Asianet Suvarna News Asianet Suvarna News

Belagavi Session: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸ್ತ್ರ ಇದ್ದರೂ ಕೈಚೆಲ್ಲಿದ ಬಿಜೆಪಿ

ಗಡಿನಾಡು ಬೆಳಗಾವಿ ಜಿಲ್ಲೆಯ ಸುವರ್ಣ ವಿಧಾನಸೌಧದಲ್ಲಿ ನಡೆದ ಹತ್ತು ದಿನಗಳ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಸರ್ಕಾರದ ವೈಫಲ್ಯಗಳನ್ನು ಅಸ್ತ್ರವನ್ನಾಗಿ ಬಿಜೆಪಿ ಬಳಕೆ ಮಾಡಿಕೊಳ್ಳಲಿದೆ ಎಂಬ ನಿರೀಕ್ಷೆ ಹುಸಿ.

Despite having a weapon against the Congress government the BJP has given up gvd
Author
First Published Dec 16, 2023, 5:53 PM IST

ಸುವರ್ಣಸೌಧ (ಡಿ.16): ಗಡಿನಾಡು ಬೆಳಗಾವಿ ಜಿಲ್ಲೆಯ ಸುವರ್ಣ ವಿಧಾನಸೌಧದಲ್ಲಿ ನಡೆದ ಹತ್ತು ದಿನಗಳ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಸರ್ಕಾರದ ವೈಫಲ್ಯಗಳನ್ನು ಅಸ್ತ್ರವನ್ನಾಗಿ ಬಿಜೆಪಿ ಬಳಕೆ ಮಾಡಿಕೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ನೀರಸ ಯತ್ನ ನಡೆಸಿತು. ವಿಧಾನಸಭೆಗೆ ಹೋಲಿಸಿದರೆ ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕ ಇರದಿದ್ದರೂ ಸಾಮೂಹಿಕ ನಾಯಕತ್ವದ ಆಧಾರದ ಮೇಲೆ ಬಿಜೆಪಿ ಸದಸ್ಯರು ಪರಿಣಾಮಕಾರಿಯಾಗಿ ಹೋರಾಟ ನಡೆಸಿದರು. 

ಆದರೆ, ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಇದ್ದರೂ ಪರಿಣಾಮಕಾರಿ ಹೋರಾಟ ಸಾಧ್ಯವಾಗದಿರುವುದು ಸ್ಪಷ್ಟವಾಗಿ ಕಂಡು ಬಂತು. ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ಅವರಿಗೆ ಇದು ಮೊದಲ ಅಧಿವೇಶನ. ಮೊದಲ ವಾರದಲ್ಲಿಯೇ ಅಶೋಕ್ ಅವರಿಗೆ ಸ್ವಪಕ್ಷೀಯರಿಂದಲೇ ಅಸಹಕಾರ ವ್ಯಕ್ತವಾಯಿತು. ಇದು ಹೆಚ್ಚೂ ಕಡಮೆ ಕೊನೆಯ ದಿನದವರೆಗೂ ಮುಂದುವರೆಯಿತು. ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಮತ್ತು ಸದಸ್ಯರ ನಡುವೆ ಸಮನ್ವಯ ಕೊರತೆ ಅಧಿವೇಶನದಲ್ಲಿ ಎದ್ದು ಕಾಣುತ್ತಿತ್ತು. ಸ್ವಪಕ್ಷದಲ್ಲಿಯೇ ರಾಜಕೀಯ ಮೇಲಾಟ ಕಂಡು ಬಂತು. ಹೀಗಾಗಿ ಪ್ರತಿಪಕ್ಷವಾಗಿ ಬಿಜೆಪಿ ಪರಿಣಾಮಕಾರಿಯಾಗಿ ಸರ್ಕಾರ ವಿರುದ್ಧ ಆಕ್ರಮಣ ನಡೆಸಲು ವಿಫಲವಾಯಿತು ಎಂದೇ ಹೇಳಬೇಕಾಗುತ್ತದೆ.

ಔತಣ ಕೂಟಕ್ಕೆ ಆತ್ಮೀಯರನ್ನು ಕರೆದರೆ ತಪ್ಪೇನಿದೆ?: ಡಿಸಿಎಂ ಶಿವಕುಮಾರ್

ಹೊಂದಾಣಿಕೆ ಕೊರತೆ: ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿವೇಶನದಲ್ಲೂ ಜಂಟಿಯಾಗಿ ಹೋರಾಟ ನಡೆಸುವ ಬಗ್ಗೆ ಮಾತುಗಳನ್ನಾಡಿದ್ದರೂ ಅಷ್ಟರ ಮಟ್ಟಿಗೆ ಹೊಂದಾಣಿಕೆ ಕಂಡು ಬರಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದೆರಡು ದಿನ ನಾಮ್‌ಕೇವಾಸ್ತೆ ಎಂಬಂತೆ ಕಲಾಪಕ್ಕೆ ಹಾಜರಾಗಿದ್ದರು. ಬೆಂಗಳೂರಲ್ಲಿ ಸರ್ಕಾರ ವಿರುದ್ಧ ಹರಿಹಾಯ್ದಿದ್ದ ಕುಮಾರಸ್ವಾಮಿ ಸದನ ದಲ್ಲಿ ದಾಖಲೆ ಸಮೇತ ಹಗರಣ ಗಳನ್ನು ಬಯಲು ಮಾಡುವ ನಿರೀಕ್ಷೆ ಸುಳ್ಳಾಗಿದ್ದು, ಸದನದಲ್ಲಿಯೂ ಮಹತ್ವದ ವಿಷಯಗಳನ್ನು ಪ್ರಸ್ತಾಪ ಮಾಡುವ ನಿರೀಕ್ಷೆಯು ಹುಸಿಯಾಯಿತು. 

ಎದ್ದು ಕಂಡ ಸುನಿಲ್ ಪ್ರಭಾವ: ಇನ್ನು, ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ಅವರಾಗಿದ್ದರೂ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಪ್ರಭಾವ ಎದ್ದು ಕಾಣುತ್ತಿತ್ತು. ಸಭಾತ್ಯಾಗದಂತಹ ಮಹತ್ವದ ತೀರ್ಮಾ ನವನ್ನು ಕೂಡ ಸುನಿಲ್ ಕುಮಾರ್ ತೆಗೆದು ಕೊಂಡರು. ಮೇಲಾಗಿ ಕೆಲ ಬಾರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಸುನೀಲ್‌ಕುಮಾರ್‌ ಮಾಡಿದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಭಾಧ್ಯಕ್ಷ ಸ್ಥಾನದ ಕುರಿತು ನೀಡಿರುವ ಹೇಳಿಕೆಯನ್ನು ಮುಂದಿಟುಕೊಂಡು ಸರ್ಕಾರವನ್ನು ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ಮಾಡಿದರೂ ಅದು ಅದಕ್ಕೇ ತಿರುಗುಬಾಣವಾಯಿತು. 

ಸಚಿವ ಜಮೀರ್ ಅಹ್ಮದ್ ಖಾನ್ ವಿಷಯದಲ್ಲಿ ಬಾವಿಗಿಳಿದು ಧರಣಿ ನಡೆಸಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಲು ತೀರ್ಮಾನಿಸಲಾಯಿತು. ಆದರೆ, ಸರ್ಕಾರವೇ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತು. ಇಡೀ ದಿನ ಬಾವಿಯಲ್ಲಿ ಧರಣಿ ನಡೆಸಲು ಬಿಟ್ಟು ಕಲಾಪವನ್ನು ನಡೆಸಿತು. ಧರಣಿ ನಿರತ ಬಿಜೆಪಿ ಸದಸ್ಯರು ದಿನವಿಡೀ ನಿಂತುಕೊಂಡು ಕಾಲು ನೋಯಿಸಿಕೊಂಡರು. ಇನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ವಿರುದ್ಧದ ಸಿಬಿಐ ತನಿಖೆ ಕೈಬಿಟ್ಟಿರುವ ವಿಚಾರವನ್ನು ಪ್ರಸ್ತಾಪಿಸಲು ಹೆಣೆದಿದ್ದ ತಂತ್ರವೂ ಫಲ ನೀಡಲಿಲ್ಲ. ಹೀಗಾಗಿ ಈ ಬಾರಿಯ ಬೆಳಗಾವಿಯ ಅಧಿವೇಶನ ಹೆಚ್ಚಿನ ಸದ್ದು ಮಾಡಲೇ ಇಲ್ಲ. 

ಸಂಸದ ಪ್ರತಾಪ್‌ ಸಿಂಹ ಅಪ್ಪಟ ಹಿಂದುತ್ವವಾದಿ: ಕೆ.ಎಸ್.ಈಶ್ವರಪ್ಪ

ಅಭಿವೃದ್ಧಿ ವಿಚಾರವಾಗಿ ಹೆಚ್ಚಾಗಿ ಚರ್ಚೆಗಳು ನಡೆಯಲಿಲ್ಲ. ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಸಲಾಯಿತಾದರೂ ಕೆಲವರನ್ನು ಹೊರತುಪಡಿಸಿದರೆ ಹೇಳಿಕೊಳ್ಳುವಂತಹ ಸಲಹೆಗಳನ್ನು, ಒತ್ತಾಯಗಳನ್ನು ಮಾಡುವಲ್ಲಿ ಪ್ರತಿಪಕ್ಷಗಳು ಪ್ರಯತ್ನ ಮಾಡಿಲ್ಲ. ಆಸಕ್ತಿ, ಪೂರ್ವ ತಯಾರಿಯು  ಹೊಸ ಶಾಸಕರಲ್ಲಿ ಕಂಡು ಬರಲಿಲ್ಲ.

Follow Us:
Download App:
  • android
  • ios