* ದೇವೇಂದ್ರ ಫಡ್ನವೀಸ್‌ ನನ್ನ ಗಾಡ್‌ಫಾದರ್‌: ಜಾರಕಿಹೊಳಿ* ನನ್ನ ನೋವನ್ನು ಅವರ ಬಳಿಯೇ ತೋಡಿಕೊಂಡಿದ್ದೇನೆ* ಮುಂದಿನ ನಡೆ ಬಗ್ಗೆ ಅವರ ಜತೆಯೇ ಮಾತಾಡುತ್ತೇನೆ

ಬೆಳಗಾವಿ(ಜೂ.26): ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್‌ ಅವರು ನನ್ನ ರಾಜಕೀಯ ಗಾಡ್‌ಫಾದರ್‌ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಮನಸ್ಸು ನೊಂದಿರುವ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ಸತ್ಯ. ನಾನು ಮುಂಬೈಗೆ ಹೋಗಿದ್ದು ಸತ್ಯ. ನನ್ನ ರಾಜಕೀಯ ಗಾಡ್‌ಫಾದರ್‌ ದೇವೇಂದ್ರ ಫಡ್ನವೀಸ್‌ ಅವರ ಬಳಿ ನನ್ನ ಮನಸ್ಸಿನ ನೋವು ಹೇಳಿಕೊಂಡಿದ್ದೇನೆ. ಮುಂದಿನದನ್ನು ಮುಂಬೈಗೆ ಹೋಗಿಯೇ ಮಾತನಾಡುತ್ತೇನೆ ಎಂದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಂದೇ ಪುಣೆಯಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಆಪರೇಷನ್‌ ಕಮಲದ ಚರ್ಚೆ ನಡೆಯುತ್ತಿತ್ತು. ಆ ವೇಳೆಯೇ ನಾನು ನನ್ನ ಗಾಡ್‌ಫಾದರ್‌ಗೆ ಮುಂದೆ ಏನಾಗಬಹುದು ಎಂದು ಹೇಳಿದ್ದೆ. ಅದು ಈಗ ನಡೆಯುತ್ತಿದೆ ಎಂದು ನೆನಪಿಸಲು ಮುಂಬೈಗೆ ತೆರಳಿದ್ದೆ ಎಂದು ಹೇಳಿದರು.