಿರದ ಜನಸ್ತೋಮ ಅಮೃತ ಮಹೋತ್ಸವಕ್ಕೆ ಸೇರಿದ್ದು ಸ್ವತಃ ಕಾಂಗ್ರೆಸ್‌ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಇಂತಹದೊಂದು ಸಮಾವೇಶದ ಮೂಲಕ ಚುನಾವಣಾ ರಾಜಕಾರಣಕ್ಕೆ ಕಾಂಗ್ರೆಸ್ ಧುಮುಕಿರುವುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಹುಟ್ಟುಹಬ್ಬದ ನೆಪದಲ್ಲಿ ಮಠಗಳಿಗೆ ಭೇಟಿಯಾಗಿ ಸ್ವಾಮೀಜಿಗಳ ಆರ್ಶೀವಾದ ಪಡೆಯುತ್ತಿರುವುದು ಚುನಾವಣೆ ರಾಜಕಾರಣದ ಭಾಗವಾಗಿದೆ. ಹುಟ್ಟುಹಬ್ಬ, ಅಮೃತಮಹೋತ್ಸವ, ಸೌಹಾರ್ದ ಭೇಟಿ ನೆಪದಲ್ಲಿ ಸಿದ್ದರಾಮಯ್ಯ ಎಲ್ಲಾ ಸಮಾಜದ ಮಠಗಳಿಗೆ ಭೇಟಿ ಕೊಟ್ಟಿರುವುದು ಚುನಾವಣಾ ರಾಜಕಾರಣದ ಭಾಗವಾಗಿದೆ.

ಎರಡು ವರ್ಷಗಳ ನಂತರ ಕಾಗಿನೆಲೆ ಶ್ರೀ ಭೇಟಿಯಾದ ಸಿದ್ದರಾಮಯ್ಯ: ಅಮೃತ ಮಹೋತ್ಸವ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕ ಗುರುಪೀಠಕ್ಕೆ ನೀಡಿದರು. ಹರಿಹರ ತಾಲೂಕು ಬೆಳ್ಳೂಡಿ ಕನಕ ಗುರುಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಭೇಟಿ ಮಾಡಿ ನಾಲ್ಕು ವರ್ಷಗಳ ಮುನಿಸಿಗೆ ಬ್ರೇಕ್ ಹಾಕಿದ್ದಾರೆ. ತಮ್ಮದೇ ಕುಲಗುರುಗಳ  ಕುರುಬ ಸಮುದಾಯ ಗುರುಪೀಠಕ್ಕೂ ಸಿದ್ದರಾಮಯ್ಯ ಅವರಿಗೂ ಅವಿನಾಭಾವ ಸಂಬಂಧ. ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಕೆಂಪು ಕೋಟೆ ಮೇಲೆ ಕಂಬಳಿ ಬೀಸಬೇಕು ಎಂದು ದೆಹಲಿ ರಾಜಕಾರಣಕ್ಕು ಸಿದ್ದರಾಮಯ್ಯ ಹೋಗಬೇಕು ಎಂಬ ಅರ್ಥದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಿದ್ದು ಪರ ಬ್ಯಾಟಿಂಗ್ ಬೀಸಿದ್ದರು. ಅಲ್ಲದೆ ಅವರೇ ನಮ್ಮ ಮುಂದಿನ ಸಿಎಂ ಅಂತಾನೂ ಬಿಂಬಿಸಿದ್ದರು. 2020ರಲ್ಲಿ ಆರಂಭವಾದ ಕುರುಬ ಸಮುದಾಯದ ಎಸ್ಟಿ ಮೀಸಲು ಹೋರಾಟದಿಂದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. 

ಸಿದ್ದರಾಮೋತ್ಸವದ ಬಗ್ಗೆ ಯಾರಾರು ಏನೇನಂದರು... ಸಿಎಂ ಜಾಣ ಉತ್ತರ

ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪನವರ ಜೊತೆಯಲ್ಲಿ ಸ್ವಾಮೀಜಿ ಹೋರಾಟಕ್ಕೆ ಮುಂದಾಗಿದ್ದು, ಸಿದ್ದರಾಮಯ್ಯ ಮಠದಿಂದ ದೂರ ಉಳಿಯುವಂತೆ ಮಾಡಿತ್ತು. ಅಂದಿನಿಂದ ಆಗಸ್ಟ್ 3ರವರೆಗೂ ಸಿದ್ದರಾಮಯ್ಯ ಕನಕ ಗುರುಪೀಠಕ್ಕೆ ಭೇಟಿ ನೀಡಿರಲಿಲ್ಲ. ಸ್ವಾಮೀಜಿಗಳ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ 10ಕ್ಕೂ ಹೆಚ್ಚು ಬಾರಿ ದಾವಣಗೆರೆಗೆ ಆಗಮಿಸಿದ್ದರೂ ಮಠದ ಕಡೆ ಮುಖ ಮಾಡಿರಲಿಲ್ಲ. ವಾರದ ಹಿಂದಷ್ಟೇ ಹರಿಹರ ಶಾಸಕ ಎಸ್.ರಾಮಪ್ಪ ಅವರ ಜನ್ಮ ದಿನಕ್ಕೆ ಹರಿಹರಕ್ಕೆ ಬಂದಿದ್ದ ಸಿದ್ದರಾಮಯ್ಯ ಸಮೀಪವೇ ಇದ್ದ ಬೆಳ್ಳೂಡಿ ಮಠಕ್ಕೆ ಭೇಟಿ ಕೊಟ್ಟಿರಲಿಲ್ಲ. 75 ಅಮೃತ ಮಹೋತ್ಸವದ ದಿನವೇ ಸಿದ್ದರಾಮಯ್ಯ ಕನಕ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಚುನಾವಣಾ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.

ಜಮೀರ್ ಸಂಧಾನದ ಬಳಿಕ ಮಠಕ್ಕೆ ಸಿದ್ದರಾಮಯ್ಯ ಭೇಟಿ: ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಮುನಿಸು ಶಮನವಾಗಲು ಶಾಸಕ ಜಮೀರ್ ಕಾರಣ ಎನ್ನಲಾಗ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಇಂತಹ ಸಮಯದಲ್ಲಿ ಮುನಿಸು ಸರಿಯಲ್ಲ ಎಂಬ ದೃಷ್ಟಿಯಿಂದ ಶಾಸಕ ಜಮೀರ್ ಒಂದು ವಾರ ಮೊದಲೇ ಶ್ರೀಮಠಕ್ಕೆ ಭೇಟಿ ಕೊಟ್ಟು ಸಿದ್ದರಾಮಯ್ಯ ಮತ್ತು ಶ್ರೀಗಳ ಸಂಧಾನಕ್ಕೆ ದಿನಾಂಕ ನಿಗದಿ ಮಾಡಿದ್ದರು. ಅದರಂತೆ ಆಗಸ್ಟ್ 3ರಂದು ಮಠದಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳು ಕೇಕ್ ಕಟ್ ಮಾಡಿ ಸಿದ್ದು ಜನ್ಮ ದಿನ ಆಚರಿಸಿ ದೂರವಾಗಿದ್ದ ಸಂಬಂಧಕ್ಕೆ ಹೊಸ ಬಾಂಧವ್ಯ ಬೆಸೆದಿದ್ದಾರೆ. ಎರಡು ವರ್ಷಗಳ ಬಳಿಕ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೇ ಹಾಲುಮತ ಸಮುದಾಯ ಒಗ್ಗೂಡಿ ಮತ್ತೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ. ಅದಕ್ಕಾಗಿ ಬೇಕಾದ ಸಿದ್ಧತೆಗಳು ರಣತಂತ್ರಗಳಿಗೆ ಶ್ರೀಗಳು ಸಾಥ್ ನೀಡಬೇಕಿದೆ. ಹಲವು ವಿಚಾರಗಳು ಚರ್ಚೆಯಾಗಿವೆ.

ವೀರಶೈವ ಪಂಚಮಸಾಲಿ ಲಿಂಗಾಯತ ಗುರುಪೀಠಕ್ಕು ಭೇಟಿ ನೀಡಿದ್ದ ಸಿದ್ದರಾಮಯ್ಯ: ಅಮೃತ ಮಹೋತ್ಸವದ ಸಂಭ್ರಮಾಚರಣೆ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹರಿಹರದ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿದರು. ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದರ್ಶನಾಶೀರ್ವಾದ ಪಡೆದು ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ, ವಸತಿ ಭಾಗ್ಯ, ಆರೋಗ್ಯಭಾಗ್ಯದಂತಹ ನೂರಾರು ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗಗಳ ಅಭ್ಯುದ್ಯಯಕ್ಕಾಗಿ ಶ್ರಮಿಸಿದವರು. 75ನೇ ವರ್ಷದ ಹುಟ್ಟುಹಬ್ಬದ ಶುಭಗಳಿಗೆಯಲ್ಲಿ ಉತ್ತಮ ಆರೋಗ್ಯ ಹಾಗೂ ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಅವಕಾಶ ದೊರಕಲಿ ಎಂದು ವಚನಾನಂದ ಶ್ರೀ  ಆಶೀರ್ವದಿಸಿದ್ದಾರೆ.

ಸಿದ್ದರಾಮೋತ್ಸವದಲ್ಲಿ 7 ಲಕ್ಷ ಜನರಿಗೆ ದಾಸೋಹ: ಸಪ್ಪೆ ಎಂದ ಹೆಚ್‌ಡಿಕೆ!

ಚಿತ್ರದುರ್ಗ ಮುರುಘಾಮಠಕ್ಕೆ ಆಗಮಿಸಿ ಆರ್ಶೀವಾದ ಪಡೆದ ಸಿದ್ದರಾಮಯ್ಯ: ಅಮೃತ ಮಹೋತ್ಸವ ಬಳಿಕೆ ಹುಟ್ಟುಹಬ್ಬದ ನೆಪದಲ್ಲಿ ಮಠಕ್ಕೆ ಆಗಮಿಸಿದ ಸಿದ್ದರಾಮಯ್ಯ ಮುರುಘಾ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.‌ ಈ ಬಾರಿ ದಾವಣಗೆರೆಯಲ್ಲಿ ಮುರುಘಾ ಮಠದಿಂದ ಜಯದೇವ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಸಿದ್ದರಾಮಯ್ಯ ಸ್ವಾಮೀಜಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯನವರ ಗಟ್ಟಿತನ ಸಿದ್ದಾಂತಕ್ಕೆ ಬದ್ಧತೆ ಬಡವರ ಬಗೆಗಿನ ಕಾಳಜಿ ಬಗ್ಗೆ ಸ್ವಾಮೀಜಿ ಮೆಚ್ಚುಗೆ ಮಾತುಗಳನ್ನು ಹಾಡಿದ್ದಾರೆ. ಒಟ್ಟಾರೆ ಮಠ ಮಾನ್ಯ ದೇವಸ್ಥಾನ ಮಸೀದಿಗಳಿಂದ ಕೊಂಚ ದೂರವಾಗಿದ್ದ ಸಿದ್ದರಾಮಯ್ಯ ಮತ್ತೇ ಭಕ್ತಿಯಿಂದ ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ ನಾಸ್ತಿಕರ ಜೊತೆ ಆಸ್ತಿಕರನ್ನು ಸೆಳೆಯುವ ಪ್ರಯತ್ನಕ್ಕೆ ಸದ್ದಿಲ್ಲದೇ ಕೈಹಾಕಿದ್ದಾರೆ.

Follow Us:
Download App:
  • android
  • ios