ಚಿಕ್ಕೋಡಿಯಲ್ಲಿ, ಸಿಎಂ ಬದಲಾವಣೆ ಚರ್ಚೆಯ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದರು. ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿರುವುದರಿಂದ ತಾನು ಮಾತನಾಡುವುದಿಲ್ಲ ಎಂದರು. ಅಧಿಕಾರ ಶಾಶ್ವತವಲ್ಲ, ನಾವೆಲ್ಲರೂ ಮೊದಲು ಪಕ್ಷದ ಸಾಮಾನ್ಯ ಕಾರ್ಯಕರ್ತರು ಎಂದು ಎಂದರು.
ಚಿಕ್ಕೋಡಿ (ಡಿ.25): ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಯಾವುದೇ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ನಡೆದ ಖಾಸಗಿ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ಅವರು, ಸುದ್ದಿಗಾರರ ಪ್ರಶ್ನೆಗಳಿಗೆ ಅತೀ ಜಾಗರೂಕತೆಯಿಂದ ಉತ್ತರಿಸಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ನಿರಾಕರಣೆ
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತೀಂದ್ರ, ಸಿಎಂ ಬದಲಾವಣೆ ಬಗ್ಗೆ ನಾನು ಈಗಾಗಲೇ ಹೇಳಿಕೆ ನೀಡಿದ್ದೇನೆ. ಅದರ ಬಗ್ಗೆ ಮತ್ತೊಮ್ಮೆ ನಾನು ಏನನ್ನೂ ಹೇಳಬೇಕಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ನಾನು ಹೆಚ್ಚಿಗೆ ಮಾತನಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಪೂರ್ಣವಿರಾಮ ಇಡಲು ಪ್ರಯತ್ನಿಸಿದರು.
ಹಿಂದಿನ ಹೇಳಿಕೆಯ ವಿವಾದದ ಬಿಸಿ
ಈ ಹಿಂದೆ 'ಐದು ವರ್ಷ ನಮ್ಮಪ್ಪನೇ ಸಿಎಂ' ಎಂದು ಹೇಳಿಕೆ ನೀಡುವ ಮೂಲಕ ಯತೀಂದ್ರ ಅವರು ಪಕ್ಷದೊಳಗೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದ್ದರು. ಈ ಹೇಳಿಕೆಯಿಂದ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟಾಗಿತ್ತು. ಸ್ವತಃ ತಂದೆ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ನಾಯಕರು ಯತೀಂದ್ರ ಅವರ ಜೊತೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಅವರ ಮೌನವು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಡಿಕೆಶಿ 'ಸಾಮಾನ್ಯ ಕಾರ್ಯಕರ್ತ' ಹೇಳಿಕೆಗೆ ಪ್ರತಿಕ್ರಿಯೆ
ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ನೀಡಿದ್ದ 'ನಾನು ಸಾಮಾನ್ಯ ಕಾರ್ಯಕರ್ತ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ನಾವೆಲ್ಲರೂ ಮೊದಲು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಅಧಿಕಾರ ಎನ್ನುವುದು ಬರುತ್ತದೆ, ಹೋಗುತ್ತದೆ; ಅದು ಶಾಶ್ವತವಲ್ಲ. ಅದು ಮುಖ್ಯಮಂತ್ರಿಯಾಗಿರಲಿ, ಉಪಮುಖ್ಯಮಂತ್ರಿಯಾಗಿರಲಿ ಅಥವಾ ಸಚಿವರಾಗಿರಲಿ ಅಥವಾ ನಾನಾಗಿರಲಿ, ಅಧಿಕಾರಕ್ಕಿಂತ ಪಕ್ಷ ಕಟ್ಟುವ ಕೆಲಸ ಮುಖ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಅಧಿಕಾರ ಶಾಶ್ವತವಲ್ಲ ಎಂದ ಯತೀಂದ್ರ
ಅಧಿಕಾರದ ಮೋಹದ ಬಗ್ಗೆ ಕಿವಿಮಾತು ಹೇಳಿದ ಯತೀಂದ್ರ ಸಿದ್ದರಾಮಯ್ಯ, 'ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವುದು ನಮ್ಮ ಮೊದಲ ಕರ್ತವ್ಯ. ಅಧಿಕಾರ ಯಾವಾಗಲೂ ಇರುವುದಿಲ್ಲ, ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುವುದು ಮುಖ್ಯ ಎಂದರು. ಅವರ ಈ ಹೇಳಿಕೆಯು ಪರೋಕ್ಷವಾಗಿ ಯಾರಿಗೆ ಉದ್ದೇಶಿಸಿದ್ದು ಎಂಬ ಚರ್ಚೆಗಳು ಈಗ ಶುರುವಾಗಿವೆ.


