ದೇವದುರ್ಗ ಗೆಲುವಿಗಾಗಿ ಮೂರು ಪಕ್ಷಗಳಿಂದ ಪ್ರಚಾರ ಶುರು ಕಾಂಗ್ರೆಸ್ ನಿಂದ 'ಕಾಂಗ್ರೆಸ್ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಜೆಡಿಎಸ್ ನಿಂದ 'ಗ್ರಾಮ ವಾಸ್ತವ್ಯ' ಬಿಜೆಪಿಯಿಂದ 'ಅಭಿವೃದ್ಧಿ ಕಾರ್ಯ'ಗಳ ಕುರಿತು ಪ್ರಚಾರ

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಡಿ.24) : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 4-5 ತಿಂಗಳು ಬಾಕಿಯಿದೆ. ಈಗಿನಿಂದಲೇ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ವಿನೂತನ ಮಾದರಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ನಾಯಕ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಹಟಕ್ಕೆ ಬಿದ್ದಂತೆ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಾಲಿ ಶಾಸಕ ಕೆ. ಶಿವನಗೌಡ ನಾಯಕ ವಿರುದ್ಧ ವಾಗ್ದಾಳಿ ನಡೆಸುತ್ತಾ ಮತದಾರ ಮನಸೆಳೆಯಲು ‌ಮುಂದಾಗಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಕೂಡ ನಾವೇನು ಕಮ್ಮಿಇಲ್ಲ ಎಂಬಂತೆ 'ಕಾಂಗ್ರೆಸ್ ನಡೆ; ಹಳ್ಳಿ ಕಡೆ' ಕಾರ್ಯಕ್ರಮ ಶುರು ಮಾಡಿದೆ. ಮತ್ತೊಂದೆಡೆ ಹಾಲಿ ಶಾಸಕ ಕೆ.ಶಿವನಗೌಡ ನಾಯಕರ 'ಸರ್ಕಾರದ ಯೋಜನೆಗಳು ಮತ್ತು ಕ್ಷೇತ್ರಕ್ಕಾಗಿ ತೆಗೆದುಕೊಂಡು ಬಂದ ಅನುದಾನ ಮತ್ತು ಅಭಿವೃದ್ಧಿ ಕೆಲಸಗಳು ತಿಳಿಸುತ್ತಾ ಮತಬೇಟೆ ಶುರು ಮಾಡಿದ್ದಾರೆ. 

ರಾಯಚೂರು: ದೇವದುರ್ಗ ಗೆಲುವಿಗಾಗಿ ಜೆಡಿಎಸ್ ಹರಸಾಹಸ, ಶಾಸಕ ಶಿವನಗೌಡ ವಿರುದ್ಧ ಪ್ರತಿಭಟನೆ

ದೇವದುರ್ಗದಿಂದ ಯಾರಾರು ಸ್ಪರ್ಧೆ ಮಾಡುತ್ತಾರೆ?

  • ಕಾಂಗ್ರೆಸ್ ಅಭ್ಯರ್ಥಿ : ಬಿ.ವಿ.ನಾಯಕ
  • ಬಿಜೆಪಿ ಅಭ್ಯರ್ಥಿ: ಕೆ‌.ಶಿವನಗೌಡ ನಾಯಕ
  • ಜೆಡಿಎಸ್ ಅಭ್ಯರ್ಥಿ: ಕರಿಯಮ್ಮ ನಾಯಕ
  • ಪಕ್ಷಾಂತರ ಅಭ್ಯರ್ಥಿ: ಶ್ರೀದೇವಿ ನಾಯಕ
  • ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ : 

ರಾಯಚೂರು ಜಿಲ್ಲೆ ದೇವದುರ್ಗ ‌ತಾಲೂಕಿನ ಅರಕೇರಾ ಗ್ರಾಮದವರು. 2014ರಲ್ಲಿ ರಾಯಚೂರು ಲೋಕಸಭೆಗೆ ಸ್ಪರ್ಧೆ ಮಾಡಿ ಸಂಸದರಾಗಿ ಆಯ್ಕೆ ಆಗಿದ್ರು. ‌2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಇವರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತೊಡಗಿದರು. ಹೀಗಾಗಿ ಇಡೀ ಜಿಲ್ಲೆಯಾದ್ಯಂತ ‌ಚಿರಪರಿಚಿತ‌ ಮುಖಂಡರಾದ ಬಿ.ವಿ.ನಾಯಕ ಸದ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವದುರ್ಗ ಕ್ಷೇತ್ರದಲ್ಲಿ ಉತ್ತಮ ಒಡನಾಟ ಹೊಂದಿರುವ ಮುಖಂಡರು.. ನೂರಾರು ಕಾರ್ಯಕರ್ತರು ದೇವದುರ್ಗದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಬಿ.ವಿ.ನಾಯಕ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದ್ದರಿಂದ ಈ ಬಾರಿ ಬಿ.ವಿ.ನಾಯಕ ಸ್ಪರ್ಧೆಗೆ ಮುಂದಾಗಿದ್ದಾರೆ. ಈಗ ಬಿ.ವಿ.ನಾಯಕರ ಗೆಲುವಿಗಾಗಿ ಅವರ ಸೊಸೆ ಶ್ರೀದೇವಿ ರಾಜಶೇಖರ ನಾಯಕ ಕಾಂಗ್ರೆಸ್ ನಡೆ ಹಳ್ಳಿ ಕಡೆ ಅಂತ ಕ್ಷೇತ್ರದ 180ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಪ್ರತಿ ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಇದರ ಜತೆಗೆ ಕೆ.ಶಿವನಗೌಡ ನಾಯಕ ಆಡಳಿತದಿಂದ ದೇವದುರ್ಗ ತಾಲೂಕಿನಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ, ಮಟ್ಕಾ ಮತ್ತು ಕುಡಿತದ ಬಗ್ಗೆಯೂ ಜನರಿಗೆ ತಿಳಿಸುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಮತದಾರ ಮನಗೆಲ್ಲಲು ಮುಂದಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ: 

ಕೆ.ಶಿವನಗೌಡ ನಾಯಕ ಹಾಲಿ ದೇವದುರ್ಗದ ಬಿಜೆಪಿ ಶಾಸಕ. ಮೂಲತಃ ಮಾನ್ವಿ ತಾಲೂಕಿನ ಕಸನದೊಡ್ಡಿ ಗ್ರಾಮದವರು. ಸದ್ಯ ಅರಕೇರಾ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ತಾ.ಪಂ. ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಕೆ.ಶಿವನಗೌಡ ನಾಯಕ. ನಾಲ್ಕು ಬಾರಿ ದೇವದುರ್ಗದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 20 ವರ್ಷಗಳಿಂದ ದೇವದುರ್ಗ ಕ್ಷೇತ್ರದ ಶಾಸಕರಾಗಿ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಈಗ ತಾವೂ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದ ಜನರು ನನಗೆ ಮತ್ತೆ ಗೆಲ್ಲಿಸುತ್ತಾರೆ ಎಂಬ ಮಹಾದಾಸೆಯಿಂದ ಕ್ಷೇತ್ರದಲ್ಲಿ ‌ಓಡಾಟ ನಡೆಸಿದ್ದಾರೆ. 

ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ: 

ದೇವದುರ್ಗ ಮೂಲದ ಕರೆಮ್ಮ ನಾಯಕ ಕಳೆದ ಬಾರಿ ಚುನಾವಣೆಗೆ ಸ್ಪರ್ಧೆ ‌ಮಾಡಿ ಕೆಲವೇ ಮತಗಳಿಂದ ಸೋಲು ಕಂಡಿದ್ರು. ಸೋತರೂ ಕೂಡ ಕರೆಮ್ಮ ‌ನಾಯಕ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡು ದೇವದುರ್ಗ ತುಂಬಾ ಓಡಾಟ ನಡೆಸಿ ಪಕ್ಷ ಸಂಘಟನೆ ನಡೆಸಿದರು. ಈಗ ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮತಬೇಟೆ ಶುರು ಮಾಡಿದ್ದಾರೆ. ದೇವದುರ್ಗ ತಾಲೂಕಿನ ವಿವಿಧ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾ ಜೆಡಿಎಸ್ ಗೆ ಒಂದು ಅವಕಾಶ ನೀಡಿ ಅಂತ ಪ್ರಚಾರ ನಡೆಸಿದ್ದಾರೆ. 

Ground Report: ರಾಯಚೂರಿನಲ್ಲಿ ಮೂರೂ ಪಕ್ಷಗಳ ಸಮಬಲದ ಹೋರಾಟ: ಹೇಗಿದೆ ಟಿಕೆಟ್‌ ಫೈಟ್‌?

ದೇವದುರ್ಗ ಕ್ಷೇತ್ರದ ಪರಿಚಯ: 

ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷ 23 ಸಾವಿರ 728 ಮತದಾರರು ಇದ್ದಾರೆ. ಅದರಲ್ಲಿ ಮಹಿಳೆಯರು 1ಲಕ್ಷ 12ಸಾವಿರ 918 ಜನರು ಇದ್ದು, ಪುರುಷ ಮತದಾರರು 1 ಲಕ್ಷ 10 ಸಾವಿರ 810 ಮತದಾರರು ಇದ್ದಾರೆ. ಹೀಗಾಗಿ ಈ ಮತದಾರರನ್ನ ಸೆಳೆಯಲು ಮೂರು ಪಕ್ಷದ ನಾಯಕರು ಈಗ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ, ಸಭೆ, ಸಮಾರಂಭ ಮತ್ತು ಮದುವೆ ಹಾಗೂ ಜಾತ್ರೆಗಳು ಸಹ ತಪ್ಪಿಸದೇ ತಿರುಗಾಟ ನಡೆಸಿದ್ದಾರೆ. ಇತ್ತ ಮತದಾರ ಪ್ರಭುಗಳು ಸಹ ಯಾವುದೇ ಕಾರ್ಯಕ್ರಮ ಇದ್ರೂ ಮೂರು ಪಕ್ಷದ ಮುಖಂಡರಿಗೆ ಆಹ್ವಾನಿಸಿ ಸನ್ಮಾನ ಮಾಡಿ ಗೌರವಿಸುತ್ತಾ ಇದ್ದಾರೆ. ಒಟ್ಟಿನಲ್ಲಿ 2023ರ ಚುನಾವಣೆಗಾಗಿ ಈಗಿನಿಂದಲೇ ದೇವದುರ್ಗ ಕ್ಷೇತ್ರದಲ್ಲಿ ಮೂರು ಪಕ್ಷಗಳ ತಾಲೀಮು ಶುರುವಾಗಿದೆ.