ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫಿಕ್ಸಿಂಗ್! ದಿಂಗಾಲೇಶ್ವರ ಶ್ರೀ ಹೇಳಿದ್ದೇನು?
ಲಿಂಗಾಯತ ನಾಯಕರನ್ನು ತುಳಿಯುವುದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಲಿಂಗಾಯತ ನಾಯಕರಷ್ಟೇ ಅಲ್ಲ, ಅ ಭಾಗದ ಎಲ್ಲಾ ಸಮಾಜದ ಜನರು ಕೂಡ ನನ್ನ ರಾಜಕೀಯ ಪ್ರವೇಶವನ್ನು ಸ್ಬಾಗತ ಮಾಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿರುವ ದಿಂಗಾಳೇಶ್ವರ ಸ್ವಾಮೀಜಿ ತಿಳಿಸಿದರು.
ದಾವಣಗೆರೆ (ಏ.9) ಸಮಾಜಸೇವೆ ಮಾಡಲು ಹೆಚ್ಚಿನ ಅವಕಾಶಕ್ಕೆ ಭಕ್ತರು ಜವಾಬ್ದಾರಿವಹಿಸಿದ್ದಾರೆ. ನಾವು ನಿಭಾಯಿಸುತ್ತೇವೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರಲ್ಹಾದ್ ಜೋಶಿ ವಿರುದ್ಧ ಸ್ಪರ್ಧಿಸುವುದು ಖಚಿತಪಡಿಸಿದರು.
ಇಂದು ದಾವಣಗೆರೆಯ ಹರಿಹರದ ಪಂಚಮಸಾಲಿ ಗುರುಪೀಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಲಿಂಗಾಯತ ನಾಯಕರನ್ನು ತುಳಿಯುವುದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಲಿಂಗಾಯತ ನಾಯಕರಷ್ಟೇ ಅಲ್ಲ, ಅ ಭಾಗದ ಎಲ್ಲಾ ಸಮಾಜದ ಜನರು ಕೂಡ ನನ್ನ ರಾಜಕೀಯ ಪ್ರವೇಶವನ್ನು ಸ್ಬಾಗತ ಮಾಡಿದ್ದಾರೆ. ಅದರಲ್ಲೂ ಬ್ರಾಹ್ಮಣ ಸಮಾಜದವರು ಕೂಡ ಅತ್ಯಂತ ಪ್ರಮುಖವಾಗಿ ಸ್ವಾಗತ ಮಾಡಿದ್ದಾರೆ ಎಂದರು.
ರಾಜಕಾರಣ ಶುದ್ಧಿ ಮಾಡಲಿಕ್ಕೆ ಪರಮಪೂಜ್ಯರು ಬಹಳ ಯೋಗ್ಯರು: ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಸ್ವಾಗತಿಸಿದ ವಚನಾನಂದ ಶ್ರೀ!
ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯೂ ಅಲ್ಲ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯೂ ಅಲ್ಲ. ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಫಿಕ್ಸಿಂಗ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನ ಜೋಶಿಯವರೇ ಆಯ್ಕೆ ಮಾಡಿದ್ದಾರೆ. ಅವರೇ ಕಾಂಗ್ರೆಸ್ ಟಿಕೇಟ್ ಘೋಷಣೆ ಮಾಡಿಸಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಹೀಗಾಗಿ ಈ ಎರಡು ಪಕ್ಷದ ಜನರು ನನ್ನನ್ನು ಬಯಸಿ ಬೆಂಬಲಿಸಿದ್ದಾರೆ ಎಂದರು.
ಪ್ರಲ್ಹಾದ್ ಜೋಶಿ ಹಿಂದಿನಿಂದಲೂ ಲಿಂಗಾಯತ ನಾಯಕರ ವಿರುದ್ಧ ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ನಮ್ಮ ಮೇಲೆಯೂ ಅಪಪ್ರಚಾರಗಳು ಜೋಶಿಯವರ ಕುತಂತ್ರದಿಂದ ನಡೆಯುತ್ತಿವೆ. ಎಷ್ಟೇ ವಿರೋಧ ಮಾಡಿದ್ರೂ ನಾವು ಕುಗ್ಗುವ ಕೆಲಸ ಮಾಡಿಲ್ಲ. ನಾನು 40% ಅರೋಪವನ್ನು ಸಾಬೀತು ಮಾಡುತ್ತೇನೆ ಹೇಳಿದಾಗಲೇ ಸಮಸ್ಯೆಗಳು ಬಂದಿದ್ವು. ಈಗಲೂ ಕೂಡ ಸಮಸ್ಯೆಗಳಿವೆ. ಸತ್ಯ ಹೇಳುವಾಗ ಸಮಸ್ಯೆಗಳು ಬರುತ್ತವೆ. ನನ್ನ ಮಠ ಇರುವ ಊರಿನಲ್ಲೇ ನಮ್ಮ ವಿರುದ್ಧ ಜೋಶಿ ಕೆಲಸ ಮಾಡುತ್ತಿದ್ದಾರೆ. ನಮ್ಮವರನ್ನೇ ನಮ್ಮ ವಿರುದ್ಧ ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದಿಂಗಾಲೇಶ್ವರ ಶ್ರೀಗೆ ಕಾಂಗ್ರೆಸ್ ಟಿಕೆಟ್ ಬಗ್ಗೆ ಚರ್ಚಿಸಿ ನಿರ್ಧಾರ: ಡಿ.ಕೆ. ಶಿವಕುಮಾರ್
ಸಾವಿರಾರು ವರ್ಷಗಳಿಂದ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಈಗ ಕೇಂದ್ರ ಸಚಿವರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬಹುಸಂಖ್ಯಾತರಾದ ಲಿಂಗಾಯತರು ಹಾಗೂ ಉಳಿದ ಸಮಾಜದವರು ಕೂಡ ಈ ಬಾರಿ ಜೋಷಿಯವರಿಗೆ ಉತ್ತರ ಕೊಡುತ್ತಾರೆ. ನನ್ನನ್ನು ಯಾರೂ ಕೂಡ ಸಂಪರ್ಕ ಮಾಡುವ ಕೆಲಸ ಮಾಡಿಲ್ಲ. ಯಾವುದೇ ಪಕ್ಷ ನನ್ನನ್ನು ಅಮಂತ್ರಣ ಮಾಡಿದರೆ ಭಕ್ತರ ಮುಂದಿಟ್ಟು ನಿರ್ಧಾರ ಮಾಡುತ್ತೇನೆ. ಗುರುಗಳ ಆಶೀರ್ವಾದ ಪಡೆದೇ ನಾನು ಮಠದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ನಾನು ಹಾಗೂ ವಚನಾನಂದ ಸ್ವಾಮೀಜಿಗಳು ಆತ್ಮೀಯರು. ಈಗ ನಾನು ಪೀಠಕ್ಕೆ ಬಂದಿದ್ದಕ್ಕೆ ವಿಶೇಷ ಆರ್ಥ ಬಂದಿದೆ ಅಷ್ಟೇ. ಬೇರೆ ಎಲ್ಲ ಮಠಗಳನ್ನೂ ಲಿಂಗಾಯತರೇತರ ಮಠಗಳಿಗೂ ಕೂಡ ಭೇಟಿ ನೀಡಿದ್ದೇನೆ. ಎಲ್ಲರೂ ನನಗೆ ಬೆಂಬಲವನ್ನು ಕೊಟ್ಟು ಸ್ವಾಗತ ಮಾಡಿದ್ದಾರೆ. ಯಾರೇ ಮನವೊಲಿಸಲು ಬಂದರೂ ನನ್ನ ನಿರ್ಣಯ ಬದಲಾಗುವುದಿಲ್ಲ. ಕೆಲ ಮಠಾಧೀಶರಿಗೆ ಹೆದರಿಸಿ ಜೋಶಿ ನಮ್ಮ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ. ನಮ್ಮ ವಿರುದ್ದ ಹೇಳಿಕೆ ಕೊಡುವ ಸ್ವಾಮೀಜಿಗಳ ವಿರುದ್ದವೇ ಅ ಮಠದ ಭಕ್ತರು ಸಿಟ್ಟು ಹೊರ ಹಾಕುತ್ತಿದ್ದಾರೆ. ಅಲ್ಲಿ ಕೂಡ ಒಡೆದಾಳುವ ಕೆಲಸ ಮಾಡುತ್ತಿದ್ದಾರೆ ಎಂದು ಭಾಷಣದುದ್ದಕ್ಕೂ ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.