ಬಿಜೆಪಿ ಸರ್ಕಾರದಿಂದ ಸರ್ವಾಧಿಕಾರ: ಸಚಿವ ಈಶ್ವರ ಖಂಡ್ರೆ
ಕೇಂದ್ರದ ಬಿಜೆಪಿಯು ಸರ್ಕಾರವು ಇಂದಿಗೂ ಸರ್ವಾಧಿಕಾರಿ ಧೋರಣೆ ಮುಂದುವರಿಸಿದೆ. ಈಗ ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡಲು ಕೆಲ ಬಿಜೆಪಿ ನಾಯಕರು ಹೊರಟಿದ್ದಾರೆ. ಬಿಜೆಪಿಯ ಹಿಟ್ಲರ್‌ಶಾಹಿ ಆಡಳಿತ ಮುಂದೆ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ
ಹುಬ್ಬಳ್ಳಿ(ನ.12): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸರ್ವಾಧಿಕಾರ ನಡೆಸುತ್ತಿಲ್ಲ. ಬದಲಿಗೆ ಕೇಂದ್ರದ ಬಿಜೆಪಿ ಸರ್ಕಾರ ಸಿಬಿಐ, ಐಟಿ, ಚುನಾವಣೆ ಆಯೋಗ ಎಲ್ಲ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸರ್ವಾಧಿಕಾರತ್ವ ತೋರುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಬಿಜೆಪಿಯು ಸರ್ಕಾರವು ಇಂದಿಗೂ ಸರ್ವಾಧಿಕಾರಿ ಧೋರಣೆ ಮುಂದುವರಿಸಿದೆ. ಈಗ ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡಲು ಕೆಲ ಬಿಜೆಪಿ ನಾಯಕರು ಹೊರಟಿದ್ದಾರೆ. ಬಿಜೆಪಿಯ ಹಿಟ್ಲರ್‌ಶಾಹಿ ಆಡಳಿತ ಮುಂದೆ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಯಾರ ಮೇಲೆ ನಂಬಿಕೆಯಿದೆ?: ಆರ್. ಅಶೋಕ್ ಹರಿಹಾಯ್ದ ಡಿಕೆಶಿ
ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ದ ಮಾತನಾಡಿದವರನ್ನು ಜೈಲಿಗೆ ಹಾಕಿದ್ದನ್ನು ನಾವು ನೋಡಿದ್ದೇವೆ. ಆದರೆ, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಈ ರೀತಿ ಮಾಡಿಲ್ಲ. ನಾವು ಅದೇ ರೀತಿ ಮಾಡಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತಿರಲಿಲ್ಲ ಎಂದರು.
ಬಿಜೆಪಿಗೆ ಶಾಪ ತಟ್ಟುತ್ತೆ:
ಕೋವಿಡ್‌ನಲ್ಲಿ ಭಾರಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ₹2 ಸಾವಿರ ಮೊತ್ತದ ಇಂಜೆಕ್ಷನ್‌ನ್ನು ₹30 ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗಿದೆ. ಆ ಸಂದರ್ಭದಲ್ಲಿ ಬಿಜೆಪಿ ದುರಾಡಳಿತದಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಕೋವಿಡ್‌ನಲ್ಲಿ ಮೃತಪಟ್ಟ ಕುಟುಂಬಸ್ಥರ ಶಾಪ ಬಿಜೆಪಿಗೆ ತಟ್ಟುತ್ತೆ ಎಂದು ಆರೋಪಿಸಿದರು.