ಧರ್ಮಸ್ಥಳ ಪ್ರಕರಣದಲ್ಲಿ ''ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿದ ಬಳಿಕ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡಿದೆ'' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿ (ಆ.25): ಧರ್ಮಸ್ಥಳ ಪ್ರಕರಣದಲ್ಲಿ ''ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿದ ಬಳಿಕ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡಿದೆ'' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಕರಣದಲ್ಲಿ ಸರ್ಕಾರ ಆರಂಭದಲ್ಲೇ ಎಡವಿದೆ. ಹಾಗಾಗಿ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಇದಕ್ಕೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ. ಜನರ ಧಾರ್ಮಿಕ ನಂಬಿಕೆಯ, ಪವಿತ್ರ ಕ್ಷೇತ್ರದ ಹೆಸರು ಹಾಳು ಮಾಡಿದ ಮೇಲೆ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡುತ್ತಿದೆ. ಸರ್ಕಾರದ ನಡೆಯಿಂದ ಸರ್ವ ಸಮುದಾಯದವರಿಗೂ ನೋವಾಗಿದೆ. ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಯೋಜಿತ ದಾಳಿ: ಇದು ಹಿಂದೂ ಧಾರ್ಮಿಕ ನಂಬಿಕೆ ಮೇಲೆ ನಡೆದ ಪ್ರಾಯೋಜಿತ ದಾಳಿ ಎಂಬುದೀಗ ಬಹಿರಂಗಗೊಂಡಿದೆ. ಕಾಂಗ್ರೆಸ್ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ಹಿನ್ನೆಲೆ- ಮುನ್ನೆಲೆ ಯೋಚಿಸದೆ, ಸೂಕ್ತ ಪರಿಶೀಲನೆ ಮಾಡದೇ ಮುಸುಕುಧಾರಿ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿ ತನ್ನ ನಿಜ ಸ್ವರೂಪವನ್ನು ಪ್ರದರ್ಶಿಸಿದ್ದು, ಐತಿಹಾಸಿಕ ದುರಂತ ಎಂದು ಖಂಡಿಸಿದ್ದಾರೆ. ಕಾಣದ ಕೈಗಳಿಂದ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆಯಾ? ಯಾರ ಆಜ್ಞೆಯ ಮೇರೆಗೆ ಇಂತಹ ದುಸ್ಸಾಹಸಕ್ಕೆ ಕೈಹಾಕಲಾಯಿತು? ಪ್ರಕರಣದಲ್ಲಿ ಸತ್ಯಾಸತ್ಯಗಳು ಕಣ್ಣೆದುರೇ ಇದ್ದರೂ, ಕಾಂಗ್ರೆಸ್ ಸರ್ಕಾರ ಏಕೆ ಮೌನವಹಿಸಿದೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಹೊಣೆಗಾರಿಕೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಬಂಗಾರದ ಕೋಳಿ ಉಳಿಸಿಕೊಳ್ಳಿ: ಸಹಕಾರ ಕ್ಷೇತ್ರ ಬಂಗಾರದ ಮೊಟ್ಟೆ ಇಡುವ ಕೋಳಿ. ಸಹಕಾರಿಗಳು ಜನರ ನಂಬಿಕೆ. ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ಸಹಕಾರಿ ಕಾಯ್ದೆ ಹಾಗೂ ಸೌಹಾರ್ದ ಸಹಕಾರಿ ಚಳವಳಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಸಹಕಾರ ಕ್ಷೇತ್ರ ಬಂಗಾರದ ಮೊಟ್ಟೆ ಇಡುವ ಕೋಳಿಯಾಗಿದ್ದು, ಸರಿಯಾಗಿ ಉಪಯೋಗಿಸಿಕೊಂಡರೆ ಬಂಗಾರದ ಮೊಟ್ಟೆ ಸಿಗುತ್ತಲೇ ಇರುತ್ತದೆ.
ಆದರೆ ಬಂಗಾರದ ಆಸೆಗೆ ಬಿದ್ದರೆ ಕೋಳಿಯೂ ಇರುವುದಿಲ್ಲ. ಮೊಟ್ಟೆಯೂ ಇರುವುದಿಲ್ಲ. ಆದ್ದರಿಂದ ಸಹಕಾರಿಗಳು ಜನರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು. ಬ್ಯಾಂಕಿಂಗ್ ವ್ಯವಸ್ಥೆಗಿಂತ ಮೊದಲು ಜನರು ಸಹಕಾರ ಕ್ಷೇತ್ರವನ್ನೇ ಅವಲಂಬಿಸಿದ್ದರು. 1914-15 ರಲ್ಲಿ ರಾಜ್ಯದಲ್ಲಿ 725 ಸಹಕಾರಿ ಸಂಘಗಳಲ್ಲಿ 50 ಸಾವಿರಕ್ಕಿಂತ ಅಧಿಕ ಸದಸ್ಯರಿದ್ದರು. ಆ ಕಾಲದಲ್ಲೇ 30 ಲಕ್ಷ ರು. ಬಂಡವಾಳ ಹೂಡಿಕೆ ಮಾಡಿದ್ದರು. 725 ಸಂಘಗಳಲ್ಲಿ 621 ವ್ಯವಸಾಯ ಸಹಕಾರ ಸಂಘಗಳಾಗಿದ್ದವು. ಇವೆಲ್ಲವೂ ಕೃಷಿ ಮೂಲವಾಗಿದ್ದು ಹಳ್ಳಿಗಳಲ್ಲಿದ್ದವು. ಇದು ಈ ಮಣ್ಣಿಗೆ ಮಾಡಿದ ಸೇವೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
